ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ವಿವಾದ ಇತ್ಯರ್ಥ ನ್ಯಾಯಮಂಡಳಿಯಿಂದಲೇ ಸಾಧ್ಯ: ಕರ್ನಾಟಕ

By Staff
|
Google Oneindia Kannada News

ನವದೆಹಲಿ : ಶತಮಾನಗಳಷ್ಟು ಹಳೆಯದಾದ ಕಾವೇರಿ ನದಿ ನೀರು ಹಂಚಿಕೆಯ ವಿವಾದವನ್ನು ಬಗೆಹರಿಸಿಕೊಳ್ಳಲು ನ್ಯಾಯಮಂಡಳಿಯೇ ಸರಿಯಾದ ವೇದಿಕೆ ಎಂದು ಸರ್ವೋನ್ನತ ನ್ಯಾಯಾಲಯದಲ್ಲಿ ಕರ್ನಾಟಕ ಪ್ರಮಾಣ ಪತ್ರ ಸಲ್ಲಿಸಿದೆ. ಕಾವೇರಿ ನ್ಯಾಯಮಂಡಳಿ ರಚನೆಯ ಕ್ರಮಬದ್ಧತೆಯನ್ನೇ ಪ್ರಶ್ನಿಸಿ ಬೆಂಗಳೂರಿನ ಗಾಂಧೀ ಸಾಹಿತ್ಯ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಗುರುವಾರ ರಾಜ್ಯ ಸರಕಾರವು ತನ್ನ ಅಭಿಪ್ರಾಯವನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿತು.

ಕರ್ನಾಟಕದ ಹಿತದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದ ತರುವಾಯವೇ ನ್ಯಾಯಮಂಡಳಿಯನ್ನು ಒಪ್ಪಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದೂ ಕರ್ನಾಟಕ ತಿಳಿಸಿತು. ನ್ಯಾಯಮಂಡಳಿ ಸ್ಥಾಪನೆಗೆ ಕಾರಣವಾದ ಅಂಶಗಳು ಮತ್ತು ಈ ಮಂಡಳಿಯ ಮೂಲಕವೇ ವಿವಾದ ಬಗೆಹರಿಸಿಕೊಳ್ಳಲು ರಾಜ್ಯ ಮುಂದಾಗಿರುವುದಕ್ಕೆ ಕಾರಣಗಳೇನು ಎಂಬುದನ್ನು ಪ್ರಮಾಣಪತ್ರದಲ್ಲಿ ಕರ್ನಾಟಕ ವಿವರಿಸಿದೆ.

ಕಾವೇರಿ ನದಿ ನೀರಿನ ಹಂಚಿಕೆ ವಿಷಯವನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಸಾಧ್ಯವಾಗದ ಕಾರಣ ನ್ಯಾಯಾಧಿಕರಣದ ರಚನೆ ಆಗಿದೆ. 1990ರಲ್ಲಿ ಸ್ಥಾಪನೆಯಾದ ಈ ಮಂಡಳಿಯು ಇದುವರೆಗೆ 270 ಸಭೆಗಳನ್ನು ನಡೆಸಿದೆ. ಈ ಸಭೆಗಳಲ್ಲಿ ಕರ್ನಾಟಕವು ನೀಡುವ ಸಾಕ್ಷಿಯ ವಿಚಾರಣೆಯೂ ಪೂರ್ಣಗೊಂಡಿದೆ. ಈ ವಾದ ವಿವಾದ ಸಂಬಂಧಿತ ಹೇಳಿಕೆಗಳು ಸುಮಾರು 50 ಸಾವಿರ ಪುಟಗಳನ್ನು ಮೀರಿವೆ. ಪರಿಸ್ಥಿತಿ ಹೀಗಿರುವಾಗ ಈಗ ನ್ಯಾಯಮಂಡಳಿಯ ಕ್ರಮಬದ್ಧತೆಯ ಪ್ರಶ್ನೆ ಎದ್ದಿದೆ ಎಂದೂ ಕರ್ನಾಟಕ ವಿವರಿಸಿದೆ.

ಆದರೆ, ಗಾಂಧೀ ಸಾಹಿತ್ಯ ಸಂಘವು ಮಂಡಳಿ ರಚನೆಯು ಸಂವಿಧಾನಬಾಹಿರವಾಗಿದ್ದು, ಈ ವಿವಾದವನ್ನು ಜಲಮಂಡಲಿ ಕಾಯ್ದೆಯ ಅಡಿಯಲ್ಲೇ ಬಗೆಹರಿಸಿಕೊಳ್ಳುವಂತೆ ಸೂಚಿಸುವಂತೆ ನ್ಯಾಯಾಲಯವನ್ನು ಕೋರಿತ್ತು. ಜ.24ರಂದು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸರ್ವೋನ್ನತ ನ್ಯಾಯಾಲಯವು ಅರ್ಜಿಯ ಕುರಿತು ಕರ್ನಾಟಕ ರಾಜ್ಯ ಸರಕಾರ ತನ್ನ ಅಭಿಪ್ರಾಯ ತಿಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಪ್ರಮಾಣ ಪತ್ರ ಸಲ್ಲಿಸಲು ಕರ್ನಾಟಕ ಸರಕಾರಕ್ಕೆ ಎರಡು ವಾರಗಳ ಕಾಲಾವಕಾಶವನ್ನೂ ನೀಡಿತ್ತು.

ಅದರಂತೆ ರಾಜ್ಯ ಸರಕಾರವು ಫೆ.7ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕಾಗಿತ್ತಾದರೂ, ವಿವಿಧ ಇಲಾಖೆಗಳಿಂದ ದಾಖಲೆ ಕ್ರೋಡೀಕರಿಸಲು ತಡವಾದ ಕಾರಣ ಒಂದು ವಾರ ತಡವಾಗಿ ಪ್ರಮಾಣ ಪತ್ರ ಸಲ್ಲಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡಿತು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X