ಪಾಪ, ಯಡಿಯೂರಪ್ಪ ಬಂಟರಿಗೆ ಹೀಗಾಗಬಾರದಿತ್ತು !

ಆ ಚಿನ್ನಕ್ಕಿಂತ ಅಮೂಲ್ಯವಾದ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದರ ಬಗ್ಗೆ ಯಡಿಯೂರಪ್ಪನವರೇನು ತಲೆ ಕೆಡಿಸಿಕೊಂಡಿಲ್ಲ. ಆದರೆ ಅವರ ಪರಮ ನಿಷ್ಠರು ನಿಜಕ್ಕೂ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ.
ವಿಷಯಾ ಏನಪಾ ಅಂದರೆ ಸುಪ್ರೀಂಕೋರ್ಟ್ ಅತ್ತ ಸಿಬಿಐ ತನಿಖೆ ಆದೇಶಿಸಿದ ಇಂಚುಮುಂಚು ರಾಜಕೀಯ ವಿಪ್ಲವ ಸೃಷ್ಟಿಸಲು ಯಡಿಯೂರಪ್ಪ ಒಂದು ರಾಜಕೀಯ ಆಟ ಆಡಿದ್ದರು. ತಮ್ಮ ಆಪ್ತರ ಪಟಾಲಂ ಅನ್ನು ಇದೇ ರೇಸ್ ಕೋರ್ಸ್ ರರಸ್ತೆಯಲ್ಲಿ ಗುಡ್ಡೆಹಾಕಿಕೊಂಡು ಗೊಂಬೆಯಾಟಯಾಡಿದ್ದರು. ಸುಮಾರು 60-70 ಶಾಸಕರು ಅಂದು ಯಜಮಾನರ ಮನೆಯಲ್ಲಿ ಜಮಾಯಿಸಿದ್ದರು.
ಯಜಮಾನರಿಗೆ ತಮ್ಮ ಅಚಲ ನಿಷ್ಠೆ ತೋರುವ ಭರದಲ್ಲಿ ಅಷ್ಟೂ ಮಂದಿ ರಾಜೀನಾಮೆ ಪತ್ರಗಳನ್ನು ಬರೆದುಕೊಟ್ಟಿದ್ದರು (ಯಡಿಯೂರಪ್ಪ ಬಲವಂತವಾಗಿ ಬರೆಸಿಕೊಂಡಿದ್ದರು ಎನ್ನುತ್ತದೆ ಒಂದು ಮೂಲ). ಅದನ್ನು ಮುಂದೆ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಳ್ಳುವುದು ಯಡಿಯೂರಪ್ಪನವರ ದೂರಾಲೋಚನೆಯಾಗಿತ್ತು.
ಹಾಗಾಗಿ ಅದನ್ನೆಲ್ಲ ಅಲ್ಲೇ ಮೂಲೆಯಲ್ಲಿ ನಿಂತಿದ್ದ ಆಳಿಗೆ ಹೇಳಿ, ಅದನ್ನೆಲ್ಲ ಭದ್ರವಾಗಿ ಎತ್ತಿಡು ಎಂದು ಹೇಳಿದ್ದರು. ಮತ್ತು ಅದರ ಬಗ್ಗೆ ಸ್ವತಃ ಯಡಿಯೂರಪ್ಪ ಸೇರಿದಂತೆ ಆ ಪೇಪರುಗಳ ಮೇಲೆ ಸಹಿ ಮಾಡಿದ್ದ ನಿಷ್ಠ ಶಾಸಕರೂ ಮರೆತುಹೋಗಿದ್ದರು. ಆದರೆ ಯಾವುದೋ ಭರದಲ್ಲಿ ಸಿಬಿಐನವರು ನಿನ್ನೆ ಅದನ್ನೂ ಹೊತ್ತೊಯ್ದಿದ್ದಾರೆ. ಇದನ್ನು ಕೇಳಿ ಆ ಶಾಸಕ ಮಹಾಶಯರೆಲ್ಲ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಅತ್ತ ರೇಸ್ ಕೋರ್ಸ್ ರಸ್ತೆಯ ಅಂಗಳದಿಂದ ಏನೋ ಮಾಡಲು ಹೋಗಿ ಏನು ಮಾಡಿದೆ ನೀನು... ಎಂಬ ಹಾಡು ಕೇಳಿಬರುತ್ತಿದೆ.












Click it and Unblock the Notifications