Mysuru Dasara 2023: ನಾಡಹಬ್ಬಕ್ಕೆ ಮುಹೂರ್ತ ಫಿಕ್ಸ್, ದಿನಾಂಕಗಳ ವಿವರ ತಿಳಿಯಿರಿ
ಮೈಸೂರು, ಜುಲೈ, 07: ಇಡೀ ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದ ನಾಡಹಬ್ಬ ಮೈಸೂರು ದಸರಾ 2023ಕ್ಕೆ ಮುಹೂರ್ತ ನಿಗದಿಯಾಗಿದೆ. ಹಾಗಾದರೆ ಯಾವಾಗ ಆರಂಭ ಮತ್ತು ಎಲ್ಲಿಯವರೆಗೆ ಹಬ್ಬವನ್ನು ಆಚರಿಸಲಾಗುತ್ತದೆ ಅನ್ನುವ ವಿವರವನ್ನು ಇಲ್ಲಿ ಗಮನಿಸಿ.
ದಸರಾ ಮಹೋತ್ಸವದ ಕಾರ್ಯಸೂಚಿಯನ್ನು ಅರಮನೆ ಮಂಡಳಿ ಕಚೇರಿಯಲ್ಲಿ ಗುರುವಾರ (ಜುಲೈ 06) ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಬಿಡುಗಡೆ ಮಾಡಲಾಯಿತು. ಈ ಬಾರಿ 2023ರ ದಸರಾ ಉತ್ಸವವನ್ನು ಅಕ್ಟೋಬರ್ 15ರಿಂದ 24ರವರೆಗೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಅಕ್ಟೋಬರ್ 15ರಿಂದ ದಸರಾ ಆರಂಭವಾಗಲಿದ್ದು, ಅಕ್ಟೋಬರ್ 23ರಂದು ಆಯುಧ ಪೂಜೆ & ಅಕ್ಟೋಬರ್ 24ರಂದು ವಿಜಯದಶಮಿ ಆಚರಣೆಗಳು ನಡೆಯಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ವೇಳೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಸೇರಿದಂತೆ ಮತ್ತತರರು ಉಪಸ್ಥಿತರಿದ್ದರು.
ಇನ್ನು 2023ರ ದಸರಾ ಸಿದ್ಧತೆಗಳ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು ಎಂದು ತಿಳಿದುಬಂದಿದೆ. ಹೀಗೆ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ದಸರಾ ಉನ್ನತಾಧಿಕಾರ ಸಮಿತಿ ಸಭೆಗೂ ಮುನ್ನ ಪೂರ್ವಭಾವಿ ಚರ್ಚೆಯನ್ನು ನಡೆಸಲಾಯಿತು. ಹಾಗೆಯೇ ವಿಧಾನಸಭೆ ಅಧಿವೇಶನದ ಬಳಿಕ ವಿಧಾನಸೌಧದಲ್ಲಿ ಈ ಕುರಿತು ಉನ್ನತಾಧಿಕಾರಿಗಳ ಸಮಿತಿಯ ಸಭೆ ನಡೆಯಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.












Click it and Unblock the Notifications