Maha Kumbh Mela: ಮಹಾಕುಂಭ ಮೇಳದಲ್ಲಿ ಒಂದೇ ದಿನಕ್ಕೆ ₹7,000 ಸಂಪಾದಿಸಿದ ಯುಟ್ಯೂಬರ್
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಕೋಟ್ಯಂತರ ಭಕ್ತರ ಆಗಮನಕ್ಕೆ ಸಾಕ್ಷಿಯಾಗಿದೆ. ಎಲ್ಲರೂ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಬರುತ್ತಿದ್ದರೆ, ಹಲವರು ತಮ್ಮದೇ ವ್ಯಾಪಾರಗಳ ಮೂಲಕ ಕೈತುಂಬಾ ಹಣ ಸಂಪಾದಿಸುವ ಮಾರ್ಗ ಕಂಡುಕೊಂಡಿದ್ದಾರೆ. ಯೂಟ್ಯೂಬರ್‌ವೊಬ್ಬ ಮಹಾಕುಂಭಮೇಳದಲ್ಲಿ ಒಂದು ದಿನದ ಮಟ್ಟಿಗೆ ಬಿಸಿನೆಸ್ ಶುರು ಮಾಡಿ, ಬರೋಬ್ಬರಿ ಸಾವಿರಾರು ರೂಪಾಯಿಗಳನ್ನು ಸಂಪಾದಿಸಿದ್ದಾನೆ.
ಹೌದು, ಇನ್‌ಸ್ಟಾಗ್ರಾಂನಲ್ಲಿ ಈ ವೀಡಿಯೊ ವೈರಲ್ ಆಗಿದೆ. ಈ ವಿಡಿಯೋ ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಕೆಲವರು ತಿಂಗಳಿಡೀ ದುಡಿಯುವುದನ್ನು ಈತ ಒಂದೇ ದಿನ ಸಂಪಾದಿಸಿದ್ದಾನಲ್ಲ? ಭೇಷ್ ಎಂದಿದ್ದಾರೆ.ಈ ವಿಡಿಯೋ ಅನ್ನು ಇನ್‌ಸ್ಟಾಗ್ರಾಂನಲ್ಲಿ madcap_alive ಎನ್ನುವ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಈ ವೈರಲ್ ವೀಡಿಯೊದಲ್ಲಿ ತೋರಿಸಿರುವಂತೆ ಯೂಟ್ಯೂಬರ್ ಒಂದು ಸಣ್ಣ ಚಹಾ ಅಂಗಡಿಯನ್ನು ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ತೆರೆದಿದ್ದಾನೆ. ಚಹಾ ಮಾಡಿಕೊಂಡು ಒಂದು ಫ್ಲಾಸ್ಕ್ ತೆಗೆದುಕೊಂಡ ಮಧ್ಯಾಹ್ನ 2 ಗಂಟೆವರೆಗೆ ಬಿಡುವಿಲ್ಲದೆ ಮಾರಾಟ ಮಾಡಿದ್ದಾನೆ.
ಮಧ್ಯಾಹ್ನದ ವೇಳೆಗೆ ಬಿಸಿಲು ಹೆಚ್ಚಿದ್ದರಿಂದ ಗ್ರಾಹಕರ ಸಂಖ್ಯೆ ಕೂಡ ತಗ್ಗಿತ್ತು. ಈ ವೇಳೆ ಯೂಟ್ಯೂಬರ್ ತನ್ನ ಶಾಪ್ ಬಳಿಗೆ ಬಂದು ವಿಶ್ರಾಂತಿ ಪಡೆಯುತ್ತಾನೆ. ಬಳಿಕ ನೀರಿನ ಬಾಟಲ್‌ಗಳನ್ನು ಕೂಡ ಈತ ಮಾರಾಟ ಮಾಡಿದ್ದಾನೆ. ಒಟ್ಟಾರೆ ಈತನ ವ್ಯಾಪಾರ ಜೋರಾಗಿಯೇ ನಡೆದಿದೆ. ಬಳಿಕ ಸಂಜೆಯಾಗುತ್ತಿದ್ದಂತೆ ಮತ್ತೆ ಚಹಾ ಮಾಡಿಕೊಂಡು ಮತ್ತೆ ಅಲ್ಲಿನ ಪ್ರದೇಶಗಳಲ್ಲಿ ಮಾರಾಟ ಮಾಡಿದ್ದಾನೆ.
ಮಹಾಕುಂಭ ಮೇಳಕ್ಕೆ ಬಂದಿದ್ದವರು ನಾ ಮುಂದು ತಾ ಮುಂದು ಎನ್ನುವಂತೆ ಚಹಾ ಮತ್ತು ನೀರಿನ ಬಾಟಲಿಗಳನ್ನು ಖರೀದಿಸಿದ್ದಾರೆ. ದಿನವಿಡೀ ಈತ ವ್ಯಾಪಾರದ ಮೂಲಕ 7000 ರೂಪಾಯಿ ಸಂಪಾದಿಸಿದ್ದಾನೆ. ಬಂಡವಾಳವೆಲ್ಲ ಹೋಗಿ 5000 ರೂಪಾಯಿ ಲಾಭ ಗಳಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ಸ್ವಲ್ಪ ದಿನದ ಮಟ್ಟಿಗೆ ಊರು ಬಿಟ್ಟು ಪ್ರಯಾಗ್‌ರಾಜ್‌ಗೆ ಹೋಗಿ ನಾವೇಕೆ ಹಣ ಸಂಪಾದಿಸಬಾರದು? ಎಂದು ಪ್ಲ್ಯಾನ್ ಹಾಕುತ್ತಿದ್ದಾರೆ.
ಈ ಹಿಂದೆ ವ್ಯಕ್ತಿಯೊಬ್ಬ ಭಕ್ತರು ಸಂಗಮದಲ್ಲಿ ಹಾಕುವ ನಾಣ್ಯಗಳನ್ನು ಮ್ಯಾಗ್ನೆಟ್ ಸಹಾಯದಿಂದ ಸಂಗ್ರಹಿಸಿ ದಿನಕ್ಕೆ 5000 ರೂಪಾಯಿ ಸಂಪಾದನೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಹೀಗೆ ಮಹಾಕುಂಭ ಮೇಳವು ಹಲವರ ಬದುಕಿಗೆ ಮಾರ್ಗಗಳನ್ನು ತೋರಿದೆ. ಇಲ್ಲಿ ಚಳಿ ಹೆಚ್ಚಿರುವ ಕಾರಣ ಚಹಾ ಅಂಗಡಿಗಳಲ್ಲೂ ಕೂಡ ಭಾರಿ ವಹಿವಾಟು ನಡೆಯುತ್ತಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ವರದಿಯ ಪ್ರಕಾರ ಉತ್ತರ ಪ್ರದೇಶವು ಈ ಮಹಾಕುಂಭ ಮೇಳದಿಂದ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಸಂಗ್ರಹಿಸಲಿದೆ. 40 ಕೋಟಿ ಪ್ರವಾಸಿಗರು ಸರಾಸರಿ ಕನಿಷ್ಠ 5,000 ರೂಪಾಯಿ ಖರ್ಚು ಮಾಡಿದರೂ ಭಾರಿ ಮೊತ್ತದ ಆದಾಯ ಬರಲಿದೆ ಎಂದು ಅಂದಾಜಿಸಿದೆ. ಇದೇ ಮಹಾಶಿವರಾತ್ರಿಯಂದು ಮಹಾಕುಂಭ ಮೇಳವು ಸಂಪನ್ನಗೊಳ್ಳಲಿದೆ. ಈ ಹಿನ್ನೆಲೆ ಭಕ್ತರ ಸಂಖ್ಯೆ ಕೂಡ ಅತ್ಯಧಿಕವಾಗಿದೆ.












Click it and Unblock the Notifications