ಸಿದ್ದರಾಮಯ್ಯ ನಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ

ಸಿದ್ದರಾಮಯ್ಯ ರಾಜೀನಾಮೆ ನೀಡಿದ ಸುದ್ದಿ ತಿಳಿದಾಕ್ಷಣ ಅವರ ಮನೆಗೆ ತೆರಳಿದ ಮೋಟಮ್ಮ, ಕಾಂಗ್ರೆಸ್ ಪಕ್ಷದಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ. ಮುಂದೆ ನೀವು ಮುಖ್ಯಮಂತ್ರಿ ಕೂಡಾ ಆಗಬಹುದು. ಹಾಗಾಗಿ ನೀವು ನೀಡಿದ ರಾಜಾನಾಮೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಅವರನ್ನು ಮನವಿ ಮಾಡಿದ್ದಾರೆ.
ಮೋಟಮ್ಮ ಅವರ ಮನವಿಗೆ ಸಿದ್ದರಾಮಯ್ಯ ಯಾವ ರೀತಿ ಪ್ರತಿಕ್ರಿಯಿಸಿದರು ಎಂದು ತಿಳಿದು ಬಂದಿಲ್ಲ. ಈ ಮಧ್ಯೆ ಸಿದ್ದರಾಮಯ್ಯ ರಾಜೀನಾಮೆಯಿಂದ ಬೇಸತ್ತ ಅವರ ಬೆಂಬಲಿಗ ಶಾಸಕ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಹರಿಹಾಯ್ದಿದ್ದಾರೆ.
ಚೇಲಾಗಳ ಮಾತಿಗೆ ಕಾಂಗ್ರೆಸ್ ವರಿಷ್ಟರು ಸೊಪ್ಪು ಹಾಕುತ್ತಿರುವುದು ವಿಷಾದನೀಯ. ಅವರ ಮಾತುಗಳಿಂದ ಪಕ್ಷದ ಇಮೇಜ್ ಗೆ ಧಕ್ಕೆ ಆಗುತ್ತದೆ ಎನ್ನುವುದನ್ನು ಹೈಕಮಾಂಡ್ ಅರಿಯಬೇಕು ಎಂದು ಗುತ್ತೇದಾರ್ ವಿಷಾದ ವ್ಯಕ್ತ ಪಡಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಸ್ಥಳೀಯ ನಾಯಕರುಗಳು ಶತಾಯುಗತಾಯು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯವರೇ ಸಿದ್ದು ಜೊತೆ ಸಂಧಾನಕ್ಕೆ ಮುಂದಾಗಬಹುದೇನೋ.
ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಅವರು ತನ್ನ ರಾಜೀನಾಮೆ ಪತ್ರವನ್ನು ಸ್ಪೀಕರ್ ಗೆ ಕಳುಹಿಸಿದ್ದು, ಅದು ಸ್ವೀಕೃತವಾಗಿರುವ ಬಗ್ಗೆ ಇನ್ನು ಸ್ಪಷ್ಟನೆ ಬಂದಿಲ್ಲ.












Click it and Unblock the Notifications