ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಣ್ಣದ ಹಬ್ಬದ ವಿಶೇಷ: "ರಂಗುರಂಗಿನ ಆಟ ಮೈಮನಗಳಲ್ಲಿ!"

By ಶ್ರೀದೇವಿ ಹುಕ್ಕೇರಿ (ಸಿರಿಗಂಧ), ಬೆಳಗಾವಿ
|
Google Oneindia Kannada News

ಫಾಲ್ಗುಣ ಕಳೆದು ಚೈತ್ರ ಮಾಸ ಕಾಲಿಟ್ಟರೆ ಸಾಕು ಮೈಮನಗಳಲ್ಲಿ ಅದೇನೋ ಒಂಥರಾ ಪುಳಕ, ರೊಮಾಂಚನ ಅಲ್ವಾ!? ಇಡೀ ಪ್ರಕೃತಿಯೇ ಮೈದುಂಬಿ ನಳನಳಿಸುವ ಸಂಭ್ರಮ.

ಎಲ್ಲೆಡೆ ಹೊಸ ಎಲೆ, ಚಿಗುರುಗಳು, ಗಿಡಮರಗಳಲೆಲ್ಲಾ ಹೂ,ಮಿಡಿ ಕಾಯಿ ಗಳು ಬಿಡುವ ಹೊಸತನದ ಕಾಲ. ಕಣ್ಮಣಗಳಿಗೆ ತಂಪನ್ನೀಯುವ ಮಾಮರ, ಕಿವಿಗಳಿಗೆ ಇಂಪನ್ನೀಯುವ ಕೋಗಿಲೆ ಗಾನ. ಇದಕ್ಕೆ ಮನಸೊಲದೇ ಯಾರಿದ್ದಾರೆ ನೀವೇ ಹೇಳಿ?. ಇವೆಲ್ಲವುಗಳ ಜೊತೆ ಜೊತೆಯಲಿ ಮತ್ತಷ್ಟು ರಂಗಿನ ಮೆರುಗು ಮೂಡಿಸಲು ಮನ್ಮಥನ ಬಂಟ ವಸಂತನ ಆಗಮನ. ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನೂತನ ವರ್ಷಾಚರಣೆಗೆ ಸ್ವಾಗತ ಕೋರುವ ಸಲುವಾಗಿಯೇ ಪ್ರಕೃತಿ ಶೃಂಗಾರಗೊಂಡಿದೆಯೇನೋ ಎನ್ನುವ ಭಾವ ಸೃಷ್ಟಿಸುವ ಸಕಾಲ ಇದಾಗಿದೆ.

Holi festival significance, How it is related to Shiva and Parvati

ಪ್ರಥಮ ಹಬ್ಬವೇ ರಂಗು ರಂಗಿನ ಹೋಳಿ
ರಮ್ಯವಾದ ಈ ಮಾಸ ಮತ್ತು ಋತುಗಳಲ್ಲಿ ಅಂಬೆಗಾಲಿಡುತ್ತಾ ಆಗಮಿಸುವ ಪ್ರಥಮ ಹಬ್ಬವೇ ರಂಗು ರಂಗಿನ ಹೋಳಿ ಹಬ್ಬ. ಇದನ್ನು ಕಾಮನಹಬ್ಬ, ರತಿ ಮನ್ಮಥರ ಹಬ್ಬ, ಬಣ್ಣಗಳ ಹಬ್ಬ ಎಂತೆಲ್ಲಾ ಕರೆಯಲಾಗುತ್ತದೆ. ಚಿಕ್ಕ ಮಕ್ಕಳಾದಿಯಾಗಿ ವೃದ್ಧರವರೆಗೆ, ಹೆಣ್ಣು-ಗಂಡೆಂಬ ಭೇದವಿಲ್ಲದೇ, ಜಾತಿ ಕುಲ ಮತಗಳ ಸಂಕೋಲೆಗಳನ್ನು ಕಳಚಿಟ್ಟು, ಪ್ರಕೃತಿಯ ಅದ್ಭುತ ಸೃಷ್ಟಿಗಳಾದ ನೂರಾರು ಬಣ್ಣಗಳನ್ನು ಪರಸ್ಪರ ಒಬ್ಬರ ಮೇಲೊಬ್ಬರು ಆನಂದದಿಂದ ಎರಚುವ,ಈ ಹಬ್ಬದ ಸಂತಸವನ್ನು ವರ್ಣಿಸಲು ಪದಗಳಿಂದ ಸಾಧ್ಯವಿಲ್ಲ. ಅವರ್ಣನೀಯವಾದ, ವರ್ಣಿಸಲಸದಳವಾದ ಈ ರಮ್ಯಾನುಭೂತಿಯನ್ನು ಅನುಭವಿಸಿಯೇ ಧನ್ಯರಾಗಬೇಕು.

ನೆಚ್ಚಿನ ಬಣ್ಣ ನಿಮ್ಮ ಗುಣ ಹೇಗೆ ಅಂತಲೂ ಹೇಳುತ್ತೆ ಕೇಳಿ..!ನೆಚ್ಚಿನ ಬಣ್ಣ ನಿಮ್ಮ ಗುಣ ಹೇಗೆ ಅಂತಲೂ ಹೇಳುತ್ತೆ ಕೇಳಿ..!

ದಕ್ಷ ಬ್ರಹ್ಮನ ಮಗಳು ದ್ರಾಕ್ಷಾಯಿಣಿ. ಶಿವನ ಮಡದಿ.ಇವಳ ಅಗ್ನಿ ಪ್ರವೇಶ ಮಾಡಿದ ನಂತರ ಶಿವನಿಗೆ ಸತಿ ವಿಯೋಗ. ದ್ರಾಕ್ಷಾಯಿಣಿಯ ಪಡೆಯಲು ಶಿವನು ಕೈಲಾಸ ಪರ್ವತದಲ್ಲಿ ಘೋರವಾದ ತಪಸ್ಸಿನತ್ತ ಮುಖ ಮಾಡುತ್ತಾನೆ. ಇನ್ನೊಂದೆಡೆ ತಾರಕಾಸುರ ಎಂಬ ದೈತ್ಯ ದೇವಲೋಕದ ನೆಮ್ಮದಿಯನ್ನು ಹಾಳು ಮಾಡಿರುತ್ತಾನೆ. ಕಂಟಕಪ್ರಾಯನಾದ ತಾರಕಾಸುರನ ವಧೆಗೆ ದೇವತೆಗಳು ನಿರ್ಧರಿಸುತ್ತಾರೆ.

Holi festival significance, How it is related to Shiva and Parvati

ತಾರಕಾಸುರನ ವಧೆ ಕಥೆ
ಅದು ಶಿವನಿಂದ ಜನಿಸಿದ ಪುತ್ರನಿಂದ ಮಾತ್ರ ಸಾಧ್ಯವೆಂಬ ಸತ್ಯ ದೇವತೆಗಳಿಗೆ ತಿಳಿದಿರುತ್ತದೆ.ಇದನ್ನರಿತ ದೇವತೆಗಳು ಹೇಗಾದರೂ ಮಾಡಿ ಶಿವನ ತಪೋಭಂಗಕ್ಕೆ ಉಪಾಯ ಮಾಡಿದರು. ಶಿವನನ್ನು ಎಚ್ಚರಿಸಿ ಪರ್ವತ ರಾಜನ ಮಗಳಾದ ಪಾರ್ವತಿಯತ್ತ ಸೆಳೆಯಲು ಯೋಜಿಸಿದರು. ಶಿವ-ಪಾರ್ವತಿರೀರ್ವರ ಒಡಲ ಕಂದನಿಂದ ತಾರಕಾಸುರನ ವಧೆಯನ್ನು ಮಾಡಿ ಲೋಕ ಕಲ್ಯಾಣಕ್ಕಾಗಿ ಒಂದು ಉಪಾಯವನ್ನು ಮಾಡಿದರು. ಇದಕ್ಕೆ ಸಹಾಯ ಮಾಡುವ ಸಲುವಾಗಿ ಮನ್ಮಥನಲ್ಲಿ ಕೋರಿಕೊಂಡರು.

ಕರಾವಳಿಯಲ್ಲಿ ವಿಶಿಷ್ಟ ಬಗೆಯ ಹೋಳಿ ಹಬ್ಬ ಆಚರಣೆಕರಾವಳಿಯಲ್ಲಿ ವಿಶಿಷ್ಟ ಬಗೆಯ ಹೋಳಿ ಹಬ್ಬ ಆಚರಣೆ

ಮನ್ಮಥನು ರತಿ ವಸಂತರ ಸಮೇತವಾಗಿ ಶಿವನತ್ತ ಧಾವಿಸಿದನು. ಶಿವನ ತಪಸ್ಸನ್ನು ಭಂಗಗೊಳಿಸಲು ಮನ್ಮಥನು ಅರವಿಂದ, ಅಶೋಕ, ಚೂತ, ನವಮಲ್ಲಿಕೆ ಹಾಗೂ ನೀಲೋತ್ಪಲ ಎಂಬ ಐದು ಪುಷ್ಪ ಬಾಣಗಳನ್ನು ಪ್ರಯೋಗಿಸಿದನು. ಆಗ ಶಿವನ ಏಕಾಗ್ರತೆಗೆ ಚ್ಯುತಿ ಬಂದು ಆತ ಸಿಟ್ಟಿನಿಂದ ತನ್ನ ಹಣೆಯ ತೃತೀಯ ನಯನದಿಂದ ಮನ್ಮಥನನ್ನು ಸುಟ್ಟು ಭಸ್ಮ ಮಾಡಿದನು. ತರುವಾಯ ಪಾರ್ವತಿಯತ್ತ ಮನಸೋತು, ಅವರೀರ್ವರ ಸಮಾಗಮದಿಂದ ಏಳನೆಯ ದಿನಕ್ಕೆ ಜನಿಸಿದ ಷಣ್ಮುಖನಿಂದ ತಾರಕಾಸುರನ ವಧೆಯನ್ನು ಮಾಡಿದ ಐತಿಹ್ಯ ನಮ್ಮ ಸ್ಮೃತಿಪಟಲದಲ್ಲಿ ಮತ್ತೊಮ್ಮೆ ಹಾಯ್ದು ಹೋಗುವಂತೆ ಮಾಡುವ ವಿಶಿಷ್ಟ ಹಬ್ಬವೇ ಹೋಳಿ ಹಬ್ಬ.

Holi festival significance, How it is related to Shiva and Parvati

ಕಾಮದಹನ ಎಂಬ ಹೆಸರಿನಲ್ಲಿ ಆಚರಣೆ
ಹೋಳಿ ಸಂದರ್ಭದಲ್ಲಿ ದೇಶವ್ಯಾಪಿಯಾಗಿ ಹಲವಾರು ಆಚರಣೆ ಮತ್ತು ಸಂಪ್ರದಾಯಗಳು ಗರಿಗೆದರಿ ನಿಲ್ಲುವುದನ್ನು ನಾವು ಕಾಣಬಹುದು. ಅದರಲ್ಲಿಯೂ ಉತ್ತರ ಭಾರತದಲ್ಲಿ ಈ ಹಬ್ಬದ ಸಂಭ್ರಮ ಸಡಗರಗಳು ವಿಶಿಷ್ಟ ರೀತಿಯಿಂದ ಗಮನಸೆಳೆಯುತ್ತವೆ. ಫಾಲ್ಗುಣ ಮಾಸದ ಪೌರ್ಣಿಮೆಯಂದು ಪ್ರಾರಂಭವಾಗುವ ಹೋಳಿ ಎರಡು ದಿನಗಳವರೆಗೆ ನಡೆಯುವ ಹಬ್ಬ. ಶಿವನ ಉಗ್ರ ದೃಷ್ಟಿಗೆ ಬಲಿಯಾದ ಮನ್ಮಥನ ದಹನವನ್ನು ಕಾಮದಹನ ಎಂಬ ಹೆಸರಿನಲ್ಲಿ ಆಚರಣೆ ಮಾಡಿ ಮರುದಿವಸ ಎಲ್ಲರೂ ಸೇರಿ ಲೋಕಕಂಟಕನಾದ ತಾರಕಾಸುರನ ವಧೆಗೆ ಕಾರಣಕರ್ತನಾದ ಷಣ್ಮುಖನ ಜನ್ಮ ಹಾಗೂ ಮನ್ಮಥನ ಮರುಜೀವದ ಸ್ಮರಣಾರ್ಥವಾಗಿ ಸಂತೋಷ ಆನಂದಗಳ ಆಚರಣೆ ರಂಗುರಂಗಿನ ಬಣ್ಣಗಳ ಎರಚಾಟಗಳು ಬದುಕಿನ ಜಂಜಾಟಗಳಿಗೆ ಸಿಲುಕಿ ಸುಸ್ತಾಗಿ ಬಸವಳಿದ ಜೀವಗಳಿಗೆ ನವೋಲ್ಲಾಸದ ಸಿಂಚನವನ್ನು ಉಣಬಡಿಸಬಲ್ಲವು.

ಬಂತು ಬಂತು ಸಂಭ್ರಮದ ಹೋಳಿ... ಚೆಲ್ಲಿದೆ ಎಲ್ಲೆಲ್ಲೂ ರಂಗಿನ ಓಕುಳಿ...ಬಂತು ಬಂತು ಸಂಭ್ರಮದ ಹೋಳಿ... ಚೆಲ್ಲಿದೆ ಎಲ್ಲೆಲ್ಲೂ ರಂಗಿನ ಓಕುಳಿ...

ಮನುಷ್ಯರು ತಮ್ಮ ಮನಸ್ಸಿನ ರಾಗ ದ್ವೇಷಗಳನ್ನು, ಮೇಲುಕೀಳುಗಳನ್ನು ಮನಸಾರೆ ಮರೆತು ಒಬ್ಬರಿಗೊಬ್ಬರು ಎರಚಾಡುವ ಬಣ್ಣಗಳ ವಿನಿಮಯ ನಿಜಕ್ಕೂ ಅದ್ಭುತ ಸಂದೇಶವನ್ನು ಇಡೀ ಜಗತ್ತಿಗೆ ನೀಡುವುದರಲ್ಲಿ ಸಂದೇಹವಿಲ್ಲ. ಈ ರಂಗಿನಾಟದಲ್ಲಿ ಬಳಸುವ ಬಣ್ಣಗಳ ಸುತ್ತಲೇ ಹಲವಾರು ಸ್ವಾರಸ್ಯಪೂರ್ಣವಾದ ಮಾಹಿತಿಗಳ ಕಣಜವೇ ಅಡಗಿದೆ. ಅವುಗಳಲ್ಲಿ ಕೆಂಪು ವರ್ಣವು ಶುಭ ಹಾಗೂ ಮಂಗಳ ಸಂಕೇತವಾಗಿ ಪ್ರೀತಿ, ಅನ್ಯೋನ್ಯತೆ, ಉತ್ಸಾಹದ ಸಂಕೇತವಾಗಿದೆ.

Holi festival significance, How it is related to Shiva and Parvati

ಬಣ್ಣಗಳು ಯಾವುದರ ಸಂಕೇತ:
ಹಸಿರು ಬಣ್ಣವು ಮೂಲತಃ ಕೃಷಿಯ ಭಾಗವಾದ ಹೋಳಿ ಹಬ್ಬದಲ್ಲಿ ಸಮೃದ್ಧಿ, ಗೌರವ, ಪ್ರಕೃತಿಗಳ ಸೂಚಕವಾಗಿ ನೆಮ್ಮದಿ ಹಾಗೂ ಸಕಾರಾತ್ಮಕ ಭಾವನೆಗಳ ದ್ಯೋತಕವಾಗಿದೆ. ನೀಲಿ ಬಣ್ಣವು ಜಲದ ಅಂಶವಾಗಿದ್ದು ಆಕರ್ಷಣೆ, ಶಕ್ತಿ, ಧನಾತ್ಮಕತೆ ಗಳ ತ್ರಿಗುಣಗಳ ಸಂಕೇತವಾಗಿದೆ. ಹಳದಿ ವರ್ಣವು ಕಾಂತಿ ,ಶಾಂತಿ, ಸಂಭ್ರಮಗಳ ಹಾಗೂ ಚಿಕಿತ್ಸಕ ಗುಣಗಳ ದ್ಯೋತಕವಾಗಿದೆ. ಇನ್ನು ಗುಲಾಬಿ ಬಣ್ಣವು ಸ್ನೇಹ ಪ್ರೀತಿ ಸಂತೋಷ ಸಡಗರ ಗಳಿಗೆ ಹೇಳಿಮಾಡಿಸಿದ ವರ್ಣವಾಗಿದೆ. ಕಿತ್ತಳೆ ಬಣ್ಣವು ಧನಾತ್ಮಕ ಶಕ್ತಿ ಸ್ವರೂಪನಾದ ಸೂರ್ಯದೇವನ ಧ್ಯಾನ ಆಧ್ಯಾತ್ಮಗಳ ಸಂಕೇತವಾಗಿ ಬಳಸಲಾಗುತ್ತದೆ. ನೇರಳೆ ಬಣ್ಣವು ನಮ್ರತೆ, ವಿಧೇಯತೆ, ಉದಾತ್ತ ಗಳ ಸಂಪತ್ತಿನ ರಾಜತ್ವದ ಸಂಕೇತವಾಗಿ ಕಂಗೊಳಿಸುತ್ತದೆ.

Holi festival significance, How it is related to Shiva and Parvati

ಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ ಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ

ಹೀಗೆ ಪ್ರಕೃತಿಯಲ್ಲಿ ಹರಡಿರುವ ಧನಾತ್ಮಕತೆ ಗಳ ಸಾರವನ್ನು ಸಂಕೇತಿಸುವ ಹತ್ತು ಹಲವು ವರ್ಣಗಳ ಸಮಾಗಮದ ಹೋಳಿ ಸಂದರ್ಭದಲ್ಲಿ ಮನುಷ್ಯನ ಮನಸ್ಸಿನಲ್ಲಿರುವ ಕಲ್ಮಶಗಳನ್ನು ಸುಟ್ಟು ಹಾಕಿ ನಿರ್ಮಲ ಭಾವಚಿತ್ತವನ್ನು ಸಂಕೇತಿಸುವ ಹೋಳಿ ಹಬ್ಬ ನಿಜಕ್ಕೂ ವಿಶಿಷ್ಟ ಅನುಭವ ನೀಡುವಂತದ್ದು.

Holi festival significance, How it is related to Shiva and Parvati

ಹೋಳಿ ರಂಗಿನ ಬಣ್ಣ, ಯುಗಾದಿ ಚಿಗುರಿನ ಬಣ್ಣ... ಅಬ್ಬಬ್ಬಾ ಎಷ್ಟೆಲ್ಲಾ ಬಣ್ಣ! ಹೋಳಿ ರಂಗಿನ ಬಣ್ಣ, ಯುಗಾದಿ ಚಿಗುರಿನ ಬಣ್ಣ... ಅಬ್ಬಬ್ಬಾ ಎಷ್ಟೆಲ್ಲಾ ಬಣ್ಣ!

ಆದರೆ ಈ ವರ್ಷದ ಹೋಳಿಯು ಕೊರೋನಾ ಸಾಂಕ್ರಾಮಿಕ ಮಹಾಮಾರಿಯ ಆತಂಕದಲ್ಲಿ ಹಬ್ಬದ ಖಳೆ ಕಳೆದುಕೊಂಡಿರುವುದು ನೋವಿನ ಸಂಗತಿ. ಜೊತೆಗೆ ರಾಸಾಯನಿಕಯುಕ್ತ ಕಳಪೆ ಗುಣಮಟ್ಟದ ಹಾಗೂ ಸುರಕ್ಷಿತವಲ್ಲದ ಬಣ್ಣಗಳ ಬಳಕೆಯು ಚರ್ಮ ಹಾಗೂ ಕಣ್ಣಿನ ಆರೋಗ್ಯದ ಮೇಲೆ ಹಲವಾರು ರೀತಿಯ ದುಷ್ಪರಿಣಾಮಗಳನ್ನು ಉಂಟುಮಾಡುವ ಸಂದರ್ಭಗಳನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಆದಷ್ಟು ಸಾಮಾಜಿಕ ಅಂತರದೊಂದಿಗೆ ನೈಸರ್ಗಿಕವಾದ ಸುರಕ್ಷಿತವಾದ ಮನೆಗಳಲ್ಲಿಯೇ ತಯಾರಿಸಿದ ಬಣ್ಣಗಳ ಉಪಯೋಗ ದೊಂದಿಗೆ ಹೋಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ದ್ವಿಗುಣಗೊಳಿಸಿಕೊಳ್ಳೋಣವಲ್ಲವೇ? ಸರ್ವರಿಗೂ ಬಣ್ಣದ ಹಬ್ಬದ ಹಾರ್ದಿಕ ಶುಭಾಶಯಗಳು...

English summary
Holi festival significance, How it is related to Shiva and Parvati and What is the meaning of many colours used during festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X