ಬಣ್ಣ ರೂಪವನ್ನು ಮೀರಿದ ‘ನಿತ್ಯ ಸುಂದರಿ’ ಯಾರು ಗೊತ್ತಾ?
ಸೌಂದರ್ಯಕ್ಕಿಂತ ಗುಣವೇ ಮುಖ್ಯ ಎಂದು ಹಿಂದಿನಿಂದಲೂ ನಮ್ಮ ಹಿರಿಯರು ಹೇಳಿಕೊಂಡೇ ಬಂದಿದ್ದಾರೆ. ಆದರೂ ಎಲ್ಲೋ ಒಂದು ಕಡೆ ಬಣ್ಣ ಮತ್ತು ರೂಪಿನ ಬಗ್ಗೆ ನಮಗೊಂದು ಬಯಕೆ ಇದ್ದೇ ಇದೆ. ಹಾಗೆಯೇ ಅವಳು ನನಗಿಂತ ಸುಂದರವಾಗಿದ್ದಾರಲ್ಲ ಎಂಬ ಸಣ್ಣಗಿನ ಹೊಟ್ಟೆಕಿಚ್ಚು ಒಳಗೊಳಗೆ ಎಲ್ಲೊ ಒಂದು ಕಡೆ ಇದ್ದೇ ಇರುತ್ತದೆ. ಅದರಲ್ಲೂ ಇವತ್ತಿನ ಫ್ಯಾಷನ್ ಬದುಕಿನಲ್ಲಿ ಸೌಂದರ್ಯ ಮತ್ತು ಸೌಂದರ್ಯವತಿವಾಗಿ ಕಾಣಿಸಲು ತವಕಿಸುವವರೇ ಹೆಚ್ಚಾಗಿದ್ದಾರೆ. ಇಷ್ಟಕ್ಕೂ ಸೌಂದರ್ಯ ನಮ್ಮ ದೇಹದ ಬಣ್ಣದಲ್ಲಿ, ದೇಹದಲ್ಲಿ, ಮುಖದಲ್ಲಿ ಹೀಗೆ ಎಲ್ಲಿದೆ ಎನ್ನುವುದಕ್ಕಿಂತ ಆರೋಗ್ಯಕರ ಸೌಂದರ್ಯ ನಮ್ಮದಾಗಿರುವಂತೆ ನೋಡಿಕೊಳ್ಳಬೇಕಾಗಿರುವುದು ಅಗತ್ಯತೆಯಾಗಿದೆ.
ಸುಂದರವಾಗಿ ಕಾಣಬೇಕೆಂದು ಬಹಳಷ್ಟು ಯುವತಿಯರು, ಮಹಿಳೆಯರು ಇಲ್ಲ ಸಲ್ಲದ ಪ್ರಯೋಗಗಳನ್ನು ಮಾಡಿ ತಮ್ಮ ಮುಖದ ಅಂದವನ್ನು ಕೆಡಿಸಿಕೊಂಡ ನಿದರ್ಶನಗಳು ಬಹಳಷ್ಟಿವೆ. ದೇವರು ಕೊಟ್ಟ ರೂಪ ಮತ್ತು ಬಣ್ಣವನ್ನು ಕಾಪಾಡಿಕೊಂಡು ಹೋಗುವುದರ ಕಡೆಗೆ ಗಮನಹರಿಸುವುದರ ಜತೆಗೆ ನಮ್ಮ ಚರ್ಮ, ಕೂದಲು, ಬಣ್ಣವನ್ನು ಜತನದಿಂದ ನೋಡಿಕೊಂಡು ಶುಚಿತ್ವಕ್ಕೆ ಆದ್ಯತೆ ನೀಡಿ ಆರೋಗ್ಯವನ್ನು ಕಾಪಾಡಿಕೊಂಡರೆ ಅಷ್ಟೇ ಸಾಕಾಗುತ್ತದೆ. ಬೇರೆಯವರ ಜತೆ ಪೈಪೋಟಿಗಿಳಿಯದೆ ಅವರ ಬಣ್ಣ, ಅವರ ರೂಪ ಅವರಿಗೆ ಬಿಟ್ಟು ನಮಗೆ ಒಲಿದು ಬಂದ ಸೌಂದರ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವುದು ಜಾಣತನವಾಗುತ್ತದೆ.

ಮನುಷ್ಯನಾಗಿ ಹುಟ್ಟಿರುವ ನಮಗೆ ದೇವರು ಹುಟ್ಟುವಾಗಲೇ ಕೆಲವೊಂದನ್ನು ಕೊಟ್ಟು ಕಳುಹಿಸಿರುತ್ತಾನೆ. ಅದರಲ್ಲಿ ಬಣ್ಣ, ರೂಪವೂ ಸೇರಿದೆ. ನಾವು ಅದನ್ನು ಪೋಷಿಸಿಕೊಂಡು ಹೋಗಿ ಬಿಟ್ಟರೆ ಸಾಕು. ರೂಪ ಹುಟ್ಟಿನಿಂದಲೇ ಬಂದಿರುತ್ತದೆ. ಅದನ್ನು ಕಾಪಾಡಿಕೊಂಡು ಹೋಗಬೇಕಷ್ಟೆ. ಆದರೆ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕಾಗುತ್ತದೆ. ಗುಣ ಮತ್ತು ರೂಪ ಜತೆಗಿದ್ದರೆ ಇನ್ನೇನು ಬೇಕು? ಇವತ್ತು ಕೆಲವರು ಸುಂದರವಾಗಿಯೇ ಇರುತ್ತಾರೆ. ಆದರೆ ಕೆಲವೊಮ್ಮೆ ಅವರು ಮಾಡುವ ಅಲಂಕಾರವೇ ಅವರ ಸುಂದರತೆಯನ್ನು ಕೆಡಿಸಿ ಬಿಡುತ್ತದೆ. ಧರಿಸುವ ಬಟ್ಟೆ ಮತ್ತು ಮಾಡುವ ಅಲಂಕಾರ ಎರಡಕ್ಕೆ ಹೊಂದಿಕೆಯಾಗುತ್ತಾ? ಎಂಬುದನ್ನು ಅರಿತುಕೊಂಡು ಬಿಟ್ಟರೆ ನೀವು ನಿತ್ಯ ಸುಂದರಿಯೇ.
ನಿಮ್ಮ ಬಗ್ಗೆ ನಿಮಗೆ ಕೀಳರಿಮೆ ಬೇಡ
ಕೆಲವು ಹೆಣ್ಣು ಮಕ್ಕಳಿಗೆ ತನ್ನ ದೇಹ, ಬಣ್ಣ, ರೂಪದ ಬಗ್ಗೆಯೇ ಕೀಳರಿಮೆ ಇರುತ್ತದೆ. ಆ ಬಗ್ಗೆ ಕೊರಗುವವರು ಇಲ್ಲದಿಲ್ಲ. ಅಂತಹವರು ಮೊದಲು ತಿಳಿದುಕೊಳ್ಳಬೇಕಾಗಿರುವುದೇನು ಗೊತ್ತಾ? ನೀವು ಯಾರಿಗಾಗಿ ಬದುಕುತ್ತಿದ್ದೀರಾ? ನಿಮಗಾಗಿ ತಾನೆ? ಹಾಗಿದ್ದ ಮೇಲೆ ನೀವು ನಿಮಗಿಷ್ಟವಾಗುವಂತೆ ಬದುಕುವುದನ್ನು ಕಲಿಯಿರಿ. ನಿಮ್ಮ ಬಣ್ಣ, ನಿಮ್ಮ ದೇಹ, ನಿಮ್ಮ ರೂಪ ಅದನ್ನು ಪ್ರೀತಿಸಿ, ಗೌರವಿಸಿ ಅದನ್ನು ಕಾಪಾಡಿಕೊಳ್ಳಿ, ನೀವು ಯಾವ ಅಲಂಕಾರ ಮಾಡಿದರೆ ಸುಂದರವಾಗಿ ಕಾಣಿಸುತ್ತದೆ ಅಂಥ ಅನಿಸುತ್ತದೆಯೋ ಅದನ್ನೇ ಮಾಡಿ ಖುಷಿ ಪಡಿ, ಸಂತಸವಾಗಿರಿ.

ರೂಪವತಿಯರೆಲ್ಲರೂ ಸುಂದರವಾಗಿ ಕಾಣುವುದಿಲ್ಲ. ಕೆಲವರು ಬಣ್ಣ ಮತ್ತು ಸೌಂದರ್ಯವನ್ನು ಮೀರಿಯೂ ಆಕರ್ಷಣೀಯವಾಗಿ ಕಾಣುತ್ತಾರೆ. ಅದಕ್ಕೆ ಅವರ ಅಲಂಕಾರ, ನಡೆ, ನುಡಿ, ಧರಿಸುವ ಉಡುಪು ಕಾರಣವಾಗಿರುತ್ತದೆ ಮತ್ತು ಸುಂದರಿಯನ್ನಾಗಿರಿಸಿರುತ್ತದೆ. ಹೀಗಾಗಿ ಅಲಂಕಾರದ ಸಿಕ್ರೆಟ್ ಅರಿತುಕೊಂಡು ಬಿಟ್ಟರೆ ನೀವು ಸುಂದರವಾಗಿ ಕಾಣಲು ಅಡ್ಡಿಯಿಲ್ಲ.
ಇನ್ನು ರೂಪ, ಬಣ್ಣದಾಚೆಗೂ ದೇಹದ ಸೌಂದರ್ಯದ ಬಗ್ಗೆಯೂ ಹೆಣ್ಣು ಮಕ್ಕಳು ತಲೆಕೆಡಿಸಿಕೊಳ್ಳುತ್ತಾರೆ. ನಿತ್ಯ ವ್ಯಾಯಾಮ, ವಾಕಿಂಗ್, ಆಹಾರದಲ್ಲಿ ಕಟ್ಟು ನಿಟ್ಟು ವಹಿಸಿದರೆ ದೇಹವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿದೆ. ಅದರಾಚೆಗೆ ದೈಹಿಕ ಸಮಸ್ಯೆಗಳಿಗೆ ವೈದ್ಯರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದು ಕೊಳ್ಳುವುದು ಜಾಣತನವಾಗುತ್ತದೆ. ಸದಾ ಸುಂದರವಾಗಿ ಕಾಣಬೇಕೆಂದು ಬಯಸುವವರು ಹೇರ್ ಸ್ಟೈಲ್, ಉಡುಪು, ಆಭರಣ ಧರಿಸುವ ವೇಳೆ ಒಂದಕ್ಕೊಂದು ಹೊಂದಿಕೆಯಾಗುವಂತಿರಬೇಕು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೇನೆಂದರೆ ನೀವು ಧರಿಸುವ ಆಭರಣಗಳು ನಿಮ್ಮ ಸೌಂದರ್ಯದ ಭಾಗವಾಗಿರಬೇಕೇ ಹೊರತು ತೋರಿಕೆಯಾಗದಿರಲಿ.
ಕವಿ ರವೀಂದ್ರನಾಥ ಟಾಗೂರ್ ಹೇಳಿದ್ದೇನು?
ನಿಮ್ಮ ಉಡುಗೆ, ತೊಡುಗೆ ನಿಮ್ಮನ್ನು ನೋಡುವವರು ಹುಬ್ಬೇರಿಸುವಂತೆ ಇರಬೇಕೇ ಹೊರತು ನಗುವಂತೆ ಅಲ್ಲ. ಇದನ್ನು ಸದಾ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಕಾರ್ಯಕ್ರಮಗಳಿಗೆ ತೆರಳುವಾಗ ಯಾವ ಕಾರ್ಯಕ್ರಮ ಎಂಬುದನ್ನು ಅರಿತು ಅದರಂತೆ ಉಡುಗೆ, ತೊಡುಗೆ ಅಲಂಕಾರವನ್ನು ಮಾಡಿಕೊಂಡು ಹೋಗುವುದು ಒಳ್ಳೆಯದು. ಅವರಿಗಿರುವುದು ನಮಗಿಲ್ಲ ಎಂದು ಕೊರಗುವುದು ದಡ್ಡತನವಾಗುತ್ತದೆ.
ಶಾರೀರಿಕ ಸುಂದರತೆ ಶ್ರೇಷ್ಟವಲ್ಲ. ಅದರಾಚೆಗೂ ವ್ಯಕ್ತಿತ್ವ ಅಂಥ ಒಂದಿದೆ. ಅದುವೇ ಎಲ್ಲರನ್ನು ಸೆಳೆಯುವುದು. ಹೀಗಾಗಿ ದೇಹಕ್ಕೆ ವ್ಯಕ್ತಿತ್ವದ ತೋರಣ ಕಟ್ಟಿದಾಗ ಬದುಕಿನ ಸುಂದರತೆ ಹೆಚ್ಚುತ್ತದೆ. ಒಂದು ಕಡೆ ಶ್ರೇಷ್ಟ ಕವಿ ರವೀಂದ್ರನಾಥ ಟಾಗೂರ್ ಹೇಳುತ್ತಾರೆ. ಪ್ರಮಾಣಬದ್ಧವಾದ ಮೈಕಟ್ಟು, ಗುಂಗುರು ಕೂದಲು, ಸೊಗಸಾದ ಉಡುಗೆ, ತೊಡುಗೆ ಸೌಂದರ್ಯಕ್ಕೆ ಮೆರಗು ತರುವುದಂತು ನಿಜ. ಆದರೆ ಅದೇ ಅಂತಿಮವಲ್ಲ. ಪರಿಪೂರ್ಣವೂ ಅಲ್ಲ. ಈ ಮಾತು ನಿಜವೂ ಹೌದು.
ಪ್ರತಿಯೊಬ್ಬರಿಗೂ ತನ್ನದೇ ಆದ 'ಗುರುತು' ಅಂಥ ಇದ್ದೇ ಇರುತ್ತದೆ. ಪ್ರಕೃತಿಯಲ್ಲಿ ನಮಗೆ ಬೇಕಾದಷ್ಟು ಪಾಠಗಳಿವೆ. ಹೂವುಗಳನ್ನೇ ನೋಡಿ ಹತ್ತು ಹಲವು ಬಗೆಯ ಹೂಗಳಿದ್ದರೂ ಎಲ್ಲದಕ್ಕೂ ತನ್ನದೇ ಆದ ವಿಶೇಷತೆಗಳಿವೆ. ಹಾಗೆಯೇ ಮನುಷ್ಯನು ಕೂಡ. ತನ್ನ ತನವನ್ನು ಉಳಿಸಿಕೊಳ್ಳುವುದು ಕೂಡ ಬದುಕಿನ ಸುಂದರತೆಯ ಭಾಗವೇ.. ಹೀಗಾಗಿ ಸೌಂದರ್ಯ, ಅಲಂಕಾರದಾಚೆಗೂ ಸಂಸ್ಕಾರಯುತ ಬದುಕನ್ನು ಕಟ್ಟಿಕೊಳ್ಳುವುದು ಮತ್ತು ನಮ್ಮ ಬಣ್ಣ, ಸೌಂದರ್ಯದ ಬಗ್ಗೆ ಕೀಳರಿಮೆ ತಾಳದೆ ಖುಷಿಯಾಗಿ ಇರುವುದು ಬದುಕಿನ ಚೆಲುವನ್ನು ಹೆಚ್ಚಿಸಲಿದೆ ಎಂಬುದು ಸದಾ ನೆನಪಿನಲ್ಲಿರಬೇಕು.












Click it and Unblock the Notifications