ಬಚ್ಚೇಗೌಡ್ರು ಕಾಂಗ್ರೆಸ್ಸಿಗೋ, ಜೆಡಿಎಸ್ಸಿಗೋ?

ಚುನಾವಣೆ ಸನಿಹದಲ್ಲಿರುವಾಗ ಹೆಚ್ಚು ಗೊಂದಲ ಮಾಡಿಕೊಳ್ಳದೇ ಈಗಲೇ ಬೇರೆ ಪಕ್ಷವನ್ನು ಅಪ್ಪಿಕೊಳ್ಳುವುದು ಸುರಕ್ಷಿತ ಎಂದು ಭಾವಿಸಿರುವ ಬಚ್ಚೇಗೌಡರು ಕಾಂಗ್ರೆಸ್ ಬಾಗಿಲು ಬಡಿಯಲು ಚಿಂತಿಸುತ್ತಿದ್ದಾರೆ. JDSನಿಂದ ಹೊರಬಂದು BJPಯಲ್ಲಿ ರಾಜಕೀಯ ನೆಲೆಕಂಡುಕೊಂಡು ಪ್ರಮುಖ ಖಾತೆಯ ಸಚಿವರೂ ಆದ ಬಚ್ಚೇಗೌಡರು, ಪಕ್ಷದಲ್ಲಿನ ಭಿನ್ನಮತದಿಂದ ಕಂಗಾಲಾಗಿದ್ದಾರೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ, ಸದಾನಂದ ಗೌಡ, ಈಶ್ವರಪ್ಪ, ಜಾರಕಿಜೊಳಿ ಬಣಗಳು ತಮ್ಮ ಪ್ರತಿಷ್ಠ ಮೆರೆಯುತ್ತಿವೆ. ಈ ಜಂಜಾಟದ ನಡುವೆ ತಟಸ್ಥರಾಗಿರುವ ಗೌಡರು ಇದೀಗ ಪಕ್ಷ ಬದಲಾಯಿಸುವ ಹಂತ ತಲುಪಿದ್ದಾರೆ. ಉದ್ಯಮಿಗಳ ಸುರಕ್ಷತೆಗಾಗಿ ಇ-ಸುರಕ್ಷತೆ ಯೋಜನೆಗೆ ಇಂದು ವಿಕಾಸಸೌಧದಲ್ಲಿ ಆನ್ ಲೈನ್ ಟಚ್ ಕೊಟ್ಟು, ಪಕ್ಷಕ್ಕೆ ವಿದಾಯ ಹೇಳುವ ಸಾಧ್ಯತೆಗಳು ದಟ್ಟವಾಗಿವೆ.
ಬಚ್ಚೇಗೌಡರು ಕಾಂಗ್ರೆಸ್ಸಿನ ಪ್ರಮುಖ ನಾಯಕರನ್ನು ತೆರೆಮರೆಯಲ್ಲಿ ಭೇಟಿಯಾಗಿ, ಸೂಕ್ಷ್ಮವಾಗಿ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ನಾಯಕರಿಂದ ಇನ್ನೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ, JDS ನತ್ತ ಹೊರಳುವ ಇರಾದೆಯೂ ವ್ಯಕ್ತಪಡಿಸಿದ್ದಾರೆ ಎಂದು ಬಚ್ಚೇಗೌಡರ ಆಪ್ತ ಮೂಲಗಳು ಪಿಸುಗುಟ್ಟಿವೆ. ಬಚ್ಚೇಗೌಡರು ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಪಶು ಸಂಗೋಪನೆ ಹಾಗೂ ಎಚ್ ಡಿ ದೇವೇಗೌಡರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.












Click it and Unblock the Notifications