ಮೈಸೂರಿನಲ್ಲಿ ನ.4ರಿಂದ ರಾಜ್ಯ ಮಹಿಳಾ ಸಮಾವೇಶ
ಹಾವೇರಿ : ಮೈಸೂರಿನ ಕಲಾಭವನದಲ್ಲಿ ನವೆಂಬರ್ 4 ಮತ್ತು 5ರಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ಮಹಿಳಾ ಸಮಾವೇಶ ಜರುಗಲಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಮೈಸೂರಿನ ಕದಿ ವೇದಿಕೆಯ ಆಶ್ರಯದಲ್ಲಿ ನಡೆಯಲಿರುವ ಈ ಸಮಾವೇಶವನ್ನು ರಾಜ್ಯಪಾಲರಾದ ರಮಾದೇವಿ ಅವರು, ಉದ್ಘಾಟಿಸುತ್ತಾರೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಸರೋಜಿನಿ ಶಿಂತ್ರಿ, ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು, ಸಚಿವೆ ರಾಣಿ ಸತೀಶ್ ಅವರು ಪಾಲ್ಗೊಳ್ಳುತ್ತಿದ್ದು, ಹಾವೇರಿ ಜಿಲ್ಲೆಯಿಂದ 30 ಮಹಿಳಾ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದೂ ಅವರು ಹೇಳಿದರು.
ಸಮಾವೇಶದ ಸಂದರ್ಭದಲ್ಲಿ ಏರ್ಪಡಿಸಲಾಗಿರುವ ಜಾಗತೀಕರಣ ಹಾಗೂ ಭಾರತೀಯ ಕುಟಂಬ ಜೀವನ ಎಂಬ ವಿಚಾರ ಸಂಕಿರಣವನ್ನು ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಅವರು ಉದ್ಘಾಟಿಸುತ್ತಿದ್ದು, ಡಾ. ಶಾಂತಾ ಇಮ್ರಾಪುರ್, ಗೊ.ರು. ಚೆನ್ನಬಸಪ್ಪ, ಗದುಗಿನ ತೊಂಟದ ಸಿದ್ಧಲಿಂಗ ಸ್ವಾಮೀಜಿ, ವಿಮಲಾ ಚೆನ್ನ ಬಸಪ್ಪ ಅವರು ವಿವಿಧ ವಿಷಯಗಳ ಬಗ್ಗೆ ತಮ್ಮ ವಿಚಾರ ಮಂಡಿಸಲಿದ್ದಾರೆ ಎಂದರು.
ಮಹಿಳಾ ಸಮಾವೇಶದ ಸಂದರ್ಭದಲ್ಲಿ ಹೆಸರಾಂತ ಗಾಯಕಿ ಕಸ್ತೂರಿ ಶಂಕರ್ ಹಾಗೂ ಹಿರಿಯ ರಂಗ ಕಲಾವಿದೆ ಜಯಶ್ರೀ ಅವರನ್ನು ಸನ್ಮಾನಿಸಲಾಗುವುದು ಎಂದೂ ತಿಳಿಸಿದರು.












Click it and Unblock the Notifications