ಕಾರ್ತೀಕ ಬಹುಳ ಅಮಾವಾಸ್ಯೆಯ ನ್ಯೂಸ್‌ ಬುಲೆಟಿನ್‌

ಬೆಂಗಳೂರು : ಭೀಮನ ಅಮಾವಾಸ್ಯೆಯ ದಿನ ಕನ್ನಡ ಚಿತ್ರರಂಗಕ್ಕೆ ಕವಿದ ಕಗ್ಗತ್ತಲು ಮಹಾಲಯ ಅಮಾವಾಸ್ಯೆ ಹಾಗೂ ದೀಪಾವಳಿಯ ಅಮಾವಾಸ್ಯೆ ಬಂದರೂ ಹರಿದಿಲ್ಲ. ಹಲವು ಗೊಂದಲಗಳ ನಡುವೆ ತೆರೆದ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಭಣಗುಡುತ್ತಿದ್ದರೆ, ಸೆಪ್ಟೆಂಬರ್‌ 25ರಿಂದ ಆರಂಭವಾದ ಕನ್ನಡ ಚಿತ್ರಗಳ ಚಿತ್ರೀಕರಣಕ್ಕೂ ಕಾವೇರಿಲ್ಲ. ಲಂಕೇಶನೊಬ್ಬ ಮಾತ್ರ ಕ್ಯಾಮರಾ ಎದುರಿಸಿದ್ದು ಬಿಟ್ಟರೆ, ಯಾವ ಶ್ರೀರಾಮ ಚಂದ್ರನೂ ಕ್ಯಾಮಾರಾ ಮುಂದೆ ಕಾಣಿಸಿಕೊಂಡಿಲ್ಲ.

ಒಂದೆರಡು ಹೊಸ ಕನ್ನಡ ಚಿತ್ರಗಳು ತೆರೆಕಂಡರೂ ಪ್ರೇಕ್ಷಕರಿಲ್ಲದೆ ಸೋಲುಂಡವು. ಗಲಾಟೆ ಅಳಿಯಂದಿರು, ಮುನ್ನುಡಿಯೇ ಮೊದಲಾದ ಚಿತ್ರಗಳಿಗೂ ಹೇಳಿಕೊಳ್ಳುವಂತಹ ಬೆಂಬಲ ಸಿಗಲಿಲ್ಲ. ಕಿಲಾಡಿ ಚಿತ್ರ ತನ್ನ ಕಿಲಾಡಿತನ ತೋರುವಲ್ಲಿ ವಿಫಲವಾಯಿತು. ದೇಸಾಯರ ಸ್ಪರ್ಶ ಅಕಾಲಸ್ಪರ್ಶಕ್ಕೊಳಗಾಗಿ ತನ್ನ ಹಿರಿಮೆಯನ್ನೇ ಕಳೆದುಕೊಂಡಿತು.

ಈ ಮಧ್ಯೆ ರಾಜ್‌ಕುಮಾರ್‌ ಇಂದು ಬಿಡುಗಡೆ ಆಗ್ತಾರೆ, ನಾಳೆ ಬಿಡುಗಡೆ ಆಗ್ತಾರೆೆ, ಇನ್ನೇನು ಬಂದೇ ಬಿಟ್ಟರು, ಸತ್ಯಮಂಗಲ ಕಾಡಿನ ಅಂಚಿನಲ್ಲಿದ್ದಾರೆ, ಕೆಲವೇ ಗಂಟೆಗಳಲ್ಲಿ ಬೆಂಗಳೂರಿಗೆ ಬರ್ತಾರೆ ಎಂಬ ಎಲ್ಲ ಸುದ್ದಿಗಳೂ ಸುಳ್ಳಾದವು. ಆರಂಭದ ದಿನಗಳಲ್ಲಿ ಅಪಾರ ಕಾಳಜಿ ವಹಿಸಿ ರಾಜ್‌ ಬಿಡುಗಡೆಗೆ ಹೆಣಗಾಡಿದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಈಗ ಎಲ್ಲ ಜವಾಬ್ದಾರಿಯನ್ನೂ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೂ ತಮಿಳು ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಮೇಲೂ ಹಾಕಿ ಸುಮ್ಮನಿದ್ದಾರೆ.

ಜನ ಎಲ್ಲ ಮರೆತು ಕೂತರೆ : ರಾಜ್‌ ಬಿಡುಗಡೆಗಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆಯುತ್ತಿದ್ದ ಪೂಜೆ, ಪುನಸ್ಕಾರ, ಹೋಮ, ಹವನ, ಪ್ರಾರ್ಥನೆ, ಉರುಳು ಸೇವೆಗಳೆಲ್ಲಾ ನಿಂತು ಹೋಗಿವೆ. ಕರ್ನಾಟಕ ಬಂದ್‌ನಂತರವಂತೂ ರಾಜ್ಯ ಶಾಂತವಾಗಿದೆ. ರಾಜ್‌ ಅಪಹರಣ ಪ್ರಕರಣ ಜನಮಾನಸದಿಂದ ಮರೆಯಾದಂತೆ ಕಂಡು ಬರುತ್ತಿದೆ. ದೀಪಾವಳಿಯ ಪಟಾಕಿಯ ಅಬ್ಬರ, ಹಬ್ಬದ ಸಡಗರ ನೋಡಿದರೆ, ಜನ ಎಲ್ಲವನ್ನೂ ಮರೆತಂತೆ ಕಾಣಬರುತ್ತದೆ.

ಇನ್ನು ಒತ್ತೆಯಾಳುಗಳ ಪೈಕಿ ಇಬ್ಬರು ಸುರಕ್ಷಿತವಾಗಿ ನಾಡಿಗೆ ಮರಳಿದ್ದಾರೆ. ನಾಗಪ್ಪ ಓಡಿ ಬರದಿದ್ದರೆ, ರಾಜ್‌ ಇಷ್ಟುಹೊತ್ತಿಗೆ ನಮ್ಮ ನಿಮ್ಮೊಡನಿರುತ್ತಿದ್ದರು ಎಂದೂ ರಾಜ್ಯದ ಆಡಳಿತದ ಹೊಣೆ ಹೊತ್ತ ಮಂದಿ ಹೇಳಿಯಾಗಿದೆ. ಔಪಚಾರಿಕವಾಗಿ ಶೀಘ್ರವೇ ರಾಜ್‌ ಅಪಹರಣ ಬಿಕ್ಕಟ್ಟಿಗೆ ತೆರೆ ಬೀಳುತ್ತದೆ ಎಂದು ಮುಖ್ಯಮಂತ್ರಿಗಳೇ ಹೇಳುತ್ತಿದ್ದರೂ, ಜನ ನಂಬುವ ಸ್ಥಿತಿಯಲ್ಲಿಲ್ಲ. ಮಿಗಿಲಾಗಿ ಬಹುತೇಕ ಮಂದಿಗೆ ಈಗ ಇದು ಸುದ್ದಿಯಾಗೇ ಉಳಿದಿಲ್ಲ. ಸರ್ಕಾರಕ್ಕೆ ವೀರಪ್ಪನ್‌ ಸಿಂಡ್ರೋಮ್‌ ಎಂಬ ಹೊಸ ಕಾಯಿಲೆ ಅಂಟಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಮೊನ್ನೆತಾನೆ ಆರಂಭವಾದ ಕರ್ನಾಟಕ ವಿಧಾನ ಮಂಡಲ ಕಲಾಪಗಳಲ್ಲಿ ರಾಜ್‌ ಅಪಹರಣ ವಿಷಯ ಏನೋ ಮಾಡಿಬಿಡುತ್ತದೆ ಎಂದು ನಿರೀಕ್ಷಿಸಿದ್ದವರಿಗೆಲ್ಲಾ ಅಚ್ಚರಿ ಆಗಿದೆ. ಸುದ್ದಿ ತಣ್ಣಗಾಗಿದೆ. ಮತ್ತೊಂದು ಅಮಾವಾಸ್ಯೆಯೂ ಇಂದು ಕಳೆಯುತ್ತದೆ. ಚಿತ್ರರಂಗಕ್ಕೆ ಹಾಗೂ ರಾಜ್ಯದ ಅಭಿವೃದ್ಧಿಗೆ ಪರೋಕ್ಷವಾಗಿ ಕವಿದಿರುವ ಕಾರ್ಮೋಡ ಯಾವಾಗ ಸರಿಯುತ್ತದೆ ಎಂಬ ಬಗ್ಗೆ ಕೊಂಚ ಮಾತ್ರ ಕುತೂಹಲ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+