ಜೆಡಿಎಸ್ ಶಾಸಕ/ಸಂಸದರಿಂದ ಕಾವೇರಿದ ರಾಜೀನಾಮೆ

ಇದೇ ವೇಳೆ, ಮಂಡ್ಯದ ಸಂಸದ ಚೆಲುವರಾಯಸ್ವಾಮಿ ಅವರು ಸಹ ರಾಜೀನಾಮೆ ಸಲ್ಲಿಸಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಲೋಕಸಭೆ ಸ್ಪೀಕರ್ ಗೆ ರವಾನಿಸುವಂತೆ ಸ್ವಾಮಿಗೆ ಮನವಿ ಮಾಡಿದ್ದಾರೆ. ಜತೆಗೆ, ಅಗತ್ಯಬಿದ್ದಲ್ಲಿ ಖುದ್ದಾಗಿ ತಾವೂ (ಬೆಂಗಳೂರು ಗ್ರಾಮಾಂತರ ಸಂಸತ್ ಸ್ಥಾನಕ್ಕೆ) ರಾಜೀನಾಮೆ ನೀಡುವುದಾಗಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಇದೀಗ ತಾನೇ ಘೋಷಿಸಿದ್ದಾರೆ. ನಾಳೆ ಜೆಡಿಎಸ್ ಶಾಸಕಾಂಗ ಸಭೆ ಕರೆದು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.
ಜೆಡಿ ಎಸ್ ಗೆ ರೈತರ ಹಿತಾಸಕ್ತಿ ಮುಖ್ಯ: ಮಂಡ್ಯದ ಕಾವೇರಿ ಹಿತ ರಕ್ಷಣಾ ವೇದಿಕೆಯ ಒತ್ತಾಸೆಯಂತೆ ತಮ್ಮ ಶಾಸಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಗತ್ಯಬಿದ್ದಲ್ಲಿ ರಾಜ್ಯದ ಇತರೆ ಭಾಗದ ಶಾಸಕರೂ ರಾಜೀನಾಮೆ ನೀಡಲು ಸಿದ್ಧವಾಗಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಜೆಡಿ ಎಸ್ ಗೆ ರೈತರ ಹಿತಾಸಕ್ತಿ ಮುಖ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕುತೂಹಲದ ಸಂಗತಿಯೆಂದರೆ ತಮಿಳುನಾಡಿಗೆ ನೀರು ಹಂಚಿಕೆ ಸಂಬಂಧ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮೊನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಅಣ್ಣ ರೇವಣ್ಣ ಹಿತನುಡಿ ಹೇಳಿದ್ದರೆ ಮಾರನೆಯ ದಿನವೇ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡು ಸರಕಾರದ ವೈಫಲ್ಯದಿಂದಾಗಿ ತಮಿಳುನಾಡಿಗೆ ನೀರು ಬಿಡುವಂತಾಗಿದೆ ಎಂದು ಕಿಡಿಕಾರಿದ್ದರು.
ಇದರಿಂದ ಕಾವೇರಿ ವಿಚಾರದಲ್ಲಿ ಮೈಸೂರು/ಮಂಡ್ಯ ಭಾಗದಲ್ಲಿ ಪ್ರಮುಖ ಪಕ್ಷವಾದ ಜೆಡಿಎಸ್ ಪಕ್ಷದ ನಿಲುವೇನು? ಎಂಬುದು ಗೊಂದಲದ ಗೂಡಾಗಿತ್ತು. ಇನ್ನು ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಹರಿಸಿದ್ದರು. ಇಂದು ಸಾಕ್ಷಾತ್ ಅವರೇ ಹಾಲಿ ಪ್ರಧಾನಿಯನ್ನು ಇಂದು ಬೆಳಗ್ಗೆ ಭೇಟಿ ಮಾಡಿ ವಸ್ತುಸ್ಥಿತಿಯನ್ನು ವಿವರಿಸಿ, 'ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ ಗುರುಗಳೇ' ಎಂದು ಪ್ರಧಾನಿ ಸಿಂಗ್ ಅವರನ್ನು ಕೈಹಿಡಿದು ಕೇಳಿಕೊಂಡಿದ್ದಾರೆ.
ಇಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಕುಮಾರಸ್ವಾಮಿ ಅವರು 'ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ಪ್ರಧಾನಿ ಅವರು ವಸ್ತುಸ್ಥಿತಿಯನ್ನು ಅರಿಯದೆ ತಮಿಳುನಾಡು ಪರ ಆದೇಶ ಹೊರಡಿಸಿರುವುದು ತಪ್ಪು. ಪ್ರಧಾನಿ ಮಧ್ಯ ಪ್ರವೇಶಿಸಬೇಕು' ಎಂದು ಹೇಳಿದ್ದಾರೆ.












Click it and Unblock the Notifications