ಕಾಲ್ ಸೆಂಟರ್ ಯುವತಿ ಸಾಮೂಹಿಕ ಬಲಾತ್ಕಾರ

ಘಟನೆಯ ನಂತರ ಪೊಲೀಸರ ಮೊರೆ ಹೋಗಲು ಬಾಧಿತ ಮಹಿಳೆ ಮತ್ತು ಆಕೆಯ ಪತಿ ಹಿಂಜರಿದರಾದರೂ ಆನಂತರ ಧೈರ್ಯ ತಂದುಕೊಂಡು ದೂರು ನೀಡಿದ್ದಾರೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದೆಹಲಿಯ ಬವಾನಾ ಪ್ರದೇಶದಲ್ಲಿ ವಾಸವಾಗಿದ್ದ ಮಹಿಳೆ ಕಾಲ್ ಸೆಂಟರ್ ಕಂಪನಿಯಲ್ಲಿ ಉದ್ಯೋಗ ಸಿಕ್ಕಿತೆಂದು ದಕ್ಷಿಣ ದೆಹಲಿಯ ಬದರಪುರಕ್ಕೆ ಇತ್ತೀಚೆಗೆ ಬಂದಿದ್ದರು. ಅಲ್ಲಿ ಆಕೆಗೆ ಸೂರಜ್ ಎಂಬ ಯುವಕ ಗೆಳೆಯನಾದ. ಇಲ್ಲೇ ಮೋಹನ್ ಕೋಆಪರೇಟೀವ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಒಂದು ಕಂಪನಿಯಿದೆ. ಕಂಪನಿಯ ಬಾಸ್ ನನಗೆ ಚೆನ್ನಾಗಿ ಗೊತ್ತು. ನಿನಗೆ ಅಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಯುವತಿಯನ್ನು ಪುಸಲಾಯಿಸಿದ.
ಆಗರ್ಭ ಶ್ರೀಮಂತನಂತೆ ಪೋಸ್ ಕೊಟ್ಟು, ಜೋರುಜೋರಾಗಿ ಮೊಬೈಲುಗಳಲ್ಲಿ ಮಾತನಾಡುತ್ತಿದ್ದ ಸೂರಜ್ ಗೆ ಯುವತಿ ಮರುಳಾಗಿದ್ದಾಳೆ. ಜತೆಗೆ ಉದ್ಯೋಗದ ಅನಿವಾರ್ಯತೆಯೂ ಕಾಡಿದ್ದು, ಯುವತಿ ಸೂರಜ್ ಒಡ್ಡಿದ ಆಮಿಷಕ್ಕೆ ಬಲಿಯಾಗಿದ್ದಾಳೆ.
ಕೆಲಸದ ಸಂಬಂಧ ಇಂಟರ್ ವ್ಯೂಗೆ ಕರೆದಿದ್ದಾರೆ. ಬಾ ಹೋಗೋಣ ಎಂದು ಸೂರಜ್ ಮೊನ್ನೆ ಭಾನುವಾರ ಸದರಿ ಯುವತಿಯನ್ನು ತನ್ನೊಟ್ಟಿಗೆ ಕರೆದೊಯ್ದಿದ್ದಾನೆ. ಭಾನುವಾರದ ದಿನವಾಗಿದ್ದರಿಂದ ಬದರಪುರ ನಿರ್ಜನವಾಗಿತ್ತು. ಆದರೆ ಅಲ್ಲಿ ಇತರೆ ಮೂವರು ದುಷ್ಕರ್ಮಿಗಳು ಸೂರಜನಿಗಾಗಿ ಕಾಯುತ್ತಿದ್ದರು.
ನಾಲ್ವರೂ ಅಲ್ಲಿ ಜತೆಗೂಡಿದವರೆ ಯುವತಿಯ ಮೇಲೆ ಮುಗಿಬಿದ್ದಿದ್ದಾರೆ. ಕೊನೆಗೆ, ಯಾರಿಗೂ ವಿಷಯ ತಿಳಿಸಬಾರದು ಎಂದು ಯುವತಿಗೆ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ.
ಆದರೆ ಕಷ್ಟಪಟ್ಟು ದೆಹಲಿಯ ಬವಾನಾ ಪ್ರದೇಶಕ್ಕೆ ವಾಪಸಾದ ಮಹಿಳೆ ತನ್ನ ಗಂಡನಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಇಬ್ಬರೂ ಆರಂಭದಲ್ಲಿ ಯಾರಿಗೂ ವಿಷಯ ತಿಳಿಸಲು ಹಿಂಜರಿದರು. ಆದರೆ ಮಂಗಳವಾರ ತುಸು ಧೈರ್ಯ ತಂದುಕೊಂಡು ದೂರು ಕೊಟ್ಟರು.
FIR ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ನಂತರ ಸೂರಜ್ ಮತ್ತು ದೀಪು ಎಂಬಿಬ್ಬರನ್ನು ಬಂಧಿಸಿದ ಪೊಲೀಸರು ಮತ್ತಿಬ್ಬರ ತಲಾಶೆಯಲ್ಲಿದ್ದಾರೆ.












Click it and Unblock the Notifications