ಗುರೂಜಿ ಮೇಲೆ ಗುಂಡು ಹಾರಿಸಿದ್ದು ಉಗ್ರರೆ?

ದಾಳಿ ನಡೆದಾಗ ಗುರೂಜಿ ಸ್ಥಳದಲ್ಲಿರಲಿಲ್ಲ ಎಂಬುದು ಪೊಲೀಸರ ವಾದ. ಆದರೆ ದಾಳಿ ನಡೆದಾಗ ತಾವು ಕಾರು ಹತ್ತುತ್ತಿದ್ದೆ ಎನ್ನುತ್ತಾರೆ ಗುರೂಜಿ. ಈ ದಾಳಿಗೆ ಕಾರಣ ಏನು? ದಾಳಿಯಲ್ಲಿ ಯಾರ ಕೈವಾಡ ಇರಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನು ನಿಗೂಢವಾಗಿದೆ.
ಆಶ್ರಮಕ್ಕೆ ಭದ್ರತೆ: ಸಿಎಂ
ಶ್ರೀಶ್ರೀ ರವಿಶಂಕರ್ ಗುರೂಜಿ ಅವರನ್ನು ಗುರಿಯಾಗಿ ಇರಿಸಿಕೊಂಡು ನಡೆದ ದಾಳಿ ಅಲ್ಲ ಇದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ಘಟನೆಯಿಂದ ಶ್ರೀಗಳು ಸ್ವಲ್ಪವೂ ವಿಚಲಿತರಾಗಿಲ್ಲ. ಅದು ಅವರ ಮನೋಸ್ಥೈರ್ಯವನ್ನು ತೋರುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ. ರವಿಶಂಕರ್ ಗುರೂಜಿ ಹಾಗೂ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ವಿಶೇಷ ಭದ್ರತೆ ನೀಡಲಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಗುರೂಜಿ ದೇಶದ ಆಸ್ತಿ
ವಿಶ್ವಶಾಂತಿಗಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಗುರೂಜಿ ಈ ದೇಶದ ಆಸ್ತಿ. ರವಿಶಂಕರ್ ಗುರೂಜಿ ಅವರಿಗೆ ಭದ್ರತೆ ಒದಗಿಸುವುದು ಕೇಂದ್ರ ಹಾಗೂ ರಾಜ್ಯದ ಸರಕಾರದ ಕರ್ತವ್ಯ ಎಂದು ಸಂಸದ ಅನಂತಕುಮಾರ್ ಹೇಳಿದ್ದಾರೆ. ಗುಂಡಿನ ದಾಳಿಯಲ್ಲಿ ಉಗ್ರರ ಕೈವಾಡ ಏನಾದರೂ ಇದೆಯೇ? ಎಂಬ ಅಂಶವನ್ನು ಪತ್ತೆಹಚ್ಚುವಂತೆ ಅನಂತಕುಮಾರ್ ಆಗ್ರಹಿಸಿದ್ದಾರೆ.












Click it and Unblock the Notifications