ಗಲಭೆಯಲ್ಲಿ ಯುವಕ ಸಾವು, ಬೆಳಗಾವಿ ಬಂದ್

ಸೋಮವಾರ(ಆ.27) ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಬೆಳಗಾವಿ ನಗರ, ಶಹಾಪುರ ಮುಂತಾದೆಡೆ ಸೋಮವಾರ ಸಂಜೆ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಆಗಿದ್ದೇನು?: ಭಾನುವಾರ ರಾತ್ರಿ 10.30ರ ಸುಮಾರಿಗೆ ಶಹಾಪುರದ ದೇವಾಂಗನಗರದ ವಿಷ್ಣು ಗಲ್ಲಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ನಡುವೆ ಗಲಾಟೆ ಆರಂಭವಾಗಿದೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಯುವಕನೊಬ್ಬನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಗಾಯಗೊಂಡಿದ್ದ 28 ವರ್ಷದ ಯುವಕ ಆಶೀಸ್ ಮಳಗಾಂವಕರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಘಟನೆ ನಂತರ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದ ಪೊಲೀಸರು ಸುಮಾರು 15 ಜನರನ್ನು ಬಂಧಿಸಿದ್ದರು.
ಲೋಕಾಮಾನ್ಯ ತಿಲಕ ಕೋ ಆಪರೇಟಿವ್ ಸೊಸೈಟಿಯವರು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯೆ ಶಿವಾಜಿ ಪ್ರತಿಮೆ ಕಾಣಿಸಿದೆ. ಶಿವಾಜಿ ಪುತ್ಥಳಿಗೆ ನಮಸ್ಕರಿಸಿ ಜೈ ಕಾರ ಹಾಕಿ ವಿದ್ಯಾರ್ಥಿಗಳು ಅಲ್ಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಇದಕ್ಕೆ ಮತ್ತೊಂದು ಗುಂಪು ಆಕ್ಷೇಪಿಸಿದೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ಆರಂಭವಾಗಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಎರಡು ಇಂಡಿಕಾ ಕಾರುಗಳ ಗಾಜುಗಳು ಪುಡಿ ಪುಡಿಯಾಗಿದೆ. ಸಮೀಪದ ಮನೆಗಳ ಕಿಟಕಿ ಗಾಜುಗಳು ಒಡೆದಿದೆ.
ಈ ಘಟನೆಯಲ್ಲಿ ಆಶೀಶ್ ಅಲ್ಲದೆ ಸಮೀರ್ ಮಾರಿಹಾಳ ಎಂಬ ಯುವಕ ಕೂಡಾ ತೀವ್ರವಾಗಿ ಗಾಯಗೊಂಡಿದ್ದು ಕೆಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಎಸ್ ಪಿ ಸಂದೀಪ್ ಪಾಟೀಲ್ ಆಗಮಿಸಿ, ಪರಿಶೀಲಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications