ಮೇಲುಕೋಟೆಯ ರಾಜಮುಡಿ ಚೆಲುವನ ನೋಡಬನ್ನಿ..
ಮಂಡ್ಯ : ಜಿಲ್ಲೆಯ ಮೇಲುಕೋಟೆಗೆ ಮುಂದಿನ ನಾಲ್ಕು ದಿನಗಳವರೆಗೆ, ಭಕ್ತ ಪ್ರವಾಹ ಹರಿದು ಬರಲಿದೆ. ರಾಜಮುಡಿಯಲ್ಲಿ ವಿರಾಜಮಾನವಾಗಿರುವ ಚೆಲುವರಾಯ ಸ್ವಾಮಿಯ ದರ್ಶಿಸುವುದು ಭಕ್ತರ ಬಯಕೆ.
ಬುಧವಾರ ರಾತ್ರಿಯಿಡೀ ನಡೆದ ವೈರಮುಡಿ ಉತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಸಚಿವ ಚೆಲುವರಾಯ ಸ್ವಾಮಿ, ಎಚ್.ಡಿ.ರೇವಣ್ಣ, ರಾಮಚಂದ್ರೇಗೌಡ ಮತ್ತಿತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ದಕ್ಷಿಣ ಬದರಿ ಎಂದೇ ಖ್ಯಾತವಾಗಿರುವ ಮೇಲುಕೋಟೆ ಕ್ಷೇತ್ರದಲ್ಲಿರುವ ಚೆಲುವರಾಯ ಸ್ವಾಮಿಯನ್ನು ವಜ್ರಖಚಿತ ವೈರಮುಡಿಯಲ್ಲಿ ಕಂಡು, ಭಕ್ತರು ರೋಮಾಂಚಿತರಾದರು. ಈ ವೈರಮುಡಿಯನ್ನು ಮೈಸೂರು ಅರಸರು ನೀಡಿದ್ದು, ಉತ್ಸವದ ಸಂದರ್ಭದಲ್ಲಷ್ಟೇ ಸ್ವಾಮಿಗೆ ತೊಡಿಸಲಾಗುತ್ತದೆ.
ಗುರುವಾರ ಬೆಳಗ್ಗೆ ವೈರಮುಡಿ ತೆಗೆದು, ರಾಜಮುಡಿಯನ್ನು, ಸ್ವಾಮಿಯ ವಿಗ್ರಹಕ್ಕೆ ತೊಡಿಸಲಾಯಿತು. ಮುಂದಿನ ನಾಲ್ಕು ದಿನಗಳ ಕಾಲ ರಾಜಮುಡಿ ಅಲಂಕಾರ ಮುಂದುವರಿಯಲಿದೆ.
(ಯುಎನ್‌ಐ)












Click it and Unblock the Notifications