ಬಿಎಸ್‌ವೈಗೆ ಬಹುಪರಾಕ್; ಡಿವಿಎಸ್ ತರಾಟೆಗೆ- ರಾಮುಲು

ಜನಾರ್ದನ ರೆಡ್ಡಿ ಅವರ ಹಾಗೆ ಯಡಿಯೂರಪ್ಪ ಅವರೂ ಯಾವುದೇ ತಪ್ಪು ಮಾಡಿಲ್ಲ. ನಾನು ಅವರೊಂದಿಗೆ ಹತ್ತಿರದಿಂದ ಕೆಲಸ ಮಾಡಿದ್ದೇನೆ. ಯಾರಿಗೇ ಆಗಲಿ ಮೋಸ ಮಾಡಬೇಕು ಎಂಬುದು ಅವರ ಮನಸ್ಸಿನಲ್ಲೂ ಇಲ್ಲ. ಆದರೆ ರಾಷ್ಟ್ರೀಯ ಪಕ್ಷಗಳ ಷಡ್ಯಂತ್ರದಿಂದ ಇಬ್ಬರೂ ಇಂದು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಇವರಿಗೆಲ್ಲ ಜನ ಪಾಠ ಕಲಿಸಲಿದ್ದಾರೆ. ಪ್ರಾದೇಶಿಕ ಪಕ್ಷಗಳು ವಿಜೃಂಭಿಸಲಿವೆ ಎಂದು ಸ್ವಾಭಿಮಾನಿ ರಾಮುಲು ಹೇಳಿದರು.
ಡಿವಿಎಸ್ ಬಾವಿಯೊಳಗಿನ ಕಪ್ಪೆ: ಈ ಮಧ್ಯೆ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಆಪ್ತ ಗೆಳೆಯ ಜನಾರ್ದನ ರೆಡ್ಡಿ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಹಾಲಿ ಮುಖ್ಯಮಂತ್ರಿಯನ್ನು ರಾಮುಲು ತೀವ್ರ ತರಾಟೆಗೆ ತೆಗೆದುಕೊಂಡರು.
'ಮುಖ್ಯಮಂತ್ರಿ ಸದಾನಂದಗೌಡ ಬಾವಿಯೊಳಗಿನ ಕಪ್ಪೆಯಂತೆ. ಬೆಂಗಳೂರೇ ಅವರಿಗೆ ರಾಜ್ಯವಾಗಿ ಕಾಣುತ್ತಿದೆ. ರಾಜ್ಯದ ಇತರ ಭಾಗಗಳ ಜನರ ಸಂಕಷ್ಟ ಅವರಿಗೆ ಅರ್ಥವಾಗುತ್ತಿಲ್ಲ. ಆಡಳಿತ ನಡೆಸಲೂ ಅವರಿಗೆ ಬರುವುದಿಲ್ಲ' ಎಂದು ಕಟುವಾಗಿ ಟೀಕಿಸಿದರು.
'ರಾಜಧಾನಿ ಬಿಟ್ಟು ಕದಲದ ಸ್ಥಿತಿ ಸಿಎಂಗೆ ಇದೆ. ಬರೀ ರಾಜೀನಾಮೆ ಪ್ರಹಸನಗಳು ಕುರ್ಚಿಗಾಗಿ ನಡೆಯುವ ಬದಲು ಜನರ ಸಂಕಷ್ಟ ನಿವಾರಣೆಗೆ ನಡೆಯಬೇಕಿತ್ತು. ರಾಜ್ಯದಲ್ಲಿಯ ದೊಂಬರಾಟಗಳನ್ನು ನೋಡಿದರೆ ಸರ್ಕಾರ ಇದೆಯೇ ಎಂಬಂತಿದೆ ಎಂದು ಕಿಡಿಕಾರಿದರು.
ಪಾದಯಾತ್ರೆಯ 23 ದಿನಗಳಲ್ಲಿ (ಮೇ 16ಕ್ಕೆ) ಜನರ ಕಷ್ಟಗಳ ದರ್ಶನವಾಗಿದೆ. ಜನರ ಮುಖದಲ್ಲಿ ದುಃಖ ಕಳೆದು ನಗು ಮೂಡಿಸಿ, ಕಷ್ಟಗಳ ಪರಿಹಾರವಾಗಲು ಬಿ.ಎಸ್.ಆರ್. ಪಕ್ಷವನ್ನು ಬೆಂಬಲಿಸಿ, ಆಶೀರ್ವದಿಸಬೇಕು. ಕೊಟ್ಟ ಮಾತಿಗೆ ತಪ್ಪಿದರೆ ನೇಣು ಹಾಕಿಕೊಳ್ಳುವೆ ಎಂದು ಶ್ರೀರಾಮಲು ಹೇಳಿದರು.












Click it and Unblock the Notifications