ಹೊಸ ಮುಖ್ಯಮಂತ್ರಿ ಆಯ್ಕೆ ಆಗಸ್ಟ್ 3ಕ್ಕೆ ಮುಂದೂಡಿಕೆ

Who is next CM? Shettar or Sadananda
ಬೆಂಗಳೂರು, ಜು. 31 : ಯಡಿಯೂರಪ್ಪನವರ ರಾಜೀನಾಮೆಯ ನಂತರ ಹೊಸ ನಾಯಕನ ಆಯ್ಕೆ ಬಿಜೆಪಿ ಹೈಕಮಾಂಡಿಗೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಯಡಿಯೂರಪ್ಪ ಪರ ಮತ್ತು ವಿರೋಧ ಬಣಗಳು ತಾವು ಸೂಚಿಸಿದ ನಾಯಕನೇ ಮುಖ್ಯಮಂತ್ರಿಯಾಗಬೇಕೆಂದು ಪಟ್ಟುಹಿಡಿದು ಕೂತಿರುವುದರಿಂದ ಒಮ್ಮತದ ಅಭ್ಯರ್ಥಿಯಾಗಿ ಯಾರೂ ಹೊರಹೊಮ್ಮಿಲ್ಲ.

ಆ. 3 ಹೊಸ ಮುಖ್ಯಮಂತ್ರಿ ಆಯ್ಕೆ : ಬುಧವಾರ, ಆಗಸ್ಟ್ 3ರಂದು ಹೊಸ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ. ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ದೆಹಲಿಗೆ ತೆರಳಿದ ನಂತರ ಕರ್ನಾಟಕ ಬಿಜೆಪಿ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು. ಶಾಸಕಾಂಗ ಪಕ್ಷದ ಸಭೆ ಬೆಂಗಳೂರಿನಲ್ಲಿಯೇ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ಹೊಸ ಮುಖ್ಯಮಂತ್ರಿ ಯಾರೆಂದು ತಿಳಿಯಲಿದೆ.

ಅಂತಿಮ ಕಣದಲ್ಲಿ ಯಡಿಯೂರಪ್ಪ ಪರವಾಗಿ ಡಿವಿ ಸದಾನಂದಗೌಡ (58) ಅವರ ಹೆಸರು ಪ್ರಸ್ತಾಪವಾಗಿದ್ದರೆ, ವಿರೋಧಿಗಳ ಬಣದಿಂದ ಜಗದೀಶ್ ಶೆಟ್ಟರ್(56) ಅವರ ಹೆಸರು ಸೂಚಿತವಾಗಿದೆ. ಸದಾನಂದಗೌಡ ಮುಖ್ಯಮಂತ್ರಿಯಾಗಬೇಕೆಂದು ಯಡಿಯೂರಪ್ಪ ಹಠಹಿಡಿದು ಕೂತಿದ್ದಾರೆ. ಆದರೆ, ಶೆಟ್ಟರ್ ಹೆಸರನ್ನು ಅನಂತ್ ಕುಮಾರ್ ಮತ್ತು ಕೆಎಸ್ ಈಶ್ವರಪ್ಪ ಬೆಂಬಲಿಸಿದ್ದರಿಂದ ಮುಖ್ಯಮಂತ್ರಿ ಆಯ್ಕೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

ಯಡಿಯೂರಪ್ಪ ರಾಜೀನಾಮೆ ಪಡೆದು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಬಂದಿದ್ದ ವೀಕ್ಷಕರು ಸದ್ಯಕ್ಕೆ ದ್ವಂದ್ವದಲ್ಲಿ ಮುಳುಗಿದ್ದಾರೆ. ಡಿವಿಎಸ್ ಆಯ್ಕೆಯಾದರೆ ಬಿಜೆಪಿ ಚುಕ್ಕಾಣಿ ಮತ್ತೆ ಯಡಿಯೂರಪ್ಪ ಕೈಗೆ ಸಿಗುತ್ತದೆಂಬುದು ಈಶ್ವರಪ್ಪ, ಅನಂತ್ ಪರ ಇರುವ ಶಾಸಕರು ಎದಿರಿಸುತ್ತಿರುವ ದಿಗಿಲು. ಶೆಟ್ಟರ್ ಆಯ್ಕೆಯಾದರೆ ಯಡಿಯೂರಪ್ಪ ಅಂಡ್ ಕಂಪನಿ ಸಿಡಿದೇಳುವುದು ಖಚಿತ.

ಮೂರು ದಿನಗಳಿಂದ ಈ ಗೊಂದಲ ನಿವಾರಣೆಗೆ ಸತತ ಪ್ರಯತ್ನಿಸುತ್ತಿರುವ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಬೇಸತ್ತು ಹೋಗಿದ್ದಾರೆ. ಇಂದು ರಾತ್ರಿ 10 ಗಂಟೆಯ ವಿಮಾನದಲ್ಲಿ ಅವರು ದೆಹಲಿಗೆ ತೆರಳುತ್ತಿದ್ದಾರೆ. ಇಂದು ಶಾಸಕಾಂಗ ಪಕ್ಷದ ಸಭೆ ನಡೆಯದ ಕಾರಣ ನಾಯಕನ ಆಯ್ಕೆ ಮುಂದೂಡಲ್ಪಟ್ಟಿದೆ. ನಾಯಕನ ಆಯ್ಕೆ ಇಂದೇ ಆಗಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರೆ, ಅರ್ಜೆಂಟೇನಿದೆ ನಿಧಾನವಾಗಿ ಆಗಲಿ ಬಿಡಿ ಎಂದು ಈಶ್ವರಪ್ಪ ಮಾರುತ್ತರ ನೀಡಿದ್ದಾರೆ.

ಒಟ್ಟಿನಲ್ಲಿ, ಅನ್ಯ ಮಾರ್ಗವಿಲ್ಲದೆ ಮನಸ್ಸಿಲ್ಲದ ಮನಸ್ಸಿನಿಂದ ರಾಜೀನಾಮೆ ಕೊಟ್ಟಿರುವ ಯಡಿಯೂರಪ್ಪ ಷರತ್ತುಗಳ ಮೇಲೆ ಷರತ್ತುಗಳನ್ನು ಒಡ್ಡುತ್ತ ಬಿಜೆಪಿ ವರಿಷ್ಠರನ್ನು ಗೋಳು ಹುಯ್ದುಕೊಂಡಿದ್ದು ಮಾತ್ರವಲ್ಲ, ಕರ್ನಾಟಕದಲ್ಲಿ ಬಿಜೆಪಿಯನ್ನು ಎರಡು ದಳಗಳನ್ನಾಗಿ ಮಾಡುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಈ ಬೃಹನ್ನಾಟಕವನ್ನು ನೋಡುತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮನದಲ್ಲಿಯೇ ಮಂಡಿಗೆ ತಿನ್ನುತ್ತಿದ್ದರೂ ಆಶ್ಚರ್ಯವಿಲ್ಲ.

ಸಿದ್ದರಾಮಯ್ಯ ಪ್ರತಿಕ್ರಿಯೆ : ಅಕ್ರಮ ಗಣಿಗಾರಿಕೆಯಲ್ಲಿ ಯಡಿಯೂರಪ್ಪ ಹೆಸರು ಕೇಳಿ ಬಂದಾಕ್ಷಣವೇ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿತ್ತು. ಮೂರು ದಿನಗಳ ಕಾಲ ಆಡಿಸಿ ಕಾಡಿಸಿ ರಾಜೀನಾಮೆ ನೀಡಿದ್ದು ನಾಚಿಕೆಗೇಡಿನ ಸಂಗತಿ. ಅವರು ಹಂಗಾಮಿ ಮುಖ್ಯಮಂತ್ರಿಯಾಗಿಯೂ ಮುಂದುವರಿಯಲು ನಾಲಾಯಕ್ ಆಗಿದ್ದಾರೆ ಎಂದು ವಿರೋಧ ಪಕ್ಷಧ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+