ಮನೆ ಕೆಲಸ ಮಾಡಿದ ಪತ್ನಿಗೆ ಪತಿಯಿಂದ 76 ಲಕ್ಷ ರೂಪಾಯಿ ಸಂಬಳ
ರಜೆ ಇಲ್ಲದೇ ದುಡಿಯುವ ಕೆಲಸ ಎಂದರೆ ಅದು ಗೃಹಿಣಿ. ವಾರದ ಏಳೂ ದಿನಗಳು ಕರ್ತವ್ಯ ಎಂದುಕೊಂಡು ಮನೆಯ ಕೆಲಸಗಳನ್ನು ಮಾಡುವ ಮಹಿಳೆಗೆ ಸಂಬಳ ಬೇಡವೇ..? ಅಡುಗೆ ಮಾಡುವುದು, ಮಕ್ಕಳ ಪಾಲನೆ ಪೋಷಣೆ ಮಾಡುವುದು, ಮನೆಯವರ ಬೇಕು ಬೇಡಗಳನ್ನು ನೋಡಿಕೊಳ್ಳುವದು, ಬೆಲೆ ಹೆಚ್ಚಾದರೂ, ಕಡಿಮೆಯಾದರೂ ಮನೆಯಲ್ಲಿ ಏನೂ ಕೊರತೆಯಾಗದಂತೆ ನೋಡಿಕೊಳ್ಳುವುದು, ಹೀಗೆ ಗೃಹಿಣಿಯ ಕರ್ತವ್ಯ ಒಂದಾ..ಎರಡಾ..?
ಒಳ್ಳೆ ಉದ್ಯೋಗದಲ್ಲಿರುವ ಮಹಿಳೆಯರು ಮದುವೆಯಾದ ಬಳಿಕ ಮನೆ ಜವಾಬ್ದಾರಿ ಎಂದು ಕೆಲಸ ಬಿಡುತ್ತಾರೆ. ಗಂಡ, ಮಕ್ಕಳನ್ನು ನೋಡಿಕೊಳ್ಳಬೇಕು, ಅವರಿಗೆ ಬೇಕಾದುದನೆಲ್ಲಾ ಸಮಯಕ್ಕೆ ಸರಿಯಾಗಿ ಒದಗಿಸಬೇಕು ಎನ್ನುವ ಕಾರಣಕ್ಕೆ ಕೈಯಲ್ಲಿರುವ ಕೆಲಸ ಬಿಟ್ಟು ಸಂಪೂರ್ಣವಾಗಿ ಮನೆ ಹಾಗೂ ಮನೆ ಮಂದಿಯ ಜವಾಬ್ದಾರಿ ವಹಿಸಿಕೊಳ್ಳು ಗೃಹಿಣೆಗೆ ಸಂಬಳ ಬೇಡವೇ..? ಎನ್ನುವುದು ಕೊನೆ ಇಲ್ಲದ ಚರ್ಚೆ.

ತಾನು ಮನೆಕೆಲಸದವಳಂತೆ ದುಡಿಯುತ್ತಿದ್ದೇನೆ. ವಾರದ ಏಳೂ ದಿನವೂ ರಜೆ ಇಲ್ಲದೇ , ಸಂಬಳವಿಲ್ಲದೆ ದುಡಿಯುತ್ತೇನೆ, ನನಗೆ ಸಂಬಳ ಕೊಡಿ ಎಂದು ನೇರವಾಗಿ ಕೇಳುವ ಮಹಿಳೆಯರಿದ್ದಾರೆ. ಆದರೆ ಆಕೆಗೆ ಸಂಬಳ ಕೊಡಬೇಕಾ ಬೇಡವಾ ಎನ್ನುವುದು ಬರೀ ಚರ್ಚೆಯಲ್ಲೇ ಮುಗಿದು ಹೋಗುತ್ತದೆ. ಆದರೆ ಇಲ್ಲೊಬ್ಬಳು ಗೃಹಿಣಿ ತನ್ನ ಸಂಬಳಕ್ಕಾಗಿ ಪಟ್ಟು ಹಿಡಿದು ಹೋರಾಡಿ, ಒಂದಲ್ಲಾ..ಎರಡಲ್ಲಾ..ಬರೋಬ್ಬರಿ 76 ಲಕ್ಷ ರೂಪಾಯಿ ಸಂಬಳವನ್ನು ಗಂಡನಿಂದ ಪಡೆದಿದ್ದಾಳೆ.
ಸ್ಪೇನ್‌ನ ಮಹಿಳೆ ಮನೆಗೆಲಸಕ್ಕೆ ಸಂಬಳ ಬೇಕೆಂದು ಪಟ್ಟು ಹಿಡಿದಿದ್ದು, ಪತಿಯಿಂದ ಪರಿಹಾರಕ್ಕಾಗಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಾಳೆ. ಗೃಹಿಣಿಯಾಗಿ ದುಡಿದ ತನಗೆ ಸಂಬಳ ರೂಪದಲ್ಲಿ ಹಣ ನೀಡಲೇಬೇಕೆಂದು ನ್ಯಾಯಧೀಶರ ಮುಂದೆ ವಾದ ಮಾಡಿದ್ದಾಳೆ. ಕೊನೆಯಲ್ಲಿ ಕೋರ್ಟ್ ಈ ಮಹಿಳೆ 26 ವರ್ಷದ ಮನೆ ಕೆಲಸ ಮಾಡಿದ್ದಕ್ಕಾಗಿ 76 ಲಕ್ಷ ರೂಪಾಯಿ ನೀಡುವಂತೆ ಪತಿಗೆ ಆದೇಶ ನೀಡಿದೆ. ಈ ಘಟನೆ ನಡೆದು ವರ್ಷಗಳು ಕಳೆದರೂ ಮತ್ತೆ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಮಹಿಳೆಯ ದಿಟ್ಟ ತನಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಪತಿಯ ಸ್ಥಿತಿಗೆ ಅಯ್ಯೋ ಪಾಪ ಎಂದಿದ್ದಾರೆ.












Click it and Unblock the Notifications