Tomato Juice Recipe: ಈ ಬೇಸಿಗೆಗೆ ತಣ್ಣಗೆ ಟೊಮೆಟೊ ಜ್ಯೂಸ್ ಮಾಡಿ ಕುಡಿಯಿರಿ
ಟೊಮೆಟೊ ಹಣ್ಣು ಪೌಷ್ಟಿಕಾಂಶ ಸಮೃದ್ಧವಾಗಿದ್ದು, ನಿಮ್ಮ ಪ್ರತಿ ದಿನದ ಆಹಾರದಲ್ಲಿ ಟೊಮೆಟೊ ಇದ್ದೇ ಇರುತ್ತದೆ. ಟೊಮೆಟೊ ಆಹಾರ ಖಾದ್ಯಗಳ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯವನ್ನು ಸಹ ಕಾಪಾಡುತ್ತದೆ. ಟೊಮೆಟೊದಲ್ಲಿ ವಿಟಮಿನ್, ಮಿನರಲ್ಸ್, ಪ್ರೊಟೀನ್, ಪೊಟ್ಯಾಶಿಯಂ ಹಾಗೂ ಫೋಲೇಟ್ ಅಂಶವಿದ್ದು, ಇದು ಚರ್ಮದ ಕಾಂತಿ, ತೂಕ ಕಾಪಾಡಲು ಮೂಳೆಗಳ ಆರೋಗ್ಯಕ್ಕೆ ನೆರವಾಗುತ್ತದೆ.
ಪ್ರತಿನಿತ್ಯದ ಆಹಾರದ ಖಾದ್ಯಗಳಲ್ಲಿ ಟೊಮೆಟೊ ಸೇವಿಸಿರುತ್ತೀರಾ, ಇದನ್ನು ಬಿಟ್ಟು ಟೊಮೆಟೊ ಬಾತ್, ಟೊಮೆಟೊ ಉಪ್ಪಿನಕಾಯಿ, ಟೊಮೆಟೊ ರಸಂ, ಟೊಮೆಟೊ ಸಲಾಡ್ , ಟೊಮೆಟೊ ಸೂಪ್ ಸೇರಿದಂತೆ ನಿರ್ಧಿಷ್ಟವಾದ ಟೊಮೆಟೊದಿಂದ ಮಾಡಿದ ಖಾದ್ಯಗಳನ್ನು ಸಹ ತಿಂದಿರುತ್ತೀರಿ. ಆದರೆ ಎಂದಾದರೂ ಟೊಮೆಟೊ ಜ್ಯೂಸ್ ಕುಡಿದಿದ್ದೀರಾ..? ಹಾಗಾದರೆ ಇಂದೇ ಟ್ರೈ ಮಾಡಿ.

ಸೆಕೆ ಹಾಗೂ ಬಿಸಿಲಿನಿಂದ ಆಗಾಗ ನೀರು, ತಂಪು ಪಾನೀಯಗಳನ್ನು ಕುಡಿಯಬೇಕು ಅನಿಸುವುದು ಸಾಮಾನ್ಯ. ಪ್ರತಿನಿತ್ಯ ನಿಂಬೆ ಜ್ಯೂಸ್, ಮಜ್ಜಿಗೆ, ಕಲ್ಲಂಗಡಿ ಜ್ಯೂಸ್ ಕುಡಿದು ಬೋರ್ ಆಗಿದ್ದರೆ ಹೊಸ ಪಾಕ ವಿಧಾನವನ್ನು ಪ್ರಯತ್ನಿಸಿ. ಹೊರಗಡೆ ಬೇಸಿಗೆ ಬಿಸಿಲಿಗೆ ತಂಪಾದ ಜ್ಯೂಸ್ ಕುಡಿಯಬೇಕು ಎಂದು ಅನಿಸುತ್ತಿದ್ದರೆ ತಪ್ಪದೇ ಈ ಟೊಮೆಟೊ ಜ್ಯೂಸ್ ತಯಾರಿಸಿ ಕುಡಿಯಿರಿ.
ಟೊಮೆಟೊ ಜ್ಯೂಸ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಮಧ್ಯಮ ಗಾತ್ರದ ಟೊಮೆಟೊ - 4
ಸಕ್ಕರೆ -8 ಟೀಸ್ಪೂನ್ ಹಾಗೂ ನಿಮ್ಮ ರುಚಿಗೆ ತಕ್ಕಂತೆ
ತುರಿದ ತೆಂಗಿನಕಾಯಿ -1/2 ಕಪ್
ನೀರು-1.5 ಕಪ್
ಟೊಮೆಟೊ ಜ್ಯೂಸ್ ತಯಾರಿಸುವ ವಿಧಾನ
ಆರೋಗ್ಯಕ್ಕೆ ಹಿತ, ನಾಲಿಗೆಗೆ ರುಚಿ ಹಾಗೂ ದೇಹಕ್ಕೆ ತಂಪಾದ ಟೊಮೆಟೊ ಜ್ಯೂಸ್ ಅನ್ನು ಬಹಳ ಸುಲಭವಾಗಿ ತಯಾರಿಸಬಹುದು. ಮೊದಲು ಮಧ್ಯಮ ಗಾತ್ರದ 4 ಟೊಮೆಟೊ ಹಣ್ಣುಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಬಳಿಕ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಟೊಮೆಟೊ ತುಂಡುಗಳ ಜೊತೆ ತೆಂಗಿನ ತುರಿ ಮತ್ತು ಸಕ್ಕರೆಯನ್ನು ಸೇರಿದಿ ಮಿಕ್ಸಿ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

ಈ ಟೊಮೆಟೊ, ಸಕ್ಕರೆ ಹಾಗೂ ತೆಂಗಿನ ತುರಿ ಮಿಶ್ರಣಕ್ಕೆ ಒಂದು ಕಪ್ ನೀರು ಸೇರಿಸಿ ಮತ್ತೆ ರುಬ್ಬಿಕೊಳ್ಳಿ. ಬಳಿಕ ಮಿಕ್ಸಿ ಜಾರ್‌ನಿಂದ ಹೊರ ತೆಗೆದು ಅಗತ್ಯವಿರುವಷ್ಟು ನೀರು ಹಾಗೂ ನಿಮ್ಮ ರುಚಿಗೆ ತಕ್ಕಷ್ಟು ಸಿಹಿ ಸೇರಿಸಿಕೊಳ್ಳಿ. ಬಳಿಕ ಒಂದು ಪಾತ್ರೆ ಹಾಗೂ ಜಾರು ಬಳಸಿ ಚೆನ್ನಾಗಿ ಸೋಸಿಕೊಂಡು ಜ್ಯೂಸ್ ಬೇರರ್ಪಡಿಸಿಕೊಳ್ಳಿ. ಬಳಿಕ ಇದನ್ನು ಗ್ಲಾಸ್‌ಗೆ ಸರ್ವ್ ಮಾಡಿಕೊಂಡು, ನಿಮಗೆ ಅಗತ್ಯವಿದ್ದರೆ ಒಂದು ತುಂಡು ಐಸ್ ಕ್ಯೂಬ್ ಸೇರಿಸಿ ಕುಡಿಯಿರಿ.












Click it and Unblock the Notifications