Government employee; ತುಟ್ಟಿಭತ್ಯೆ ಬಿಡುಗಡೆಗೆ ಪತ್ರ
ಬೆಂಗಳೂರು, ಮೇ 22; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪೂರ್ಣಗೊಂಡು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 1/1/2023ರಿಂದ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡುವ ಬಗ್ಗೆ ಪತ್ರ ಬರೆಯಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಈ ಕುರಿತು ಮುಖ್ಯಮಂತ್ರಿಗಳು, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ. ಕೇಂದ್ರ ಸರ್ಕಾರದ 3/4/2023ರ ಆದೇಶವನ್ನು ಉಲ್ಲೇಖಿಸಿದ್ದಾರೆ.

ಕೇಂದ್ರ ಸರ್ಕಾರವು ತನ್ನ ನೌಕರರಿಗೆ ದಿನಾಂಕ 01/01/2023ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ 4 ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ್ದು, ಅದರಂತೆ ರಾಜ್ಯ ಸರ್ಕಾರಿ ನೌಕರರಿಗೂ ಶೇ 4 ತುಟ್ಟಿಭತ್ಯೆ ಬಿಡುಗಡೆ ಮಾಡಲು ಸಂಘವು ಮನವಿ ಮಾಡಿತ್ತು. ಸದರಿ ಕಡತವನ್ನು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಪ್ರಯುಕ್ತ ಬಾಕಿ ಇಡಲಾಗಿತ್ತು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರಸ್ತುತ ನೀತಿ ಸಂಹಿತೆಯು ಅಂತ್ಯಗೊಂಡಿರುವುದರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01/01/2023ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ 4ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಲು ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಹಿಂದೆಯೂ ಪತ್ರ ಬರೆದಿದ್ದರು; ಈ ಹಿಂದೆ ಸಿ. ಎಸ್. ಷಡಾಕ್ಷರಿ ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನೌಕರರಿಗೆ ಶೇ 4ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಿ ಆದೇಶ ಹೊರಡಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದರು.
ಮಾರ್ಚ್ 29ರಂದು ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿತ್ತು. ತಕ್ಷಣ ನೀತಿ ಸಂಹಿತೆ ಜಾರಿಗೆ ಬಂದಿತ್ತು, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತುಟ್ಟಿಭತ್ಯೆ ಪ್ರಸ್ತಾವನೆಯನ್ನು ಸರ್ಕಾರದಿಂದ ರಾಜ್ಯ ಚುನಾವಣಾ ಆಯೋಗದ ಮುಖಾಂತರ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿತ್ತು.
ಆಗ ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಗಳು ಜಾರಿಯಲ್ಲಿರುವುದರಿಂದ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಬಾಕಿ ತುಟ್ಟಿಭತ್ಯೆ ಬಗ್ಗೆ ಕ್ರಮಕೈಗೊಳ್ಳಲು ತಿಳಿಸಿತ್ತು. ಮೇ 13ರಂದು ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಮೇ 14ರಿಂದ ನೀತಿ ಸಂಹಿತೆ ವಾಪಸ್ ಪಡೆಯಲಾಗಿದೆ.
ಕೇಂದ್ರ ಸರ್ಕಾರ ದಿನಾಂಕ 7/4/2023 ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ ಕರ್ನಾಟಕ ರಾಜ್ಯ ಸರ್ಕಾರವೂ ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಈ ಹಿಂದಿನಿಂದಲೂ ಮಂಜೂರು ಮಾಡಿರುತ್ತದೆ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ವಿವರಣೆ ನೀಡಲಾಗಿತ್ತು.
ಕೇಂದ್ರ ಸರ್ಕಾರವು ತನ್ನ ನೌಕರರಿಗೆ ದಿನಾಂಕ 1/1/2023ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ 4ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿರುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಸಹ ದಿನಾಂಕ 1/1/2023ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ4 ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರ್ಕಾರದರಿಂದ ಆದೇಶವಾಗಿರಲಿಲ್ಲ.












Click it and Unblock the Notifications