ಆಂಧ್ರದಲ್ಲಿ ಜಗನ್ ಸೆಂಟಿಮೆಂಟ್ ರಾಜಕೀಯಕ್ಕೆ ಸುಸ್ತಾದ ಚಂದ್ರಬಾಬು ನಾಯ್ಡು
ಪಾದಯಾತ್ರೆಯ ಮೂಲಕ, ಜನರ ವಿಶ್ವಾಸಗಳಿಸಿ ಅಧಿಕಾರಕ್ಕೆ ಬಂದ ವೈ.ಎಸ್.ಜಗನ್ಮೋಹನ್ ರೆಡ್ಡಿ ದಿನದಿಂದ ದಿನಕ್ಕೆ ತಮ್ಮ ರಾಜಕೀಯ ದಾಳ ಮತ್ತು ಅಭಿವೃದ್ದಿ ಕೆಲಸದ ಮೂಲಕ ತೆಲುಗುದೇಶಂ ಪಕ್ಷಕ್ಕೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದನ್ನೆಲ್ಲಾ ಮಾಡಿಕೊಂಡು ಬರುತ್ತಿರುವ ಜಗನ್, ಕೇಂದ್ರ ಸರಕಾರದ ಜೊತೆಗೂ ಉತ್ತಮ ಸಂಬಂಧವನ್ನು ಇಟ್ಟುಕೊಂಡು, ಸಂಘರ್ಷಕ್ಕೆ ಆಸ್ಪದ ಕೊಡದೇ ಅನುದಾನವನ್ನು ಪಡೆದುಕೊಂಡು ಬರುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಚುನಾವಣೆಯ ವೇಳೆ ಹೇಳಿದಂತೆ, ಆಂಧ್ರ ಪ್ರದೇಶಕ್ಕೆ ಗಣರಾಜ್ಯೋತ್ಸವದಂದು ಹದಿಮೂರು ಹೊಸ ಜಿಲ್ಲೆಗಳ ಘೋಷಣೆಯನ್ನು ಮಾಡಿದ್ದಾರೆ. ಆಂಧ್ರಪ್ರದೇಶ ಜಿಲ್ಲಾ ರಚನೆ ಕಾಯ್ದೆಯ ಸೆಕ್ಷನ್ 3(5)ರ ಅಡಿಯಲ್ಲಿ ಹೊಸ ಜಿಲ್ಲೆಗಳ ರಚನೆಗೆ ಸರ್ಕಾರದಿಂದ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಲಾಗುತ್ತದೆ ಎನ್ನುವುದು ಹಲವು ದಿನಗಳಿಂದ ಆಂಧ್ರದಲ್ಲಿ ಚರ್ಚೆಯಲ್ಲಿದ್ದರೂ, ಜಿಲ್ಲೆಗಳಿಗೆ ಇಡಲಾಗಿರುವ ಹೆಸರು ರಾಜಕೀಯ ವಲಯದಲ್ಲಿ ಅತ್ಯಂತ ಜಾಣನಡೆಯೆಂದು ವ್ಯಾಖ್ಯಾನಿಸಲಾಗುತ್ತಿದೆ.
|
ಜಗನ್ ಸರಕಾರ ಹೊಸ ಜಿಲ್ಲೆಗಳ ಘೋಷಣೆಯನ್ನು ಮಾಡಿದೆ
ಅಮರಾವತಿ ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂ ಕಾರ್ಯಕಾರಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರ್ಕಾರವು ರಾಜ್ಯಕ್ಕೆ ಮೂರು ವಿಭಿನ್ನ ರಾಜಧಾನಿಗಳನ್ನು ಪ್ರಸ್ತಾಪಿಸಿತ್ತು. ಚುನಾವಣೆಯ ವೇಳೆಯೂ ಇದನ್ನು ಹೇಳಿಕೊಂಡು ಬಂದಿತ್ತು, ಆದರೆ, ಇತ್ತೀಚೆಗೆ ಮೂರು ರಾಜಧಾನಿಯ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದ ಜಗನ್ ಸರಕಾರ, ಅಮರಾವತಿ ಒಂದೇ ರಾಜಧಾನಿಯೆಂದು ಹೈಕೋರ್ಟಿಗೆ ತಿಳಿಸಿತ್ತು. ಇದೇ ರೀತಿ, ಜಿಲ್ಲಾ ರಚನೆಯ ವಿಚಾರದಲ್ಲೂ ಜಗನ್ ಸರಕಾರ ಇದೇ ನಿರ್ಧಾರ ತೆಗೆದುಕೊಳ್ಲಬಹುದು ಎನ್ನುವ ಮಾತು ಚಾಲ್ತಿಯಲ್ಲಿತ್ತು. ಆದರೆ, ಜಗನ್ ಸರಕಾರ ಹೊಸ ಜಿಲ್ಲೆಗಳ ಘೋಷಣೆಯನ್ನು ಮಾಡಿದೆ.

ತಿರುಪತಿಯನ್ನು ಜಿಲ್ಲಾ ಕೇಂದ್ರ, ಶ್ರೀಬಾಲಾಜಿ ಜಿಲ್ಲೆ ಎಂದು ನಾಮಕರಣ
ಈಗಿರುವ ಹದಿಮೂರು ಜಿಲ್ಲೆಗಳನ್ನು ವಿಭಜನೆ ಮಾಡಿ 26ಜಿಲ್ಲೆಗಳನ್ನು ಮಾಡಲಾಗಿದೆ. ಜಿಲ್ಲೆಗಳಿಗೆ ಇಟ್ಟ ಕೆಲವೊಂದು ಹೆಸರುಗಳು ಜಗನ್ ಸರಕಾರದ ಬುದ್ದಿವಂತ ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅದರಲ್ಲಿ ಒಂದು ತಿರುಪತಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಜಿಲ್ಲೆಗೆ ಶ್ರೀಬಾಲಾಜಿ ಜಿಲ್ಲೆ ಎಂದು ನಾಮಕರಣ ಮಾಡಲಾಗಿದೆ. ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ರಾಜಕೀಯ ನಿರ್ಧಾರ ಎಂದು ಹೇಳಲಾಗುತ್ತಿದೆ. ಶ್ರೀಬಾಲಾಜಿ ಎಂದು ಹೆಸರಿಡುವ ಮೂಲಕ, ಹಿಂದೂ ಸೆಂಟಿಮೆಂಟ್ ಮತ್ತು ವೈಯಕ್ತಿಕವಾಗಿ ತಿರುಮಲದಲ್ಲಿ ಕ್ರೈಸ್ತ ಮಿಷನರಿ ಸ್ಥಾಪಿಸುವ ಹುನ್ನಾರವಿದೆ ಎಂದು ತಮ್ಮ ಮೇಲಿರುವ ಆರೋಪಕ್ಕೂ ಸಿಎಂ ಜಗನ್ ಉತ್ತರ ಕೊಟ್ಟಂತಾಗಿದೆ.

ಎನ್.ಟಿ.ಆರ್ ಜಿಲ್ಲೆಯೆಂದು ಘೋಷಣೆ
ಇನ್ನು, ವಿಜಯವಾಡ ಜಿಲ್ಲಾ ಕೇಂದ್ರವಾಗಿ ಎನ್.ಟಿ.ಆರ್ ಜಿಲ್ಲೆಯೆಂದು ಘೋಷಣೆ ಮಾಡುವ ಮೂಲಕ, ಇಲ್ಲೂ ಅದೇ ಕೆಲಸವನ್ನು ಜಗನ್ ಸರಕಾರ ಮಾಡಿದೆ. ಎನ್ಟಿಆರ್ ಜಿಲ್ಲೆ ನಾಮಕರಣ ಮಾಡುವುದಾಗಿ ಜಗನ್ ಚುನಾವಣೆಯ ವೇಳೆ ಹೇಳಿದ್ದರು. ಜೊತೆಗೆ, ತೆಲುಗುದೇಶಂ ಪಕ್ಷಕ್ಕೂ ರಾಜಕೀಯವಾಗಿ ಇದು ಹಿನ್ನಡೆಯಾಗುವ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಇದೇ ರೀತಿ, ಪುಟ್ಟಪರ್ತಿ ಜಿಲ್ಲಾಕೇಂದ್ರವಾಗಿ ಶ್ರೀಸತ್ಯಸಾಯಿ ಜಿಲ್ಲೆ ಎಂದು ನಾಮಕರಣ ಮಾಡಿರುವುದು ಒಂದು ವರ್ಗದ ಜನರ ಭಾವನೆಗೆ ಬೆಲೆಕೊಟ್ಟಂತೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಗನ್ ರಾಜಕೀಯದ ಮುಂದೆ ಚಂದ್ರಬಾಬು ನಾಯ್ಡುಗೆ ಹಿನ್ನಡೆ
ಪದೇರು ಜಿಲ್ಲಾ ಕೇಂದ್ರವಾಗಿ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ, ರಾಯಚೂಟಿ ಕೇಂದ್ರವಾಗಿ ಅನ್ನಮಯ್ಯ ಜಿಲ್ಲೆ ಎಂದು ಹೆಸರಿಟ್ಟು ವಿಭಜನೆ ಮಾಡಿದ್ದು ರಾಜಕೀಯವಾಗಿ ಸೂಕ್ತ ಹೆಜ್ಜೆ ಎಂದು ಆಂಧ್ರದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಒಟ್ಟಿನಲ್ಲಿ, ಜಗನ್ ಸರಕಾರ ಇಡುತ್ತಿರುವ ರಾಜಕೀಯ ಹೆಜ್ಜೆಗಳ ಮುಂದೆ ಸದ್ಯ ತೆಲುಗುದೇಶಂ ಮತ್ತು ಚಂದ್ರಬಾಬು ನಾಯ್ಡು ಸದ್ಯ ಕೈಕಟ್ಟಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications