ಶ್ರೀರಾಮುಲುಗೆ ಇರುವ ಸ್ವಾಭಿಮಾನ KMF ರೆಡ್ಡಿಗೆ ಏಕಿಲ್ಲ?

ಆದರೆ ಇದೇನಿದು ಕೆಎಂಎಫ್ ಅಧ್ಯಕ್ಷರಾಗಿದ್ದುಕೊಂಡೂ ಪಕ್ಷದ ವಿರುದ್ಧವೇ ಬಿಜೆಪಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಪ್ರಚಾರ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮೂಲ ಬಿಜೆಪಿ ವಾಸಿಗಳು ಗಂಟುಮೋರೆ ಹಾಕಿಕೊಂಡಿದ್ದಾರೆ.
ಬಿಜೆಪಿ ಬೆಂಬಲ ಪಡೆದುಕೊಂಡೇ ಕೆಎಂಎಫ್ ಅಧ್ಯಕ್ಷಗಿರಿಯಂಥ ಪ್ರಮುಖ ಹುದ್ದೆಯಲ್ಲಿ ಮುಂದುವರಿಯುತ್ತಿರುವುದಕ್ಕೆ ಸ್ವತಃ ಸೋಮಶೇಖರ ರೆಡ್ಡಿಗೆ 'ಸ್ವಾಭಿಮಾನ' ಅಡ್ಡಿಯಾಗಿಲ್ಲವೇ? ಅಥವಾ 'ಸ್ವಾಭಿಮಾನ' ಎನ್ನುವುದನ್ನು ರಾಮುಲುಗೆ ಮಾತ್ರ ಬಿಟ್ಟು ಕೊಡಲಾಗಿದೆಯೇ ಎಂಬ ಪ್ರಶ್ನೆಗಳು ಇದೀಗ ಬಿಜೆಪಿ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.
ಸೋಮಶೇಖರ ರೆಡ್ಡಿ ಶಾಸಕರೂ ಹೌದು. ಶಾಸಕನಾಗಿ ಜನರಿಂದ ಆಯ್ಕೆಯಾಗಿದ್ದೇನೆ ಎಂದು ರೆಡ್ಡಿ ಸಮರ್ಥಿಸಿಕೊಳ್ಳಬಹುದು. ಅದನ್ನು ಒಂದು ಹಂತದವರೆಗೆ ಒಪ್ಪಲೂಬಹುದು. ಆದರೆ, ಕೆಎಂಎಫ್ ಅಧ್ಯಕ್ಷಗಿರಿ ಸಿಕ್ಕಿದ್ದು ಮಾತ್ರ ಬಿಜೆಪಿಯ ಬಲದಿಂದಲೇ ಹೊರತು ಸ್ವಂತ ಬಲದಿಂದ ಅಲ್ಲ. ಅದೂ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ಬಿಜೆಪಿಯೇ ಕಾರಣ.
ಇತ್ತೀಚೆಗೆ ಸದಾನಂದಗೌಡರು ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಸೋಮಶೇಖರ ರೆಡ್ಡಿ ಅವರ ಕೆಎಂಎಫ್ ಅಧ್ಯಕ್ಷಗಿರಿಯ ಅವಧಿ ಮುಗಿಯಿತು. ಆದರೆ, ಸರ್ಕಾರದ ಹಿತದೃಷ್ಟಿಯಿಂದ ಹಾಗೂ ಪಕ್ಷದ ಹಿರಿಯ ನಾಯಕರ ಸಲಹೆಯಂತೆ ಸೋಮಶೇಖರ ರೆಡ್ಡಿಯನ್ನೇ ಮತ್ತೂಂದು ಅವಧಿಗೆ ಅಧ್ಯಕ್ಷರನ್ನಾಗಿ ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಯಿತು.
ಈಗ ಸೋಮಶೇಖರ ರೆಡ್ಡಿ ಬಿಜೆಪಿಯಿಂದ ಹೊರಗೆ ಕಾಲಿಟ್ಟಿದ್ದಾರೆ. ತಾಂತ್ರಿಕವಾಗಿ ಬಿಜೆಪಿಯಲ್ಲಿದ್ದಾರೆಯೇ ಹೊರತು ಕೆಲಸ ಮಾಡುತ್ತಿರುವುದೆಲ್ಲ ಪಕ್ಷದ ವಿರುದ್ಧವೇ. ಆದರೂ, ಸೋಮಶೇಖರ ರೆಡ್ಡಿಗೆ 'ಸ್ವಾಭಿಮಾನ' ಕಾಡುತ್ತಿಲ್ಲವೇ ಎಂಬ ಪ್ರಶ್ನೆ ಬಿಜೆಪಿ ಮುಖಂಡರನ್ನು ಕಾಡುತ್ತಿದೆ.












Click it and Unblock the Notifications