ಮಂಗಳೂರಲ್ಲಿ ಬಸ್ ದರ ಏರಿಕೆಗೆ ತೀವ್ರ ವಿರೋಧ

ಬಸ್ ದರ ಏರಿಕೆ ಕುರಿತು ನಿರ್ಧಾರಕ್ಕೆ ಬರಲು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಸ್ ಮಾಲೀಕರು, ಬಸ್ ಯೂನಿಯನ್ ಪದಾಧಿಕಾರಿಗಳು ಹಾಗೂ ನಾಗರಿಕರ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಮಾತಿನ ಚಕಮಕಿ, ದರ ಏರಿಕೆ ಮಾಡಲು ಬಸ್ ಮಾಲೀಕರು ಅನೇಕ ಸಮರ್ಥನೆಗಳನ್ನು ಮಂಡಿಸಿದರೆ, ಸಾರ್ವಜನಿಕ ಸಂಘಟನೆಗಳು ದರ ಏರಿಕೆಯನ್ನು ಪ್ರಬಲವಾಗಿ ವಿರೋಧಿಸಿದವು, ಅಂತೂ ದರ ಏರಿಕೆ ನಿರ್ಧಾರದ ಸಭೆ ಗದ್ದಲದ ಗೂಡಾಯಿತು.
ಕೇಂದ್ರ ಸರ್ಕಾರ ಡೀಸೆಲ್ ದರ ಏರಿಸಿರುದರಿಂದ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ ಎಂದು ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಅಜೀಜ್ ಪರ್ತಿಪ್ಪಾಡಿ ಪ್ರತಿಪಾದಿಸಿದರು.
ಈ ಮೊದಲು ಕೇಂದ್ರ ಸರ್ಕಾರ ಡೀಸಿಲ್ ದರ ತಗ್ಗಿಸಿತು, ಆಗ ಬಸ್ ಮಾಲೀಕರು ದರ ಇಳಿಸಲಿಲ್ಲ ಯಾಕೆ ಎಂದು ಪ್ರಶ್ನಿಸಿದರು. ರಸ್ತೆ ಸರಿಯಿಲ್ಲ, ವಾಹನಗಳು ಆಗಾಗ ಕೆಡುತ್ತಿವೆ ಎನ್ನುವ ಬಸ್ ಮಾಲೀಕರ ವಾದವನ್ನು ನಾಗರಿಕ ಪ್ರತಿನಿಧಿಗಳು ತಳ್ಳಿಹಾಕಿ ಮಂಗಳೂರಲ್ಲಿ ಕಾಂಕ್ರೀಟ್ ರಸ್ತೆಗಳಿವೆ, ಆದ್ದರಿಂದ ನಿರ್ವಹಣಾ ವೆಚ್ಚ ಹಿಂದಿನಷ್ಟಿಲ್ಲ, ಈ ಕಾರಣಕ್ಕೆ ದರ ಏರಿಕೆ ಬೆಂಬಲಿಸಲು ಸಾಧ್ಯವಿಲ್ಲ ಎನ್ನುವ ವಾದ ಕೇಳಿಬಂತು.
ಕಾವೇರಿದ ಚರ್ಚೆಗೆ ವಿರಾಮ ಹಾಕಿದ ಜಿಲ್ಲಾಧಿಕಾರಿ ಡಾ.ಚೆನ್ನಪ್ಪ ಗೌಡ ಅವರು ಮತ್ತೊಂದು ಸಭೆ ಕರೆಯುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.












Click it and Unblock the Notifications