ಪಕ್ಷೇತರ ಶಾಸಕರಿಗೆ ಸೋಲು, ಬೋಪಯ್ಯ ಕರೆಕ್ಟ್

ಪಕ್ಷೇತರ ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ, ಡಿ. ಸುಧಾಕರ್ ಹಾಗೂ ಶಿವರಾಜ ತಂಗಡಗಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನಶಾಂತನಗೌಡರ್ ನೇತೃತ್ವದ ಪೂರ್ಣ ಪೀಠ ಅವರ ಸದಸ್ಯತ್ವವನ್ನು ಅನೂರ್ಜಿತಗೊಳಿಸಿದೆ. ಇದರೊಂದಿಗೆ ಸ್ಪೀಕರ್ ಬೋಪಯ್ಯ ನಿರ್ಣಯ ಸರಿ ಎಂದು ಸಾರಿದ್ದು, ಯಡಿಯೂರಪ್ಪ ಸರಕಾರಕ್ಕೆ ಸದ್ಯಕ್ಕೆ ಜಯ ಲಭಿಸಿದೆ.
ಪಕ್ಷೇತರ ಶಾಸಕರ ಅನರ್ಹತೆಯನ್ನು ಹೈಕೋರ್ಟ್ ಎತ್ತಿಹಿಡಿದಿರುವುದರಿಂದ ಇವರೆಲ್ಲ ಮುಂದಿನ 6 ವರ್ಷ ಕಾಲ ವಿಧಾನಸಭೆಗೆ ಸ್ಪರ್ಧಿಸುವಂತಿಲ್ಲ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುವುದೊಂದೇ ಅವರ ಮುಂದಿರುವ ದಾರಿ. ತೀರ್ಪು ಪ್ರಕಟವಾಗುತ್ತಿದ್ದಂತೆ ನರೇಂದ್ರಸ್ವಾಮಿ ಅವರ ನಿವಾಸದಲ್ಲಿ ಸಭೆ ನಡೆಸಿದ ಅನರ್ಹ ಶಾಸಕರು, ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರದ ವಿರುದ್ಧ 11 ಮಂದಿ ಬಿಜೆಪಿ ಶಾಸಕರು ಮತ್ತು 5 ಪಕ್ಷೇತರರು 2010ರ ಅಕ್ಟೋಬರ್‌ನಲ್ಲಿ ಬಂಡೆದ್ದಿದ್ದರು. ಜತೆಗೆ ರಾಜ್ಯಪಾಲರಿಗೆ ಪತ್ರ ಬರೆದು ತಾವು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಬೆಂಬಲ ವಾಪಸ್ ಪಡೆದಿರುವುದಾಗಿ ತಿಳಿಸಿದ್ದರು.
11 ಮಂದಿ ಶಾಸಕರ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ್ದ ಇಬ್ಬರು ನ್ಯಾಯಮೂರ್ತಿಗಳ ವಿಭಾಗೀಯ ಪೀಠದಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು. ನಂತರ ಅದನ್ನು ಮೂರನೇ ನ್ಯಾಯಮೂರ್ತಿಗೆ ಒಪ್ಪಿಸಲಾಗಿತ್ತು.
ಈ ಕಾರಣದಿಂದಾಗಿ 11 ಬಿಜೆಪಿ ಶಾಸಕರ ಜತೆಗೆ 5 ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ 2010ರ ಅಕ್ಟೋಬರ್ 10ರಂದು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಎಲ್ಲ 16 ಶಾಸಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 11 ಬಿಜೆಪಿ ಶಾಸಕರ ಅನರ್ಹತೆಯನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಈ ವಿವಾದ ಈಗ ಸುಪ್ರೀಂಕೋರ್ಟ್ ಮುಂದಿದೆ. ಈ ಮಧ್ಯೆ, 5 ಪಕ್ಷೇತರ ಶಾಸಕರ ಅರ್ಜಿಯ ವಿಚಾರಣೆಗೆ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೂರ್ಣ ಪೀಠ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿತ್ತು.












Click it and Unblock the Notifications