ಟಿಟಿಡಿ ಅಧ್ಯಕ್ಷ ಕನುಮೂರಿ ಬಾಪಿರಾಜು ಮರು ಆಯ್ಕೆ

ಮುಖ್ಯಮಂತ್ರಿ ಎನ್ ಕಿರಣ್ ಕುಮಾರ್ ರೆಡ್ಡಿ ಹಾಲಿ ಮಂಡಳಿಯ ಅಧ್ಯಕ್ಷರನ್ನೇ ಮತ್ತೊಂದು ಅವಧಿಗೆ ನೇಮಕ ಮಾಡುವುದರ ಜತೆಗೆ ಇನ್ನೂ ಒಂದು ವರ್ಷ ಅವರ ಸೇವಾವಧಿಯನ್ನು ವಿಸ್ತರಿಸಿದ್ದಾರೆ. ಮಂಡಳಿಯ ಸದಸ್ಯರ ಸ್ಥಾನಗಳೂ ಅಬಾಧಿತವಾಗಿವೆ.
ಹಿಂದಿನ ಸುದ್ದಿ: ತಿರುಮಲ ತಿರುಪತಿ ದೇವಸ್ಥಾನದ ಧರ್ಮದರ್ಶಿಗಳ ಮಂಡಳಿಯ ಚುಕ್ಕಾಣಿ ಹಿಡಿಯಲು ಭಾರಿ ಪೈಪೋಟಿ ನಡೆದಿದೆ. ಪ್ರಸ್ತುತ, ಕಾಂಗ್ರೆಸ್ ಸಂಸದ ಕನುಮೂರಿ ಬಾಪಿರಾಜು ನೇತೃತ್ವದ ಟ್ರಸ್ಟ್ ಬೋರ್ಡಿನ ಅವಧಿ ಇದೇ 25ಕ್ಕೆ ಮುಗಿಯುತ್ತದೆ.
ಈ ಮಧ್ಯೆ, ಕಾಂಗ್ರೆಸ್ ಸಂಸದ ಮತ್ತು ಟಿಟಿಡಿ ಮಾಜಿ ಅಧ್ಯಕ್ಷ, ಕರ್ನಾಟಕದ ಆದಿಕೇಶವಲು ನಾಯ್ಡು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ ಟಿಟಿಡಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯಿರುವುದರಿಂದ ಆಯಕಟ್ಟಿನ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗುವುದು ಆಡಳಿತಾರೂಢ ಕಾಂಗ್ರೆಸ್ಸಿನ ಹೈಕಮಾಂಡಿನ ಸೂಚನೆಯ ಮೇರೆಗೆ! ಆದರೆ ಶಾಸ್ತ್ರಕ್ಕೆ ಆಂಧ್ರದ ರಾಜ್ಯಪಾಲರು ಅಧ್ಯಕ್ಷ ಮತ್ತು ಮಂಡಳಿಯ ನೇಮಕಕ್ಕೆ ಅಂಕಿತ ಮುದ್ರೆ ಒತ್ತುತ್ತಾರೆ.
ಒಂದು ವರ್ಷ ಅವಧಿಗೆ ನೇಮಗೊಳ್ಳುವ ಈ ಟ್ರಸ್ಟ್ ಬೋರ್ಡಿನ ಕಾಲಾವಧಿ ಒಂದು ವರ್ಷದ್ದಾಗಿರುತ್ತದೆ. ಮುತ್ಯಂ ರೆಡ್ಡಿ, ರಾವುತು ಸೂರ್ಯಪ್ರಕಾಶ ರಾವು, ಪಾಮುಲ ರಾಜೇಶ್ವರಿ ದೇವಿ (ಎಲ್ಲರೂ ಶಾಸಕರು) ಮತ್ತು ಇತರೆ ಮೂವರು ಅಧಿಕಾರಿಗಳು ಇದ್ದಾರೆ.
ಈ ಹಿಂದೆ ಟ್ರಸ್ಟ್ ಮಂಡಳಿಯ ಅಧಿಕಾರಾವಧಿ 2 ವರ್ಷದ್ದಾಗಿತ್ತು. ಆದರೆ ಮುಖ್ಯಮಂತ್ರಿ ಎನ್ ಕಿರಣ್ ಕುಮಾರ್ ರೆಡ್ಡಿ ಹಾಲಿ ಮಂಡಳಿಯ ಅವಧಿಯನ್ನು ಒಂದೇ ವರ್ಷಕ್ಕೆ ಮೊಟಕುಗೊಳಿಸಿದರು.
ಮೂಲಗಳ ಪ್ರಕಾರ ಬಾಪಿರಾಜು ಅವರು ಪಟ್ಟ ಉಳಿಸಿಕೊಳ್ಳಲು ತಮ್ಮ ಸರ್ವಶಕ್ತಿಯನ್ನೂ ವಿನಿಯೋಗಿಸುತ್ತಿದ್ದಾರೆ. ದೆಹಲಿ ಮತ್ತು ಹೈದರಾಬಾದಿನಲ್ಲಿನ ತಮ್ಮ ಸ್ನೇಹ ಸೇತುವೆಗಳನ್ನು ಸದೃಢಗೊಳಿಸಿದ್ದಾರೆ. ಮುಖ್ಯವಾಗಿ ಹಾಲಿ ಒಂದು ವರ್ಷದ ಅವಧಿಯನ್ನು 2 ವರ್ಷಕ್ಕೆ ವಿಸ್ತರಿಸುವಂತೆ ಅವರು ದುಂಬಾಲು ಬಿದ್ದಿದ್ದಾರೆ.
ಮುಜರಾಯಿ ಇಲಾಖೆಯ ಕಂದಾಯ ಕಾರ್ಯದರ್ಶಿ ಚಿತ್ರಾ ರಾಮಚಂದ್ರನ್ ಅವರು ಟಿಟಿಡಿ ಟ್ರಸ್ಟ್ ಬೋರ್ಡನ್ನು ಪುನಾರಚಿಸುವ ಸಂಬಂಧ ಕಡತವನ್ನು ಆಖೈರುಗೊಳಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಮೊನ್ನೆ ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ಮಂಡಳಿಯ ಕೊನೆಯ ಸಭೆ ನಡೆಸಿದ್ದಾರೆ.
ಅಧ್ಯಕ್ಷಗಾದಿಗಾಗಿ ಆದಿಕೇಶವಲು ಮಾದರಿಯಲ್ಲಿ ಟಿಎಸ್ಸಾರ್ ಸಹ (ಸಿನಿ ದಿಗ್ಗಜ ಟಿಎಸ್ ಸುಬ್ಬರಾಮಿ ರೆಡ್ಡಿ) ಲಾಬಿ ನಡೆಸುತ್ತಿರುವುದು ಕುತೂಹಲಕಾರಿಯಾಗಿದೆ.












Click it and Unblock the Notifications