ಭಾರತ್ ಬಂದ್ ಯಶಸ್ವಿ, ಜನ ಜೀವನ ತತ್ತರ

ಬ್ಯಾಂಕಿಂಗ್ ಹಾಗೂ ಸಾರಿಗೆ ವ್ಯವಸ್ಥೆ ಬಹುತೇಕ ಸ್ಥಗಿತಗೊಂಡಿದ್ದು ಜನತೆ ಸಹಿಸಲು ಕಷ್ಟವಾಯಿತು. ಸಿಪಿಎಂ, ಸಿಪಿಎಂ(ಐ), ಎಡಪಕ್ಷ ಹಾಗೂ 10 ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು, ಬ್ಯಾಂಕ್ ನೌಕರರ ಒಕ್ಕೂಟ, ಅಸಂಘಟಿತ ವಲಯದ ಹಲವಾರು ಸಂಘಟನೆಗಳು, ಆಟೋರಿಕ್ಷಾ ಸಂಘ, ವಿದ್ಯಾರ್ಥಿ ಒಕ್ಕೂಟಗಳು ಬಂದ್ ಗೆ ಕರೆ ನೀಡಿದ್ದವು.
ಕರ್ನಾಟಕದಲ್ಲಿ ಯಶಸ್ವಿ: ಹಾಸನ, ಚಿತ್ರದುರ್ಗ, ದಾವಣಗೆರೆ, ಮಂಗಳೂರು, ಉಡುಪಿ, ಕೋಲಾರ, ಬೆಂಗಳೂರಿನಲ್ಲಿ ಬಂದ್ ಬಿಸಿ ಜೋರಾಗಿತ್ತು. ಹಾಸನದ ಸಹ್ಯಾದ್ರಿ ಸರ್ಕಲ್, ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ, ಟೈರ್ ಗೆ ಬೆಂಕಿ ಇಟ್ಟ ಘಟನೆ ದಾಖಲಾಗಿದೆ. ಮಂಗಳೂರಿನಲ್ಲಿ 12 ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಖಾಸಗಿ ಬಸ್ ಗಳು ಕೂಡಾ ಸಂಚಾರ ಕೂಡಾ ಸ್ಥಗಿತಗೊಳಿಸಲಾಯಿತು.
ರಾಜ್ಯದ ಹಲವೆಡೆ ಸ್ವಯಂಪ್ರೇರಿತರಾಗಿ ಅಂಗಡಿ ಮಂಗಟ್ಟು, ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಮಂಗಳವಾರ ನಡೆಯಬೇಕಿದ್ದ ಪ್ರಥಮ ಪಿಯು ಪರೀಕ್ಷೆಯನ್ನು ಮಾ.5ಕ್ಕೆ ಮುಂದೂಡಲಾಯಿತು. ಮೈಸೂರಿನಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿ ಧಾರವಾಡ, ಗುಲ್ಬರ್ಗಾದಲ್ಲೂ ಮುಷ್ಕರಕ್ಕೆ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಬಂದಿಲ್ಲ.
ಉಳಿದಂತೆ ಎಡಪಕ್ಷಗಳು ಪ್ರಾಬಲ್ಯವಿರುವ ಪಶ್ಚಿಮ ಬಂಗಾಳ, ಕೇರಳ, ತ್ರಿಪುರಾ ಮುಂತಾದ ರಾಜ್ಯಗಳಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನವದೆಹಲಿ ಹಾಗೂ ಬಿಜೆಪಿ ಅಧಿಕಾರವಿರುವ ಹಲವು ರಾಜ್ಯಗಳಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಮಿಕರ ಸಮಸ್ಯೆ ಬಗೆಹರಿಸಲು ಸರ್ಕಾರ ಸಿದ್ಧವಿದೆ. ಮಾತುಕತೆಗೆ ಬನ್ನಿ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತೊಮೆ ಸಂಧಾನದ ಆಫರ್ ನೀಡಿದ್ದಾರೆ.












Click it and Unblock the Notifications