ಶ್ರೀರಾಮುಲು ಹುಲಿ, ನೀಚ ಸಿಎಂಗೆ ಬುದ್ಧಿಬರಲಿ

ಉತ್ತರ ಕರ್ನಾಟಕದ ನವಗ್ರಾಮಗಳಲ್ಲಿ ನೆರೆ ಸಂತ್ರಸ್ತರಿಗಾಗಿ ಐವತ್ತು ಸಾವಿರ ಮನೆ ಕಟ್ಟಿಸುವ ನವಗ್ರಾಮ ಯೋಜನೆಗೆ ಶಂಕುಸ್ಥಾಪನೆ ಹಾಕಿದ ಸಂದರ್ಭದಲ್ಲಿ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರ ಆಕ್ರೋಶ ಮುಗಿಲು ಮುಟ್ಟಿತ್ತು.
ಪ್ರತಿ ಹಂತದಲ್ಲೂ ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಹೊಟ್ಟೆಕಿಚ್ಚು ಮಂದಿ ಬಹಳ ಜನ ಇದ್ದಾರೆ. ಬರೀ ಮಾತಿನ ಮೂಲಕ ಮಾತನಾಡಿದ್ದಾರೆ. ಅವರಿಂದ ಏನೂ ಮಾತನಾಡಲು ಸಾಧ್ಯವಿಲ್ಲ ಎಂದು ಶ್ರೀರಾಮುಲು ಗುಡುಗಿದರು.
ನಂತರ ಮಾತು ಆರಂಭಿಸಿದ ಜನಾರ್ದನ ರೆಡ್ಡಿ ಪ್ರತಿ ಹಂತದಲ್ಲೂ ಯಡಿಯೂರಪ್ಪ ವಿರುದ್ಧ ದಾಳಿ ನಡೆಸಿದರು. ರಾಜಕೀಯ ಪಿಶಾಚಿಗಳಿಗೆ ಹೆದರುವುದಿಲ್ಲ. ಜನರಿಂದ ಮೇಲೆ ಬಂದಿದ್ದೇವೆ. ನಾವು ಬಡವರು, ನಿಮ್ಮ ಆಶೀರ್ವಾದದಿಂದ ಮೇಲೆ ಬಂದಿದ್ದೇವೆ. ಒಳ್ಳೆ ಕೆಲಸಕ್ಕೆ ಅಡ್ಡ ಮಾಡುವವರೇ ಜಾಸ್ತಿ. ನಮ್ಮವರೇ ನಮಗೆ ಅಡ್ಡಗಾಲು ಹಾಕುತ್ತಿದ್ದಾರೆ. ಕೆಲವರಿಗೆ ವಯಸ್ಸಾದರೂ ಬುದ್ಧಿ ಬಂದಿಲ್ಲ. ಡೋಂಟ್ ಕೇರ್, ನಿಮ್ಮ ನೀಚ ರಾಜಕಾರಣಕ್ಕೆ ನಾವು ಸೊಪ್ಪು ಹಾಕುವುದಿಲ್ಲ. ನಾವು ಉಗ್ರವಾದಿಗಳಲ್ಲ. ನಿಮ್ಮ ಸುತ್ತಮುತ್ತ ಇರುವವರು ಉಗ್ರಗಾಮಿಗಳಿದ್ದಾರೆ. ಅವರನ್ನು ಹದ್ದುಬಸ್ತಿನಲ್ಲಿಡಿ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕದ ನಿಜವಾದ ಹುಲಿ ಶ್ರೀರಾಮುಲು. ಅವರು ಮಾತು ಕೊಟ್ಟರೆ ತಪ್ಪುವುದಿಲ್ಲ. ತಪ್ಪಿದರೆ ಪ್ರಾಣ ಕೊಡಲೂ ಅವರು ಸಿದ್ಧ. ನಾವೂ ಬಡವರಾಗಿದ್ದೆವು. ಬಡತನದಲ್ಲಿಯೇ ಬೆಳೆದಿದ್ದೇವೆ. ನಾವು ಶ್ರೀಮಂತರಾಗಿರುವುದು ಶ್ರೀರಾಮುಲು ಅವರಂಥ ಹೃದಯ ಶ್ರೀಮಂತರಿಂದ, ನಿಮ್ಮ ಬೆಂಬಲದಿಂದ ಎಂದು ಜನಾರ್ದನ ರೆಡ್ಡಿ ನುಡಿದರು.
ಮುಖ್ಯಮಂತ್ರಿಗಳ ವಿರುದ್ದ ಸೆಡ್ಡು ಹೊಡೆದಿರುವ ರೆಡ್ಡಿಗಳು ಇಂದು ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ನೆರೆ ಸಂತ್ರಸ್ತರ ನೆರವಿಗಾಗಿ ನವಗ್ರಾಮಗಳ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕಂದಾಯ ಸಚಿವ ಕರುಣಾಕರರೆಡ್ಡಿ ಜ್ಯೋತಿ ಬೆಳಗಿಸುವ ಮೂಲಕ ನವಗ್ರಾಮಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವರ್ಗಾವಣೆಯಾಗಿರುವ ಬಳ್ಳಾರಿ ಜಿಲ್ಲಾಧಿಕಾರಿ ಬಿ ಶಿವಪ್ಪ, ಎಸ್ ಪಿ ಸೀಮಂತ ಕುಮಾರ್ ಸಿಂಗ್ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಮುತ್ತಯ್ಯ ಅವರು ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications