• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿನಗೆ ಓಲೆ ಬರೆದಳಂತೆ....

By Super
|

ಎಷ್ಟು ಕರೆದರೂ ಒಳಗಿನಿಂದ ಉತ್ತರ ಬಾರದೆ ಇದ್ದಾಗ ಆನಂದನಿಗೆ ಗಾಬರಿಯಾಯಿತು. ಸುಗಂಧಿ ಒಳಗಿದ್ದರೆ ಇಷ್ಟು ಹೊತ್ತಿಗೆ ಬಾಗಿಲು ತೆರೆಯಬೇಕಿತ್ತು. ಆಕೆ ಮನೆಯಲ್ಲಿಲ್ಲದೇ ಹೋದರೆ ಹೊರಗಿನಿಂದ ಸರಪಳಿ ಜಡಿದು ಬೀಗ ಹಾಕಿರಬೇಕಿತ್ತು. ಹೊರಗಿನಿಂದ ಸರಪಳಿ ಹಾಕಿಲ್ಲ ಅಂದ ಮೇಲೆ ಒಳಗೆ ಸುಗಂಧಿ ಇರಲೇಬೇಕು.

ಆನಂದ ಕೆಳಗಿಳಿದು ಅಡುಗೆ ಮನೆಯ ಕಡೆ ಹೆಜ್ಜೆಹಾಕಿದ. ಅಡುಗೆ ಮನೆಯ ಕಿಟಕಿಯಿಂದ ಸುಗಂಧಿಯ ಮನೆಯಾಳಗೆ ಪೂರ್ತಿಯಾಗಿ ನೋಡಬಹುದಿತ್ತು. ಅತ್ತ ಹೆಜ್ಜೆಹಾಕುತ್ತಿದ್ದಂತೆಯೇ ಆತನಿಗೆ ಅನಗತ್ಯ ಅನುಮಾನಗಳು ಮೂಡತೊಡಗಿದವು.

ಅವುಗಳಲ್ಲಿ ಮೊದಲನೆಯದು; ಸುಗಂಧಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎನ್ನುವುದು. ಆ ಕಲ್ಪನೆ ಬಂದದ್ದೇ ತಡ ಆನಂದನಿಗೊಮ್ಮೆ ಮೈಜುಮ್ಮೆಂದಿತು. ಅದು ಅವಳನ್ನು ಕಳೆದುಕೊಳ್ಳುತ್ತೇನೆ ಎನ್ನುವ ದುಃಖದಿಂದಲ್ಲ, ಅವಳ ಕೊಲೆಯ ಆರೋಪ ತನ್ನ ಮೇಲೆ ಬಂದೀತೆಂಬ ಭಯದಿಂದ.

ಆ ಯೋಚನೆ ಬಂದಿದ್ದಕ್ಕೆ ಅವನಿಗೆ ತನ್ನ ಬಗ್ಗೆಯೇ ಅಸಹ್ಯವೆನ್ನಿಸಿತು. ತಾನಿನ್ನೂ ಬ್ರಾಹ್ಮಣತ್ವ ಕಳಕೊಂಡಿಲ್ಲ, ಅದಕ್ಕೇ ಹೀಗೆ ಯೋಚಿಸುತ್ತಿದ್ದೇನೆ ಅಂದುಕೊಂಡ. ಅವನ ಗುರುಗಳು ಹೇಳುವ ಹಾಗೆ ಬ್ರಾಹ್ಮಣರಿಗೆ ಹೃದಯವಿಲ್ಲ. ಬುದ್ಧಿ ಮಾತ್ರ ಇದೆ. ಅವರು ಪ್ರತಿಯಾಂದನ್ನೂ ತೂಗಿ ಅಳೆದು ನೋಡುತ್ತಾರೆ. ಒಂದು ರೀತಿಯಲ್ಲಿ ಅವರು ದೇವತೆಗಳಿದ್ದ ಹಾಗೆ; ಸಮಚಿತ್ತರು. ಎಂದೂ ಭಾವಾವೇಶಕ್ಕೆ ತುತ್ತಾಗುವುದಿಲ್ಲ. ಹೊಡೆದಾಟಕ್ಕೆ ಇಳಿಯುವುದಿಲ್ಲ. ತಮ್ಮನ್ನು ದ್ವೇಷಿಸುವವರೂ ಅವರಾಗಿಯೇ ನಾಶವಾಗುವಂತೆ ಮಾಡುತ್ತಾರೆ. ಆದರೆ ಶೂದ್ರರು ರಾಕ್ಷಸರ ಹಾಗೆ. ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ. ಆಡಿದ್ದನ್ನೇ ಮಾಡುತ್ತಾರೆ, ಮಾಡುವುದನ್ನೇ ಆಡುತ್ತಾರೆ. ಕುಯುಕ್ತಿ ಮಾಡುವುದಿಲ್ಲ.

ಸುಗಂಧಿ ಸತ್ತಿದ್ದಾಳೇನೋ ಎಂಬ ಅನುಮಾನವೇ ತನ್ನಲ್ಲಿ ಅಪಾರವಾದ ದುಃಖಕ್ಕೆ ಕಾರಣವಾಗಬೇಕಿತ್ತು. ಅದು ಬಿಟ್ಟು ಅದರ ಅಪವಾದ ತನ್ನ ಮೇಲೆ ಬರುತ್ತದೇನೋ ಎಂದು ಯೋಚಿಸುತ್ತಿದ್ದೇನೆ. ಹಾಗಂತ ಮುನ್ನುಗ್ಗುವ ಧೈರ್ಯವೂ ಇಲ್ಲ. ಈಗೇನು ಮಾಡುವುದು, ಬಾಗಿಲು ಒಡೆದು ಒಳಗೆ ನುಗ್ಗುವುದೇ? ಅಥವಾ ಯಾರನ್ನಾದರೂ ಕರೆದು ಒಳಗೆ ಹೋಗುವುದೇ? ಅಥವಾ ಸುಮ್ಮನೆ ವಾಪಸ್ಸು ಹೋಗಿಬಿಡುವುದೇ?

ಆನಂದ ಯೋಚಿಸುತ್ತಾ ನಿಂತ. ಅಡುಗೆ ಮನೆಯ ಹತ್ತಿರ ಬಂದು ಕಿಟಕಿಯ ಬಾಗಿಲನ್ನು ಮೆಲ್ಲಗೆ ತಳ್ಳುತ್ತಿದ್ದಂತೆ ಏನೋ ಬಿದ್ದ ಸದ್ದಾಯಿತು. ಕಿಟಿಕಿಯಲ್ಲಿಟ್ಟ ಯಾವುದೋ ಡಬ್ಬವಿರಬೇಕು ಅಂದುಕೊಂಡು ಆನಂದ ಕಿಟಕಿಯಿಂದ ಒಳಗೆ ನೋಡಿದ.

ಒಳಗೆ ಕತ್ತಲಿತ್ತು. ಆ ಕತ್ತಲನ್ನು ಸೀಳಿ ನೋಡುವುದು ಆನಂದನಿಗೆ ಸಾಧ್ಯವಾಗಲಿಲ್ಲ. ತೆರೆದ ಕಿಟಿಕಿಯಿಂದ ಬೆಳಕು ನಿಧಾನವಾಗಿ ಒಳನುಗ್ಗಿ ಇಷ್ಟಿಷ್ಟೇ ಜಾಗವನ್ನು ಬೆಳಗಿತ್ತು. ಒಂದು ಟಾರ್ಚ್‌ ತಂದು ಒಳಗೆ ನೋಡುವುದೇ ಸರಿ ಅಂದುಕೊಳ್ಳುತ್ತಾ ಸುಗಂಧಿ ಮನೆಯ ನಿಗೂಢವನ್ನು ತಿಳಿಯಲಾರದೆ ಆನಂದ ಮನೆಯತ್ತ ಹೆಜ್ಜೆಹಾಕಿದ.

ಮನೆಯಲ್ಲಿ ಸೋಮಯಾಜಿಗಳಿರಲಿಲ್ಲ. ಆದರೆ ಬೀಗದ ಕೈ ಇರಬೇಕಾದ ಜಾಗದಲ್ಲಿತ್ತು. ಬಾಗಿಲು ತೆರೆದು ಒಳಗೆ ಕಾಲಿಡುತ್ತಿದ್ದಂತೆ ತಾನು ಯಾರದೋ ಮನೆಯಾಳಗೆ ಕಾಲಿಡುತ್ತಿದ್ದೇನೆ ಎನ್ನುವ ವಿಚಿತ್ರವಾದ ಭಾವನೆಯಾಂದು ಆನಂದನನ್ನು ಆವರಿಸಿತು. ತುಂಬ ದಿನ ಮನೆಗೆ ಬರದೇ ಇದ್ದಾಗ ಹಾಗಾಗುತ್ತದೇನೋ ಅನ್ನಿಸಿ ಸಮಾಧಾನ ಮಾಡಿಕೊಂಡ.

ಸೋಮಯಾಜಿಗಳು ಬೆಳಗ್ಗೆಯೇ ಎದ್ದು ಹೊರಗೆ ಹೋಗಿರಬೇಕು. ಒಲೆ ಹತ್ತಿಸಿರಲಿಲ್ಲ. ಹಾಲೂ ಇದ್ದ ಹಾಗೆ ಕಾಣಲಿಲ್ಲ. ಏಕಾಂತದ ಸುಖ ಮತ್ತು ಏಕತಾನತೆಯನ್ನು ಸವಿಯುತ್ತಾ ಆನಂದ ಮತ್ತೆ ಸುಗಂಧಿಯ ಬಗ್ಗೆ ಯೋಚಿಸಿದ. ಅವಳು ಎಲ್ಲಿಗೆ ಹೋಗಿರಬಹುದು. ತಾನು ಬರಲಿಲ್ಲ ಎಂದುಕೊಂಡು ಬೇರೆ ಊರಿಗೇನಾದರೂ ಹೋಗಿರಬಹುದೇ? ಜ್ವರ ಬಂದು ಮಲಗಿರಬಹುದೇ? ತಾನು ಕರೆಯುವ ಹೊತ್ತಿಗೆ ಗಾಢ ನಿದ್ದೆಯಲ್ಲಿದ್ದಿರಬಹುದೇ? ರಾತ್ರಿ ಮತ್ತೊಮ್ಮೆ ಹೋಗಿ ನೋಡಬೇಕು ಅಂದುಕೊಂಡ.

ಅಷ್ಟು ಹೊತ್ತಿಗೆ ಹೊರಗೆ ಬಾಗಿಲು ಕುಟ್ಟಿದ ಸದ್ದಾಯಿತು. ಆನಂದ ಎದ್ದು ಬಾಗಿಲು ತೆಗೆದರೆ ಹೊರಗೆ ಹಿಂದಿನ ಮನೆಯ ಐತಪ್ಪ ನಿಂತಿದ್ದ. ಅವನು ಸೋಮಯಾಜಿಗಳ ಗುಡ್ಡದಲ್ಲಿರುವ ನಾಲ್ಕೈದು ತಾಳೆಮರಗಳಿಂದ ಹೆಂಡ ಇಳಿಸುತ್ತಾನೆ. ವರ್ಷಕ್ಕೊಮ್ಮೆ ಹೊರೆ ಕಾಣಿಕೆ ಅಂತ ಒಂದು ಮುಡಿ ಅಕ್ಕಿ ತಂದುಕೊಡುತ್ತಾನೆ.

'ಓ.... ನೀವಾ.... ದೊಡ್ಡ ದನಿಯವರು ಬಂದ್ರು ಅಂತಂದುಕೊಂಡು ಬಂದೆ" ಎನ್ನುತ್ತಾ ಐತಪ್ಪ ನಕ್ಕ. ಅವನ ವೇಷಭೂಷಣಗಳನ್ನೇ ವಿಚಿತ್ರ ಕುತೂಹಲದಿಂದ ನೋಡಿದ ಆನಂದ. ಎಷ್ಟು ನೋಡಿದರೂ ಪೂರ್ತಿ ಚಿತ್ರ ಸಿಗದಷ್ಟು ವಿವರಗಳು ಅವನಲ್ಲಿದ್ದವು. ತಲೆಯಲ್ಲೊಂದು ಮುಟ್ಟಾಳೆ, ಮುಖದ ತುಂಬ ನೆರಿಗೆಗಳು, ಎಲೆಯಡಿಕೆ ಜಗಿದು ಜಗಿದು ಸತ್ತ ಕರ್ರಗಿನ ಹಲ್ಲುಗಳು, ಕತ್ತಿನ ಹತ್ತಿರ ಕೋಳಿಪರಚಿದ ಗಾಯ, ಸೊಂಟಕ್ಕೆ ಬಿಗಿದ ಮೂರೇ ಗೇಣಿನ ಬೈರಾಸ. ಅದರೊಳಗಿಂದ ನೇತಾಡುವ ಲಂಗೋಟಿಯ ಚುಂಗು, ಸೊಂಟಕ್ಕೆ ಕಟ್ಟಿಕೊಂಡ ಮರಕ್ಕೆ ಹತ್ತಲು ಬಳಸುವ ಹಾಳೆಯಿಂದ ಮಾಡಿದ ತಳೆ, ಸೊಂಟಕ್ಕೆ ಕತ್ತಿ ಸಿಲುಕಿಸುವುದಕ್ಕೆಂದೇ ಇರುವ ಕತ್ತಿಕೂಟು, ಕಾಲಿಗೆ ಬಳೆ, ಯಾವತ್ತೂ ತೆಗೆಯದೇ ತಮ್ಮ ಪಾಡಿಗೆ ತಾವೇ ಮುರುಟಿಕೊಂಡ ಉಗುರುಗಳು....

'ಏನು ಹೇಳು ಐತಪ್ಪಾ..... ತಂದೆಯವರಿಗೆ ಏನು ಹೇಳಬೇಕು".

'ಏನಿಲ್ಲ ದಣಿ, ಅವರಿಗೊಂದು ಕಾಗದ ಕೊಡಬೇಕಿತ್ತು" ಎಂದು ಐತಪ್ಪ ಕೈಮುಂದೆ ಮಾಡಿದ.

'ಯಾರು ಕೊಟ್ಟದ್ದು" ಎಂದು ಕೇಳುತ್ತಾ ಆನಂದ ಪತ್ರವನ್ನು ಕೈಗೆತ್ತಿಕೊಂಡ. ಅಕ್ಷರಗಳು ಪರಿಚಿತ ಅನ್ನಿಸಿದವು. ಯಾರದಿರಬಹುದು ಎಂದು ಯೋಚಿಸುತ್ತಾ ಪತ್ರ ಹಾಕಿದ ಕವರನ್ನೇ ತನ್ಮಯನಾಗಿ ನೋಡಿದ ಆನಂದ.

'ಸುಗಂಧಿ ಇದ್ದಾಳಲ್ಲ. ಅವಳು ಬಂದಿದ್ದಳು. ದೊಡ್ಡ ಧಣಿಯವರಿಗೆ ಕೊಡೋಕೆ ಹೇಳಿ ಹೋದ್ಳು. ಬೇರೆಯವರಿಗೆ ಕೊಡಬೇಡಿ ಅಂದಿದ್ದಾಳೆ. ಆದರೆ ನೀವು ಎಷ್ಟಾದರೂ ಅವರ ಮಗನಲ್ಲವೇ. ತಗೊಳ್ಳಿ" ಎಂದು ಐತಪ್ಪ ಹೊರಟ.

ಸುಗಂಧಿ ಅಪ್ಪಯ್ಯನಿಗೆ ಕಾಗದ ಬರೆದಿದ್ದಾಳಾ? ಅಂದರೆ ತನ್ನ ಬಗ್ಗೆಯೇ ಇರಬಹುದು. ತನ್ನ ಅವಳ ಸಂಬಂಧದ ಬಗ್ಗೆ ಇರಬಹುದು. ತಾನು ಅವಳಿಗೆ ಮೋಸ ಮಾಡಿದೆ ಎಂದು ಬರೆದಿರಬಹುದು.

ಸುಗಂಧಿಯ ಮನೆಯ ಬಾಗಿಲು ಯಾಕೆ ತೆರೆದುಕೊಳ್ಳಲಿಲ್ಲ ಅನ್ನೋದು ಹೊಳೆದವನಂತೆ ಆನಂದ ನಕ್ಕ. 'ಅಪ್ಪನ ಕೈಗೆ ಪತ್ರ ಕೊಟ್ಟು ಹೋಗಿದ್ದಾಳೆ. ಅದನ್ನು ಓದಿ ಅಪ್ಪಯ್ಯ ನನಗೆ ಬೈದಿದ್ದಾರೆ ಅಂದುಕೊಂಡಿದ್ದಾಳೆ. ನಾನು ಗದರಿಸಲಿಕ್ಕೆ ಬಂದಿದ್ದೇನೆ ಅಂದುಕೊಂಡು ಮನೆಯಾಳಗೆ ಅಡಗಿ ಕುಳಿತಿದ್ದಾಳೆ"

ಆನಂದ ಮನಸ್ಸಿನಲ್ಲೇ ನಗುತ್ತಾ ಆ ಪತ್ರವನ್ನು ಬೆಳಕಿಗೆತ್ತಿ ಹಿಡಿದು ನೋಡಿದ. ಏನೂ ಕಾಣಿಸಲಿಲ್ಲ. ಅಪ್ಪಾಜಿಗೆ ಕೊಡುವ ಮೊದಲು ಓದಿಬಿಡಬೇಕೆಂದು ಮೆತ್ತಗೆ ಅದನ್ನು ಒಡೆದು ಓದತೊಡಗಿದ.

ಮೊದಲ ಸಾಲಿನಲ್ಲೇ ಸುಗಂಧಿ ಬರೆದಿದ್ದಳು.

ದೊಡ್ಡ ಧಣಿಯವರಿಗೆ....

ಆನಂದ ತಲೆಯೆತ್ತಿ ನೋಡಿ, ಒಂದೇ ಕೈಲಿ ಬಾಗಿಲು ಹಾಕುತ್ತಾ ಒಳಗೆ ನಡೆಯುತ್ತಲೇ ಪತ್ರ ಓದತೊಡಗಿದ

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X