ಜುಲೈ ಅಂತ್ಯದೊಳಗೆ ಕಾರ್ಯಸೂಚಿ ಸಿದ್ಧಗೊಳಿಸಿ : ಸಿಎಂ

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಇಲಾಖಾ ಮಟ್ಟದಲ್ಲಿ ಮಂಥನ ಸಭೆ ನಡೆಸಿ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೊಸ ಕಾರ್ಯತಂತ್ರ ರೂಪಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಈ ಕಾರ್ಯಸೂಚಿ ಸಿದ್ಧವಾಗಬೇಕು ಎಂದರು.
ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಮಂಥನ ಕಾರ್ಯಕ್ರಮ ನಡೆದಿದ್ದು, ಸಚಿವರು ಹಾಗೂ ಅಧಿಕಾರಿಗಳ ನಡುವಿನ ಅಂತರ ತಗ್ಗಿಸಲು ಈ ಮಂಥನ ನೆರವಾಗಿದೆ. ಹಾಗಾಗಿ, ಪ್ರತಿ ತಿಂಗಳಿಗೊಮ್ಮೆ ಈ ಮಂಥನ ಸಭೆ ನಡೆಸಲು ನಿರ್ಧರಿಸಲಾಗಿದೆ. ಅನಗತ್ಯ ಯೋಜನೇತರ ವೆಚ್ಚಗಳನ್ನು ತಗ್ಗಿಸಿ ಯೋಜನಾ ವೆಚ್ಚವನ್ನು ಹೆಚ್ಚಿಸುವ ಮೂಲಕ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯತ್ತ ಗಮನ ನೀಡುವಂತೆ ಮುಖ್ಯಮಂತ್ರಿಗಳ ಸಭೆಯಲ್ಲಿ ಸೂಚನೆ ನೀಡಿದರು. ಯೋಜನೇತರ ವೆಚ್ಚಗಳನ್ನು ತಗ್ಗಿಸಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಅನುಷ್ಠಾನದಲ್ಲಿ ದಕ್ಷತೆ ತರಲು ಬಿ ಕೆ ಭಟ್ಟಾಚಾರ್ಯ ಅವರ ಅಧ್ಯಕ್ಷತೆಯಲ್ಲಿ ವೆಚ್ಚ ಸುಧಾರಣಾ ಆಯೋಗವನ್ನು ರಚಿಸಲಾಗಿದ್ದು, ಈ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಶೇ. 29 ರಷ್ಟು ಯೋಜನಾ ವೆಚ್ಚವಾಗಿದೆ. ಇದು ಸಂತಸದ ಸಂಗತಿ. ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್, ಐಟಿಬಿಟಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ ಮೊದಲಾದ ಇಲಾಖೆಗಳಲ್ಲಿ ಶೇ. 140ಕ್ಕೂ ಹೆಚ್ಚು ಪ್ರಗತಿಯಾಗಿದ್ದು, ಸಮಾಜ ಕಲ್ಯಾಣ, ಪ್ರವಾಸೋಧ್ಯಮ, ಜವಳಿ ಇಲಾಖೆಗಳಲ್ಲಿ ಶೇ. 126 ರಷ್ಟು, ಕೃಷಿ, ತೋಟಗಾರಿಕೆ ಮತ್ತು ಕೈಗಾರಿಕೆ ಇಲಾಖೆಗಳಲ್ಲಿ ಶೇ. 87 ರಿಂದ 99 ರಷ್ಟು ಪ್ರಗತಿಯಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications