Ugadi 2025: ಯುಗಾದಿ ಹಬ್ಬದಂದು ಈ ತಪ್ಪುಗಳನ್ನ ಅಪ್ಪಿತಪ್ಪಿಯೂ ಮಾಡಲೇಬೇಡಿ
ಯುಗ ಯುಗಾನೇ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಭಾನುವಾರದಂದು ಯುಗಾದಿ ಹಬ್ಬಕ್ಕೆ ಎಲ್ಲೆಡೆ ಭರದ ಸಿದ್ಧತೆ ನಡೆದಿದೆ. ಭಾರತೀಯರ ಹೊಸ ವರುಷ ಎಂದೇ ಕರೆಯಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ದುಃಖದ ಕಹಿಬೇವು, ಸಂತಸದ ಸಿಹಿಬೆಲ್ಲ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ ಬೇವು-ಬೆಲ್ಲದ ಹಬ್ಬ ಎಂದೇ ಅನಾದಿ ಕಾಲದಿಂದಲೂ ಆಚರಣೆ ಮಾಡಿಕೊಂಡು ಬರಲಾಗಿದೆ. ಕರ್ನಾಟಕದಲ್ಲಿ ಈ ಯುಗಾದಿಯನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲನೇ ದಿನ ಸಿಹಿಯೂಟ, ಎರಡನೇ ದಿನ ಬಾಡೂಟ ಸವಿಯುವ ಮೂಲಕ ಆಹಾರ ಪದ್ಧತಿಗೂ ಮೆರುಗು ನೀಡುತ್ತಾ ಬಂದಿದೆ. ಇನ್ನು ಯುಗಾದಿ ಹಬ್ಬದಂದು ಏನೆಲ್ಲ ಮಾಡಬಾರದು? ಎಂದೂ ಹಿರಿಯರು ಹೇಳುತ್ತಾ ಬಂದಿದ್ದಾರೆ. ಅದನ್ನ ಮರೆತಿದ್ದರೆ ಇಲ್ಲಿ ತಿಳಿಯಿರಿ..
ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಅಂದು ಎಣ್ಣೆ ಸ್ನಾನ ಮಾಡುವುದು ಕೂಡ ಅತಿ ಶ್ರೇಷ್ಠ ಎಂದು ಹೇಳಲಾಗಿದೆ. ಗಂಟೆಗಟ್ಟಲೆ ಹರಳೆಣ್ಣೆಯನ್ನ ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಇದು ಆರೋಗ್ಯಕ್ಕೂ ಉತ್ತಮ ಎನ್ನುತ್ತಾರೆ ಹಿರಿಯರು. ಇನ್ನು ಎಳ್ಳು-ಬೆಲ್ಲ ತಿಂದು ಒಳ್ಳೆಯದನ್ನ ಮಾತನಾಡಬೇಕು ಎಂತಲೂ ಹೇಳುತ್ತಾರೆ. ಹಾಗಾಗಿ ಯುಗಾದಿ ಹಬ್ಬದಂದು ಸಾಧ್ಯವಾದಷ್ಟು ಒಳ್ಳೆಯ ಮಾತುಗಳನ್ನೇ ಆಡುವುದು ಒಳಿತು.

ಇನ್ನು ಯುಗಾದಿ ಹಬ್ಬದಂದು ಸಾಮಾನ್ಯವಾಗಿ ಬಹುತೇಕರು ಹೊಸ ವಸ್ತ್ರಗಳನ್ನು ಧರಿಸಿ ಮಿಂಚುತ್ತಾರೆ. ಈ ಹಬ್ಬದಂದು ಶುಭ್ರವಾದ ಬಟ್ಟೆಯನ್ನು ಧರಿಸುವುದು ಶ್ರೇಷ್ಠ ಎಂದು ಹೇಳಲಾಗಿದೆ. ಹಾಗಾಗಿ ಕೊಳೆಯಾದ ಬಟ್ಟೆಗಳು, ಹರಿದ ಬಟ್ಟೆಗಳನ್ನು ಯುಗಾದಿಯಂದು ಧರಿಸಬಾರದು. ಹೊಸ ಬಟ್ಟೆಯನ್ನು ಧರಿಸದರೆ ಶುಭ ಎಂದೂ ಹೇಳುತ್ತಾರೆ. ಹಾಗಾಗಿ ಧರಿಸುವ ಬಟ್ಟೆಯ ಮೇಲೆ ಎಚ್ಚರಿಕೆ ವಹಿಸಿ.
ಯುಗಾದಿ ಹಬ್ಬದ ದಿನ ಮದ್ಯಪಾನ, ಧೂಮಪಾನ ಸೇರಿದಂತೆ ಇತರೆ ಕೆಟ್ಟಾಭ್ಯಾಸಗಳಿಂದ ದೂರವಿರುವುದು ಒಳ್ಳೆಯದು. ಅಂದು ಮಾಂಸಹಾರದ ಊಟಗಳನ್ನು ಕೂಡ ಸಾಧ್ಯವಾದಷ್ಟು ಮಾಡಬೇಡಿ. ಹಬ್ಬದ ಮರುದಿನ ಹೊಸತೊಡಕು ಇದ್ದೇ ಇರುವುದರಿಂದ ಆ ದಿನವೇ ಮಾಂಸಾಹಾರ ಸೇವನೆಗೆ ಒತ್ತು ನೀಡಿ. ಇನ್ನು ಹಬ್ಬದ ದಿನ ಬೇರೆಯವರಿಗೆ ಅವಮಾನ ಮಾಡಬಾರದು, ಬೇರೆಯವರೊಂದಿಗೆ ಜಗಳವಾಡಬಾರದು. ಇದರಿಂದ ದರಿದ್ರ ವಕ್ಕರಿಸುತ್ತೆ ಎಂದು ಹೇಳುತ್ತಾರೆ.

ಯುಗಾದಿ ಹಬ್ಬವನ್ನು ಅತ್ಯಂತ ಪವಿತ್ರ ದಿನವೆಂದು ಕರೆಯಲಾಗುತ್ತದೆ. ಈ ದಿನ ಯಾವುದೇ ರೀತಿಯ ಮಾಂಸಾಹಾರ ಸೇವನೆ ಮಾಡಲೇಬೇಡಿ. ಹಬ್ಬದ ದಿನ ಯಾವ ಕಾರಣಕ್ಕೂ ನಿಮ್ಮ ಉಗುರುಗಳನ್ನು ಕತ್ತರಿಸಬೇಡಿ. ನಿಮ್ಮ ಗಡ್ಡ, ಮೀಸೆ, ಕೂದಲನ್ನು ಕತ್ತರಿಸಲು ಹೋಗಬೇಡಿ. ಯುಗಾದಿ ಹಬ್ಬದಂದು ಪೂಜೆ ಮಾಡುವ ಸಮಯದಲ್ಲಿ ನಿದ್ದೆ ಮಾಡಬೇಡಿ. ಒಂದು ವೇಳೆ ಈ ತಪ್ಪು ಕೆಲಸಗಳನ್ನು ಮಾಡಿದ್ದಲ್ಲಿ ಮುಂದೆ ಅನೇಕ ರೀತಿಯ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಇದರಿಂದ ನಿಮ್ಮ ಆಸೆಗಳು ಕೂಡ ಈಡೇರದೆ ಹಾಗೆಯೇ ಉಳಿಯಬಹುದು. ಹಾಗಾಗ ಯುಗಾದಿಯನ್ನು ಸಂಭ್ರಮದಿಂದ ಆಚರಿಸಿ, ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇಬೇಡಿ. ಸರ್ವರಿಗೂ ಈ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.












Click it and Unblock the Notifications