ರಾಜೀನಾಮೆ: ಸಚಿವರದ್ದಾಯ್ತು, ಮುಂದೆ ಶಾಸಕರ ಸರದಿ

ನಿನ್ನೆ ಶುಕ್ರವಾರ ಸಂಜೆ 9 ಶಾಸಕರು ಮತ್ತು ಇಂದು ಮಾನಸ ಸರೋವರದಿಂದ ವಾಪಸಾಗುತ್ತಿದ್ದಂತೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ರಾಜೀನಾಮೆ ಒಗಾಯಿಸಲಿರುವ ಶೋಭಾ ಕರಂದ್ಲಾಜೆ ಅವರ ರಾಜೀನಾಮೆ ಪ್ರಹಸನ ಒಂದು ಹಂತಕ್ಕೆ ಮುಗಿಯಲಿದೆ.
ರಾಜಿನಾಮೆ ಸಲ್ಲಿಸಿರುವ 9 ಸಚಿವರು-
ಜಗದೀಶ್ ಶೆಟ್ಟರ್, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಂ.ಪಿ.ರೇಣುಕಾಚಾರ್ಯ, ರೇವೂನಾಯಕ್ ಬೆಳಮಗಿ ಮತ್ತು ರಾಜೂಗೌಡ.
ಆದರೆ ಇದಕ್ಕೆ ದೆಹಲಿ ಬಿಜೆಪಿ ವರಿಷ್ಠರು ಮತ್ತು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಮತ್ತು ಖುದ್ದು ಸದಾನಂದ ಗೌಡ ಸಾರಥ್ಯದಲ್ಲಿ ಯಡಿಯೂರಪ್ಪ ಅವರನ್ನು ವಿರೋಧಿಸುವ ಬಣ ಸಚಿವರ ರಾಜೀನಾಮೆ ಬೆದರಿಕೆಗೆ ಒಂದಿನಿತೂ ಅಲುಗಾಡದಿರುವುದನ್ನು ಕಂಡ ಯಡಿಯೂರಪ್ಪ ಬಣ ಹೊಸ ವರಸೆ ಶುರುವಿಟ್ಟುಕೊಂಡಿದೆ.
ಆಷಾಢದ ಅಶುಭ ಎಂಬುದನ್ನೂ ಲೆಕ್ಕಿಸದೆ ಬಂಡೆಯಂತೆ ಉಳಿದಿರುವ ಸದಾನಂದ ಸರಕಾರವನ್ನು ಉರುಳಿಸುವ ಅಂತಿಮ ಯತ್ನಕ್ಕೆ ಕೈಹಾಕಲು ನಿರ್ಧರಿಸಿಚದೆ. ಆ ಸಲುವಾಗಿ ಮುಂದೆ ಕಂತಿನಲ್ಲಿ ಶಾಸಕರುಗಳು ರಾಜೀನಾಮೆ ಪತ್ರವನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ.
ಯಾವುದಕ್ಕೂ ಇಂದು ಶನಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಸ್ಪಷ್ಟ ಚಿತ್ರಣ ಸಿಗುವ ಅಂದಾಜಿದೆ. ಮುಖ್ಯಮಂತ್ರಿ ಸದಾನಂದ ಗೌಡರು ಈಗಾಗಲೇ ತಮ್ಮ ಕೈ ತಲುಪಿರುವ ಸಚಿವರ ರಾಜೀನಾಮೆ ಪತ್ರವನ್ನು 'ಬಿಗಿಮುಷ್ಠಿ'ಯಲ್ಲಿ ಹಿಡಿದು ರಾಜಭವನದತ್ತ ಹೆಜ್ಜೆ ಹಾಕಲಿದ್ದಾರೆ. ಅಲ್ಲಿ ಏನಾಗುವುದೋ ಎಂಬುದನ್ನು ಅವಲಂಬಿಸಿ, ರಾಜ್ಯ ಬಿಜೆಪಿಯ ಬೃಹನ್ನಾಟಕ ಮತ್ತೊಂದು ಮಜಲಿಗೆ ಜಾರಿಕೊಳ್ಳಲಿದೆ. ತಾಜಾ ಸುದ್ದಿಗಾಗಿ 'ದಟ್ಸ್ ಕನ್ನಡ'ದತ್ತ ಒಂದು ಕಣ್ಣು ನೆಟ್ಟಿರಿ.












Click it and Unblock the Notifications