ವಿಶ್ವ ಹಿಂದು ಪರಿಷತ್‌ನಿಂದ ಒಂದು ಲಕ್ಷ ಏಕೋಪಾಧ್ಯಾಯ ಶಾಲೆ
ವಿಜಯವಾಡ : ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಂದು ಲಕ್ಷ ಏಕೋಪಾಧ್ಯಾಯ ಶಾಲೆಗಳನ್ನು ( ಏಕಾಲ್ ವಿದ್ಯಾಲಯ ) ತೆರೆಯುವ ಕಾರ್ಯಕ್ರಮವನ್ನು ವಿಶ್ವಹಿಂದು ಪರಿಷತ್ ಹಮ್ಮಿಕೊಂಡಿದೆ. ದೇಶಾದ್ಯಂತ ಸ್ಥಾಪಿಸಲಾಗುವ ಈ ಶಾಲೆಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶ, ಬುಡಕಟ್ಟು ಪ್ರದೇಶ ಹಾಗೂ ಕೊಳಗೇರಿಗಳಲ್ಲಿ ತಲೆ ಎತ್ತಲಿವೆ. ಜತೆಗೆ , ಇದೇ ಅವಧಿಯಲ್ಲಿ ಗ್ರಾಮ ರಕ್ಷಕ ಸಮಿತಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಇರಾದೆಯನ್ನೂ ಪರಿಷತ್ ಪ್ರಕಟಿಸಿದೆ. ಸದ್ಯ ದೇಶದಲ್ಲಿ ಇಂಥ 25 ಸಾವಿರ ಸಮಿತಿಗಳು ಕೆಲಸ ಮಾಡುತ್ತಿವೆ.
ಪಶ್ಚಿಮದಿಂದ ಆಗುತ್ತಿರುವ ಸಾಂಸ್ಕೃತಿಕ ಆಕ್ರಮಣವನ್ನು ತಡೆಗಟ್ಟುವುದು, ಮುಗ್ಧ, ಬಡವ, ಮತ್ತು ತಿಳವಳಿಕೆ ರಹಿತ ಹಿಂದು ಸಮುದಾಯಕ್ಕೆ ಏಕತೆಯ ಭಾವವನ್ನು ಕಟ್ಟಿಕೊಡುವುದೇ ಏಕೋಪಾಧ್ಯಾಯ ಶಾಲೆ ಮತ್ತು ಗ್ರಾಮ ರಕ್ಷಕ ಸಮಿತಿಗಳ ಉದ್ದೇಶ ಎಂದು ಪರಿಷತ್ತಿನ ಅಖಿಲ ಭಾರತ ಕಾರ್ಯದರ್ಶಿ ವೈ. ರಾಘವುಲು ವಿಜಯವಾಡದಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಬಿಹಾರ, ಒರಿಸ್ಸ, ರಾಜಸ್ಥಾನ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಈಶಾನ್ಯ ಭಾರತದಲ್ಲಿ 5,000 ಏಕಾಲ್ ವಿದ್ಯಾಲಯಗಳನ್ನು ಈಗಾಗಲೇ ತೆರೆಯಲಾಗಿದೆ. ಸ್ವಂತ ಉದ್ಯೋಗ ಆಧಾರಿತ ಈ ವಿದ್ಯಾಭ್ಯಾಸ ಕಾರ್ಯಕ್ರಮವು ದೇಶದ 70 ದಶಲಕ್ಷ ಬುಡಕಟ್ಟು ಜನರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಆರಂಭಿಕ ಹೆಜ್ಜೆ ಮಾತ್ರ ಎಂದು ಪರಿಷತ್ತಿನ ಕಾರ್ಯದರ್ಶಿ ಹೇಳಿದರು.
ಬುಡಕಟ್ಟು ಜನರ ಇಷ್ಟೊಂದು ದೊಡ್ಡ ಸಮುದಾಯದಲ್ಲಿ ಓದು-ಬರಹ ಬಲ್ಲವರ ಸಂಖ್ಯೆ ಪ್ರತಿಶತ 8 ಮಾತ್ರ. ಬಡವರು, ಓದುಬರಹ ಗೊತ್ತಿಲ್ಲದವರು ದೇಶವಿರೋಧಿ ಶಕ್ತಿಗಳಿಗೆ ಸುಲಭವಾಗಿ ಈಡಾಗಿಬಿಡುತ್ತಾರೆ ಎಂದ ರಾಘವುಲು, ಏಕಾಲ್ ಶಾಲೆ ಮತ್ತು ಗ್ರಾಮ ರಕ್ಷಕ ಸಮಿತಿಗಳು ಇಂಥ ಆಕ್ರಮಣಗಳನ್ನು ಹಿಮ್ಮೆಟ್ಟಿಸಲು ಕಂಕಣಬದ್ಧವಾಗಿರುತ್ತವೆ ಎಂದು ಸಮರ್ಥಿಸಿಕೊಂಡರು.
(ಯುಎನ್‌ಐ)












Click it and Unblock the Notifications