ರೌಡಿ ಜಮೀರ್ ಅಟ್ಟಾಡಿಸಿ ಕೊಂದ ಕಥೆ

ರೌಡಿ ಜಮೀರ್‌ಖಾನ್‌ನನ್ನು ಮುಗಿಸಲು ಸಂಚು ನಡೆಯುತ್ತಿದೆ ಎಂಬುವುದು ಪೊಲೀಸರಿಗೂ ಗೊತ್ತಿತ್ತು. ಹಾಗಾಗಿಯೇ ಆತನಿಗೆ ಎಚ್ಚರವಾಗಿರುವಂತೆ ಸೂಚನೆಯನ್ನು ಕೂಡ ನೀಡಲಾಗಿತ್ತು. ಆದರೆ ನನ್ನನ್ನು ಯಾರಿಗೂ ಏನು ಮಾಡಲಾಗಲ್ಲ ಎಂಬ ಹುಂಬ ಧೈರ್ಯವೇ ಆತನನ್ನು ಬೀದಿಯಲ್ಲಿ ಹೆಣವಾಗಿ ಹೋಗುವಂತೆ ಮಾಡಿದೆ.
ಮೈಸೂರಿನ ಮಂಡಿಮೊಹಲ್ಲಾದ ಸುನ್ನಿ ಚೌಕದ ನಿವಾಸಿ ಮುರ್ದೂಜ್‌ಖಾನ್ ಎಂಬುವರ ಪುತ್ರನೇ ಜಮೀರ್‌ಖಾನ್.
ನಗರದಲ್ಲಿ ವೆಲ್ಡಿಂಗ್ ಶಾಪ್‌ವೊಂದಿದ್ದು ಇದನ್ನು ಜಮೀರ್‌ಖಾನ್ ಹಾಗೂ ಸಹೋದರ ಶಮೀಲ್‌ಖಾನ್ ನಡೆಸುತ್ತಿದ್ದರು. ಕೇವಲ ವೆಲ್ಡಿಂಗ್ ಶಾಪ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರೆ ಜಮೀರ್‌ಖಾನ್ ಕೇವಲ ಮೂವತೈದು ವರ್ಷಕ್ಕೆ ಹೆಣವಾಗಿ ಹೋಗುತ್ತಿರಲಿಲ್ಲ. ಬದಲಾಗಿ ರೌಡಿಸಂ ಶುರುಮಾಡಿಕೊಂಡಿದ್ದನು. ಹೊಡೆದಾಡ ಬಡಿದಾಟ ಪ್ರಕರಣಗಳಲ್ಲಿ ಭಾಗಿಯಾಗ ತೊಡಗಿದ್ದನು. ಈಗಾಗಲೇ ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿರುವುದರಿಂದ ಪೊಲೀಸರು ರೌಡಿ ಲೀಸ್ಟ್‌ಗೆ ಸೇರಿಸಿದ್ದರು.
ಇವತ್ತು ಜಮೀರ್‌ಖಾನ್‌ನನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಡ್ರ್ಯಾಗನ್‌ನಿಂದ ಇರಿದು ಹತ್ಯೆಗೈದವರ‍್ಯಾರು ಭೂಗತಲೋಕದ ಪಾತಕಿಗಳಲ್ಲ. ಅವರೆಲ್ಲರೂ ಒಂದೇ ಬೀದಿಯವರು. ಚಿಕ್ಕಂದಿನಿಂದಲೂ ಜೊತೆಯಲ್ಲಿಯೇ ಆಡಿ ಬೆಳೆದವರು.
ಗೆಳೆಯ ಶತ್ರುವಾದ: ಮುನೀರ್‌ಖಾನ್‌ಗೆ ಗೆಳೆಯ ಜಮೀರ್‌ಖಾನ್ ಮೇಲೆ ದ್ವೇಷ ಹುಟ್ಟಲು ಕಾರಣವೂ ಇತ್ತು. ಮುನೀರ್‌ಖಾನ್‌ನ ವೈಯಕ್ತಿಕ ವಿಚಾರಗಳಲ್ಲಿ ಜಮೀರ್‌ಖಾನ್ ಮಧ್ಯೆ ಪ್ರವೇಶಿಸುತ್ತಿದ್ದನು. ಮುನೀರ್‌ಖಾನ್ ಹೆಂಡತಿಯೊಂದಿಗೆ ಜಗಳ ಮಾಡಿದರೆ ಅವರ ಮಧ್ಯೆ ಪ್ರವೇಶಿಸುತ್ತಿದ್ದ ಜಮೀರ್‌ಖಾನ್ ಹೆಂಡತಿಯ ಪರ ನಿಂತು ಮುನೀರ್‌ಖಾನ್‌ಗೆ ಬೆದರಿಕೆ ಹಾಕುತ್ತಿದ್ದನು. ಇದರಿಂದ ಬೇಸತ್ತಿದ್ದ ಮುನೀರ್‌ಖಾನ್ ತನ್ನ ಬಾಲ್ಯದ ಸ್ನೇಹಿತರೂ ಹಾಗೂ ಅದೇ ಬೀದಿಯ ನಿವಾಸಿಗಳಾದ ಖದೀರ್, ನಾಸೀರ್, ಮಕ್ಬೂಲ್, ಬಸೀರ್, ಮಜ್ದು, ಪಂಡು ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚಿನ ಹುಡುಗರ ಪಟಾಲಂನ್ನು ಕಟ್ಟಿದ್ದನಲ್ಲದೆ, ಜಮೀರ್‌ಖಾನ್ ಮೇಲೆ ಅಟ್ಯಾಕ್ ಮಾಡಿದ್ದನು.
ನನ್ನ ಮೇಲೆಯೇ ಹಲ್ಲೆ ನಡೆಸಿದ ಮುನೀರ್‌ಖಾನ್ ವಿರುದ್ಧ ಜಮೀರ್‌ಖಾನ್ ಉರಿದು ಹೋದನಲ್ಲದೆ, ಮುನೀರ್‌ಖಾನ್ ಗ್ಯಾಂಗ್ ಮೇಲೆ ಕಳೆದ ಡಿಸೆಂಬರ್ 24ರಂದು ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಮುಸ್ಲಿಂ ಸ್ಮಶಾನದಲ್ಲಿ ದಾಳಿ ನಡೆಸಿದ್ದನು. ಆದರೆ ಅವತ್ತು ಮುನೀರ್‌ಖಾನ್ ಬಚಾವ್ ಆಗಿದ್ದನು.
ಮರ್ಡರ್‌ಗೆ ಸ್ಕೆಚ್: ಜಮೀರ್‌ಖಾನ್ ಯಾವಾಗ ತನ್ನ ಗ್ಯಾಂಗ್ ಮೇಲೆ ದಾಳಿ ಮಾಡಿದನೋ ಆಗಲೇ ಮುನೀರ್‌ಖಾನ್ ಎಚ್ಚೆತ್ತುಕೊಂಡಿದ್ದನು. ಜಮೀರ್‌ಖಾನ್ ನನ್ನ ಮೇಲೆ ಕಣ್ಣಿಟ್ಟಿದ್ದು ಯಾವತ್ತಿಗೂ ಆತನಿಂದ ಅಪಾಯ ತಪ್ಪಿದಲ್ಲ ಹಾಗಾಗಿ ಮೊದಲಿಗೆ ನಾವೇ ಆತನನ್ನು ಮುಗಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದನು. ಅದಕ್ಕಾಗಿ ತನ್ನ ಪಂಟರ್ ಪಡೆಯನ್ನು ತಯಾರು ಮಾಡಿಕೊಂಡಿದ್ದನು.
ಮಾರ್ಚ್ 24ರಂದು ಜಮೀರ್‌ಖಾನ್‌ಗೆ ಮೂಹೂರ್ತ ಫಿಕ್ಸ್ ಮಾಡಿದ ಮುನೀರ್‌ಖಾನ್ ಅಂಡ್ ಗ್ಯಾಂಗ್ ಆತನನ್ನು ಹಿಂಬಾಲಿಸಿದೆ. ಆದರೆ ಜಮೀರ್‌ಖಾನ್ ಮಧ್ಯಾಹ್ನ ವೆಲ್ಡಿಂಗ್ ಶಾಪ್ ಮುಚ್ಚಿ ಮನೆಗೆ ಹೋಗಿ ಊಟ ಮುಗಿಸಿ ಮತ್ತೆ ಸಂಜೆ 4.30ರ ವೇಳೆಗೆ ತನ್ನ ಇನೋವಾ ಕಾರಿನಲ್ಲಿ ಸಹೋದರ ಶಮೀಲ್‌ಖಾನ್‌ನೊಂದಿಗೆ ಬಟ್ಟೆ ಖರೀದಿಸಲು ಸಿಟಿಗೆ ಬಂದಿದ್ದಾರೆ. ಸಯ್ಯಾಜಿರಾವ್ ರಸ್ತೆಯ ಪಂಚಮುಖಿ ದೇವಾಲಯದ ಬಳಿಯಿರುವ ಪೆಟ್ರೋಲ್ ಬಂಕ್ ಎದುರು ಕಾರನ್ನು ನಿಲ್ಲಿಸಿ ಅಲ್ಲೇ ಇರುವ ಸಾಗರ್ ಹೇರ್ ಡ್ರೆಸರ್ಸ್‌ಗೆ ಶೇವಿಂಗ್ ಮಾಡಲೆಂದು ಹೋಗಿದ್ದಾನೆ.
ಅಷ್ಟರಲ್ಲೇ ಹೊಂಚು ಹಾಕಿ ಕೂತಿದ್ದ ಹಂತಕ ಪಡೆ ಒಮ್ಮೆಗೆ ಧಾವಿಸಿ ಬಂದು ಅಟ್ಯಾಕ್ ಮಾಡಿದೆ. ಅವರಿಂದ ತಪ್ಪಿಸಿಕೊಂಡು ಓಡುವ ಪ್ರಯತ್ನ ಮಾಡಿದನಾದರೂ ಸಾಧ್ಯವಾಗಿಲ್ಲ. ಏಕಾಏಕಿ ಅಣ್ಣನ ಮೇಲೆ ದಾಳಿ ನಡೆಯುತ್ತಿರುವುದನ್ನು ಕಂಡ ತಮ್ಮ ಶಮೀಲ್‌ಖಾನ್ ಅಲ್ಲಿಗೆ ಓಡಿದ್ದಾನೆ ಅಷ್ಟರಲ್ಲಿ ಆತನ ಮೇಲೂ ಹಂತಕ ಪಡೆ ಅಟ್ಯಾಕ್ ಮಾಡಿದೆ.
ಇನ್ನೇನು ಶಮೀಲ್‌ಖಾನ್‌ನನ್ನು ಮುಗಿಸಬೇಕೆನ್ನುವಷ್ಟರಲ್ಲಿ ಅವತ್ತು ಅಲ್ಲೇ ಸಮೀಪದಲ್ಲಿರುವ ವಿದ್ಯಾವರ್ಧಕ ಕಾಲೇಜಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಕಮೀಷ್ನರ್ ಸುನೀಲ್ ಅಗರವಾಲ್ ಬಂದಿದ್ದಾರೆ. ಅವರ ವಾಹನ ಕಾಲೇಜಿನ ಆವರಣ ಪ್ರವೇಶಿಸುತ್ತಿದ್ದಂತೆಯೇ ಅಯ್ಯರ್ ರಸ್ತೆಯ ಮೂಲಕ ಕಾಲೇಜು ಎದುರಿನ ರಸ್ತೆಯಲ್ಲಿ ಎಸ್‌ಐ ಮಹದೇವಯ್ಯರವರ ವಾಹನ ಬಂದಿದೆ. ತಕ್ಷಣ ಪೊಲೀಸ್ ವಾಹನವನ್ನು ಕಂಡ ಹಂತಕರು ಚಲ್ಲಾಪಿಲ್ಲಿಯಾಗಿ ಗಲ್ಲಿಯ ಸಂದಿನಲ್ಲಿ ಓಡಿ ಪರಾರಿಯಾಗಿದ್ದಾರೆ.
ಎಸ್‌ಐ ಮಹದೇವಯ್ಯರವರು ಕೂಡಲೇ ವಯರ್‌ಲೆಸ್ ಮೂಲಕ ಮಂಡಿ ಠಾಣೆಯ ಇನ್ಸ್‌ಪೆಕ್ಟರ್ ಕಿರಣ್‌ಕುಮಾರ್‌ರವರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಡಿಸಿಪಿ ಬಸವರಾಜ ಮಾಲಗತ್ತಿ, ಎಸಿಪಿಗಳಾದ ಪೂಜಾರ್, ಎ.ಕೆ.ಸುರೇಶ್, ಎಸ್‌ಐ ಶಬ್ಬೀರ್‌ಹುಸೇನ್ ಮತ್ತು ಸಿಬ್ಬಂದಿಗಳು ಬಂದಿದ್ದಾರೆ.
ಹೆಣವಾದ ಜಮೀರ್‌ಖಾನ್: ಆ ವೇಳೆಗೆ ಹಂತಕರ ಕೈಯ್ಯಲ್ಲಿದ್ದ ಡ್ರ್ಯಾಗನ್ ಜಮೀರ್‌ಖಾನ್‌ನ ದೇಹವನ್ನು ಎಲ್ಲೆಂದರಲ್ಲಿ ಇರಿದಿತ್ತು ಹಾಗಾಗಿ ರಕ್ತದ ಮಡುವಿನಲ್ಲಿ ಬಿದ್ದು ಆತ ಒದ್ದಾಡ ತೊಡಗಿದ್ದನು.
ಎಲ್ಲರೂ ಸೇರಿ ಪಕ್ಕದ ಕೆ.ಆರ್.ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಅಲ್ಲೇ ಗಂಭೀರ ಗಾಯಗೊಂಡು ಬಿದ್ದಿದ್ದ ಶಮೀಲ್‌ಖಾನ್‌ನನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮೀರ್‌ಖಾನ್ ಹತ್ಯೆ ನಡೆದ ಸುದ್ದಿ ಹರಡುತ್ತಿದ್ದಂತೆಯೇ ಜಮೀರ್‌ಖಾನ್ ಮನೆಯಿರುವ ಮಂಡಿಮೊಹಲ್ಲಾ ಸೇರಿದಂತೆ ಪುಲಿಕೇಶಿ ರಸ್ತೆಯಲ್ಲಿ ಉದ್ವಿಗ್ನ ವಾತಾವರಣ ನಿಮಾಣಗೊಂಡಿತು. ತಕ್ಷಣ ಪೊಲೀಸ್ ಬಂದೋಬಸ್ತ್ ಮಾಡುವ ಮೂಲಕ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಯಿತು.
ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ವಾರಾಸುದಾರರಿಗೆ ನೀಡಲಾಗಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ. ಈ ನಡುವೆ ಪೊಲೀಸರು ಹಂತಕರ ಪತ್ತೆಗಾಗಿ ಎಲ್ಲಡೆ ಬಲೆಬೀಸಿದ್ದಾರೆ. ಮಂಡಿ ಪೊಲೀಸ್ ಠಾಣೆಯ ಎಸ್‌ಐ ಶಬ್ಬೀರ್‌ಹುಸೇನ್‌ರವರ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಲಾಗಿದೆ.
ಹಂತಕರಿಗೆ ಬಲೆ: ಜಮೀರ್‌ಖಾನ್‌ನನ್ನು ಹತ್ಯೆ ಮಾಡಿದ ಬಳಿಕ ಹಂತಕರು ಚಾಮರಾಜನಗರ ಹಾಗೂ ಬೆಂಗಳೂರಿಗೆ ತೆರಳಿರುವ ಸಾಧ್ಯತೆಯಿರುವುದರಿಂದ ತನಿಖಾ ತಂಡ ಕಾರ್ಯಾಚರಣೆಗಿಳಿದಿದೆ.ಈ ಗ್ಯಾಂಗ್‌ವಾರ್ ಸಧ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹಂತಕರು ಯಾವುದೇ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದರೂ ಇಂದಲ್ಲ ನಾಳೆ ಪೊಲೀಸರಿಗೆ ಸಿಕ್ಕಿಬಿದ್ದೇ ಬೀಳುತ್ತಾರೆ.
ಮತ್ತೊಂದೆಡೆ ಜಮೀರ್‌ಖಾನ್‌ನ ಹತ್ಯೆಗೆ ಪ್ರತಿಕಾರವಾಗಿ ಆತನ ಗ್ಯಾಂಗ್ ಕೂಡ ಮಚ್ಚು ಮಸೆಯುತ್ತಿದೆ ಹೀಗಾಗಿ ಮತ್ತೆ ಮುನೀರ್‌ಖಾನ್‌ನೊಂದಿಗೆ ಗುರುತಿಸಿಕೊಂಡವರ ಮೇಲೆ ಅಟ್ಯಾಕ್ ನಡೆದರೂ ನಡೆಯಬಹುದು ಆದ್ದರಿಂದ ಪೊಲೀಸರು ಎಚ್ಚರವಹಿಸಿ ಹಂತಕರನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕಾಗಿದೆ.












Click it and Unblock the Notifications