ಕಾವೇರಿಗೆ ಬೆಂಕಿ ಬಿದ್ದಾಗ ಶೆಟ್ಟರ್ ಏನು ಮಾಡಬೇಕಿತ್ತು

What Jagadish Shettar should have done
ಬೆಂಗಳೂರು, ಅ. 1 : ಅಸ್ಸಾಂ ಯವಕರು ಬೆಂಗಳೂರಿನಿಂದ ಗುಳೆ ಎದ್ದು ಹೊರಟಾಗ ಎದ್ದುಬಿದ್ದು ಸ್ಟೇಷನ್ನಿಗೆ ಹೋಗಿ ಅವರ ಮನವೊಲಿಸಲು ಯತ್ನಿಸಿದ್ದ ಮಿನಿಸ್ಟರುಗಳ್ಯಾರಾದರೂ ಕಾವೇರಿ ಕಣಿವೆ ಹೊತ್ತಿ ಉರಿಯುತ್ತಿರುವಾಗ, ಕಾವೇರಿಯನ್ನು ಕಳೆದುಕೊಳ್ಳುವ ದುಃಖದಲ್ಲಿರುವ ರೈತರನ್ನು ಸಮಾಧಾನಿಸಲು ಮಂಡ್ಯಕ್ಕೆ ಹೋಗಿದ್ದಾರಾ?

ಸರ್ವಪಕ್ಷಗಳ ಸಭೆ ನಡೆಸಿ, ಸುಪ್ರೀಂ ಕೋರ್ಟ್ ಕೋಪಿಸಿಕೊಳ್ಳಬಾರದು ಅಥವಾ ಕಾನೂನು ಉಲ್ಲಂಘಿಸಬಾರದು ಎಂಬ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಟ್ಟು ನಿರಾಳರಾಗಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈಗ ಎಲ್ಲಿದ್ದಾರೆ? ಕಾವೇರಿಗಾಗಿ ಎಂಥ ಹೋರಾಟಕ್ಕೂ ಸಿದ್ಧ, ಹನಿ ನೀರನ್ನೂ ಬಿಡುವುದಿಲ್ಲ ಎಂದು ರೋಷಾವೇಶದಿಂದ ಹೇಳಿಕೆ ನೀಡಿದ್ದ ನೀರಾವರಿ ಸಚಿವರು ಎಲ್ಲಿ? ಆಡಳಿತ ಪಕ್ಷಗಳ ಮೇಲೆ ಗೂಬೆ ಕೂರಿಸುತ್ತ ಹೇಳಿಕೆ ಮೇಲೆ ಹೇಳಿಕೆ ನೀಡುತ್ತಿರುವ ವಿರೋಧಪಕ್ಷದ ನಾಯಕರು ಎಲ್ಲಿ?

ಒಬ್ಬರಾದರೂ ರೈತರ ಬಳಿಗೆ ಹೋಗಿದ್ದಾರಾ? ಹೋಗಲಿ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ, ಕರ್ನಾಟಕದಲ್ಲಿ ರೈತರ ಪಕ್ಷ ಸ್ಥಾಪಿಸಬೇಕೆಂದು ಢಾಣಾಡಂಗುರ ಸಾರಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿಗೆ ಹೋಗಿದ್ದಾರಾ? ಎಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು? ಎಲ್ಲಿ ಎಚ್.ಡಿ. ಕುಮಾರಸ್ವಾಮಿ? ಎಲ್ಲಿ ಡಾ. ಪರಮೇಶ್ವರಪ್ಪ? ಎಲ್ಲಿ ಉಗ್ರಪ್ಪ? ಎಲ್ಲಿ ಶೋಭಾ ಕರಂದ್ಲಾಜೆ? ಎಲ್ಲಿ ಮಂಡ್ಯದ ಗಂಡು ಅಂಬರೀಷ್?

ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ ಕೋಪೋದ್ರಿಕ್ತರಾಗಿರುವ ಮಂಡ್ಯದ ರೈತರು ಪ್ರತಿದಿನ ರಸ್ತೆಗಿಳಿದು, ಜಯಲಲಿತಾ ಪ್ರತಿಕೃತಿ ದಹಿಸುತ್ತ, ರಸ್ತೆ ತಡೆ ಮಾಡುತ್ತ, ರೈಲು ಸಂಚಾರಕ್ಕೆ ತಡೆಯೊಡ್ಡುತ್ತ ಪ್ರತಿಭಟನೆಯಲ್ಲಿ ಕುಳಿತಿದ್ದಾರೆ. ಇಂಥ ಪ್ರತಿಭಟನೆಯಿಂದ ಅವರಿಗೆ ಅನುಕೂಲವಾಗುತ್ತದಾ? ತಮಿಳುನಾಡಿಗೆ ಕಾವೇರಿ ಹರಿಯಬಿಡುವುದನ್ನು ರಾಜ್ಯ ನಿಲ್ಲಿಸುತ್ತದಾ? ಸಾಧ್ಯವೇ ಇಲ್ಲ. ಈ ಪ್ರತಿಭಟನೆಗಳಿಂದ ರೈತರ ಗಂಟಲು ಹರಿದುಹೋಗುತ್ತಿದೆಯೇ ವಿನಃ ಕಾವೇರಿ ಹರಿಯುವುದನ್ನು ನಿಲ್ಲಿಸಿಲ್ಲ. ಇದೇ ವಿಪರ್ಯಾಸ.

ಶೆಟ್ಟರ್ ಏನು ಮಾಡಬೇಕಿತ್ತು? : ಸದ್ಯಕ್ಕೆ ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಜಗದೀಶ್ ಶೆಟ್ಟರ್ ಇಂಥ ಸಂದರ್ಭದಲ್ಲಿ ಏನು ಮಾಡಬೇಕಿತ್ತು? ಉಡುಪಿಯಲ್ಲಿ ಲಾಸಿಕ್ ಯಂತ್ರ ಉದ್ಘಾಟನೆ, ಅಮಾಸೆಬೈಲು ಗ್ರಾಮ ಪಂಚಾಯತ್ ಕಾಮಗಾರಿಗಳ ಶಂಕುಸ್ಥಾಪನೆ, ಕುಂಜಿಬೆಟ್ಟುನಲ್ಲಿ ವಸತಿ ನಿಲಯಗಳ ಉದ್ಘಾಟನೆ, ವಾರ್ತಾ ಭವನ ಉದ್ಘಾಟನೆ, ಪೊಲೀಸ್ ಸಂಚಾರ ಸಂಕೀರ್ಣದ ಶಿಲಾನ್ಯಾಸ, ಭುಜಂಗ ಪಾರ್ಕ್ ಉದ್ಘಾಟನೆ, ಪುರಭವನ ಉದ್ಘಾಟನೆಯಲ್ಲಿ ತೊಡಗಿರುವ ಶೆಟ್ಟರ್ ಅವರು ಇಂದು ಎಲ್ಲಿರಬೇಕಿತ್ತು?

ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದೇ ನಿಜವಾಗಿದ್ದರೆ, ನಿಜಾಂಶವನ್ನು ಮಂಡ್ಯ, ಮೈಸೂರು, ಚಾಮರಾಜನಗರ ರೈತರಿಗೆ ತಿಳಿಯಹೇಳಿ, ಅವರಿಗೆ ಪರಿಸ್ಥಿತಿಯ ಮತ್ತು ಕಾನೂನು ಸಮರದ ಮನವರಿಕೆ ಮಾಡಿಕೊಟ್ಟು, ತಾವು ಅವರೊಂದಿಗ್ಗೇವೆ ಎಂದು ರೈತರಲ್ಲಿ ನೈತಿಕ ಧೈರ್ಯ ತುಂಬಿ, ಅವರನ್ನು ಉದ್ದೇಶಿಸಿ ನಾಲ್ಕು ಮಾತನಾಡಿದ್ದರೆ ಜಗದೀಶ್ ಶೆಟ್ಟರ್ ನಿಜಕ್ಕೂ ರೈತರ ಮನವನ್ನು ಗೆಲ್ಲುತ್ತಿದ್ದರು. ಮಮತಾ ಬ್ಯಾನರ್ಜಿಯಂಥ ನಾಯಕಿ ಜನರಿಗೆ ಹತ್ತಿರವಾಗಿರುವುದು ಇಂಥ ನಡೆಗಳಿಂದಲೇ. ಆದರೆ, ಜಗದೀಶ್ ಶೆಟ್ಟರ್ ಅವರು ಜಗದೀಶ್ ಶೆಟ್ಟರ್! ಸದ್ಯಕ್ಕೆ ಅವರು ಉಡುಪಿ ಪ್ರವಾಸದಲ್ಲಿದ್ದಾರೆ ಡಿಸ್ಟರ್ಬ್ ಮಾಡಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+