Krishna janmashtami 2023: ಅಷ್ಟಮಿ ಸಂಭ್ರಮಕ್ಕೆ ಸಜ್ಜಾದ ಕೃಷ್ಣನಗರಿ, ಕಾರ್ಯಕ್ರಮಗಳ ವಿವರ ಹೀಗಿದೆ
ಉಡುಪಿ, ಸೆಪ್ಟೆಂಬರ್, 05: ಉಡುಪಿಯ ಪುರದೊಡೆಯ ಶ್ರೀ ಕೃಷ್ಣನ ಜನ್ಮಷ್ಟಾಮಿಗೆ ಕ್ಷಣಗಣನೆ ಆರಂಭವಾಗಿದೆ. ಶ್ರೀ ಕೃಷ್ಣ ಮಠದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಜನ್ಮಾಷ್ಟಮಿಯ ಅಂತಿಮ ಸಿದ್ಥತೆಗಳು ನಡೆಯುತ್ತಿದೆ. ಮಠದ ರಥಬೀದಿಯ ಸುತ್ತ ಗುರ್ಜಿ ಹಾಕುವ, ದೀಪಾಲಂಕಾರ ಪ್ರಕ್ರಿಯೆಯೂ ಆರಂಭವಾಗಿದೆ.
ಶ್ರೀ ಕೃಷ್ಣ ಮಠದಲ್ಲಿ ಹೂವಿನ ಅಂಲಕಾರ ಭರದಿಂದ ನಡೆಯುತ್ತಿದೆ. ಪಾಠ ಶಾಲೆಯಲ್ಲಿ ಉಂಡೆ-ಚಕ್ಕುಲಿ ತಯಾರಿಯೂ ಆರಂಭವಾಗಿದೆ. ಸುಮಾರು 50 ಮಂದಿ ಬಾಣಸಿಗರು ಉಂಡೆ-ಚಕ್ಕುಲಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಸೆಪ್ಟೆಂಬರ್ 6ರಂದು ಮಧ್ಯರಾತ್ರಿ ಉಂಡೆ-ಚಕ್ಕುಲಿಗಳನ್ನು ದೇವರಿಗೆ ನೈವೇದ್ಯ ರೂಪದಲ್ಲಿ ನೀಡಲಾಗುತ್ತದೆ. ಸೆಪ್ಟೆಂಬರ್ 7ರಂದು ವಿಶ್ವಪ್ರಸಿದ್ಧ ಉಡುಪಿಯ ವಿಟ್ಲಪಿಂಡಿ ಉತ್ಸವ ನಡೆಯಲಿದೆ.

ನಂತರ ಕೃಷ್ಣನ ಮೃಣ್ಮಯ ಮೂರ್ತಿ ಪೂಜೆಗೊಳ್ಳಲಿದೆ. ಮೃಣ್ಮಯ ಮೂರ್ತಿಯನ್ನು ರಚಿಸುವ ಕಾರ್ಯ ಕಲಾವಿದ ಸೋಮನಾಥ ಚಿಟ್ಪಾಡಿ ಅವರಿಂದ ನಡೆಯುತ್ತಿದೆ. ಮೃಣ್ಮಯ ಮೂರ್ತಿಯನ್ನು ಬಳಸಲೂ ಕಾರಣವಿದೆ. ಸದ್ಯ ಚಾತುರ್ಮಾಸ ಕಾಲವಾಗಿರುವುದರಿಂದ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರಗೆ ತರುವಂತಿಲ್ಲ. ಹೀಗಾಗಿ ಮಣ್ಣಿನ ಮೂರ್ತಿಯನ್ನು ತಯಾರಿಸಿ ಪೂಜೆ ಮಾಡಲಾಗುತ್ತದೆ..
ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಸೆಪ್ಟೆಂಬರ್ 1ರಿಂದ 8 ರವರೆಗೆ ಅಷ್ಟದಿನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ನಿತ್ಯ ಪ್ರವಚನ, ನೃತ್ಯ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜಾಂಗಣದಲ್ಲಿ ನಡೆಯುತ್ತಿದೆ.
ಸೆಪ್ಟೆಂಬರ್ 7 ರಂದು ನಡೆಯುವ ವಿಟ್ಲ ಪಿಂಡಿ ಉತ್ಸವದಂದು ಗೊಲ್ಲರು ಮೊಸರು ಕುಡಿಕೆಗಳನ್ನು ಒಡೆಯಲಿದ್ದಾರೆ. ವಿಟ್ಲ ಪಿಂಡಿಯಂದು ಏಕಾದಶಿ ವೃತ, ನಿರ್ಜಲ ಉಪವಾಸ ಇರುವುದರಿಂದ ಕೃಷ್ಣನಿಗೆ ಬೇಗನೇ ಪೂಜೆಗಳನ್ನು ಮಾಡಲಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ಅನ್ನಬ್ರಹ್ಮ ಮತ್ತು ಭೋಜನ ಶಾಲೆಯಲ್ಲಿ ನಿರಂತರ ಅನ್ನದಾನ ನಡೆಯಲಿದೆ. ಉಡುಪಿ ಅಷ್ಟಮಿಯ ಪ್ರಸಿದ್ಧ ಹುಲಿವೇಷ ಕುಣಿತ ಪ್ರದರ್ಶಿಸಲು ಹುಲಿವೇಷ ತಂಡಗಳು ಸಜ್ಜಾಗಿದೆ. ಈ ಬಾರಿ ವಿಶೇಷವಾಗಿ ಮಹಿಳಾ ಹುಲಿ ವೇಷಧಾರಿಗಳ ತಂಡ ಅಷ್ಟಮಿಗೆ ಹೆಜ್ಜೆ ಹಾಕಲಾಗಿದೆ.












Click it and Unblock the Notifications