ಈ ಬಾರಿಯ ಗಣರಾಜ್ಯೋತ್ಸವ ಮುಖ್ಯ ಅತಿಥಿಗಳು ಯಾರು? 77ನೇ ವರ್ಷದ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವ ಆಚರಣೆಗೆ ರಾಜಧಾನಿ ನವದೆಹಲಿ ಸಜ್ಜಾಗಿದೆ. 2026ರ ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆಯಲಿರುವ ಈ ಬಾರಿಯ ಪರೇಡ್ ಕೇವಲ ಸೇನಾ ಬಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿಲ್ಲ. ಅದು ಭಾರತದ ರಾಷ್ಟ್ರೀಯ ಹಾಡು 'ವಂದೇ ಮಾತರಂ'ನ 150 ವರ್ಷಗಳ ಐತಿಹಾಸಿಕ ಪರಂಪರೆ ಮತ್ತು 'ಆತ್ಮನಿರ್ಭರ ಭಾರತ'ದ ಸಂಕೇತವಾಗಿ ಹೊರಹೊಮ್ಮಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆಗಳನ್ನು ವಿವರಿಸಿದ್ದಾರೆ.
ಮುಖ್ಯ ಅತಿಥಿಗಳು ಯಾರು ?
ಮುಖ್ಯ ಅತಿಥಿಗಳಾಗಿ ಇಬ್ಬರು ಜಾಗತಿಕ ನಾಯಕರು ಭಾರತದ ಜಾಗತಿಕ ರಾಜತಾಂತ್ರಿಕ ಸಂಬಂಧಗಳಿಗೆ ಸಾಕ್ಷಿಯಾಗಿ, ಈ ಬಾರಿಯ ಗಣರಾಜ್ಯೋತ್ಸವಕ್ಕೆ ಇಬ್ಬರು ಪ್ರಮುಖ ಅತಿಥಿಗಳು ಆಗಮಿಸುತ್ತಿದ್ದಾರೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದು ಯುರೋಪ್‌ನೊಂದಿಗೆ ಭಾರತದ ಬೆಳೆಯುತ್ತಿರುವ ಬಾಂಧವ್ಯವನ್ನು ಸೂಚಿಸುತ್ತದೆ.

ಪರೇಡ್‌ನ ಪ್ರಮುಖ ಆಕರ್ಷಣೆಯೇನು?
ಈ ಬಾರಿಯ ಪರೇಡ್‌ನ ಪ್ರಮುಖ ಆಕರ್ಷಣೆ '150 ವರ್ಷಗಳ ವಂದೇ ಮಾತರಂ'. 1870ರ ದಶಕದಲ್ಲಿ ಬಂಕಿಮ ಚಂದ್ರ ಚಟರ್ಜಿಯವರು ರಚಿಸಿದ ಈ ಗೀತೆ ಸ್ವಾತಂತ್ರ್ಯ ಹೋರಾಟದ ಕಿಚ್ಚಾಗಿತ್ತು. ಇದರ ಸ್ಮರಣಾರ್ಥ, 1923ರಲ್ಲಿ ರಚಿಸಲಾದ ವಂದೇ ಮಾತರಂ ಗೀತೆಯ ವರ್ಣಚಿತ್ರಗಳನ್ನು ಕರ್ತವ್ಯ ಪಥದ ಉದ್ದಕ್ಕೂ ಪ್ರದರ್ಶಿಸಲಾಗುತ್ತದೆ. ಜನವರಿ 19ರಿಂದ 26ರವರೆಗೆ ದೇಶಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಗೀತ ಕಚೇರಿಗಳನ್ನು ಆಯೋಜಿಸಲಾಗಿದ್ದು, ಹೂವಿನ ಅಲಂಕಾರದಿಂದ ಹಿಡಿದು ಆಮಂತ್ರಣ ಪತ್ರಿಕೆಗಳವರೆಗೂ ಎಲ್ಲದರಲ್ಲೂ ಈ ಥೀಮ್ ಎದ್ದು ಕಾಣಲಿದೆ.
'ಬ್ಯಾಟಲ್ ಅರೇ' ಅಥವಾ 'ಸಮರ ವಿನ್ಯಾಸ' ಎಂದರೇನು?
ಇತಿಹಾಸದಲ್ಲೇ ಮೊದಲ ಬಾರಿಗೆ, ಭಾರತೀಯ ಸೇನೆಯು ಪರೇಡ್‌ನಲ್ಲಿ ಕೇವಲ ಪಥಸಂಚಲನ ಮಾಡದೆ, 'ಬ್ಯಾಟಲ್ ಅರೇ' ಅಥವಾ 'ಸಮರ ವಿನ್ಯಾಸ' ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ ಯುದ್ಧಭೂಮಿಯಲ್ಲಿ ಸೇನೆ ಹೇಗೆ ಸಜ್ಜಾಗಿರುತ್ತದೆಯೋ ಅದೇ ರೀತಿಯಲ್ಲಿ ಟ್ಯಾಂಕ್‌ಗಳು, ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಯಾಂತ್ರೀಕೃತ ಪಡೆಗಳು ಪ್ರದರ್ಶನಗೊಳ್ಳಲಿವೆ. ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಫ್ಲೈಪಾಸ್ಟ್ ಆಕಾಶದಲ್ಲಿ ತಮ್ಮ ಕೌಶಲ್ಯ ಮೆರೆಯಲಿವೆ. ಜೊತೆಗೆ ಮಾಜಿ ಯೋಧರ ಕೊಡುಗೆಯನ್ನು ಗೌರವಿಸಲು ವಾಯುಪಡೆಯಿಂದ ವಿಶೇಷ ಸ್ತಬ್ಧಚಿತ್ರವನ್ನೂ ಸಿದ್ಧಪಡಿಸಲಾಗಿದೆ.
ಜನ ಸಾಮಾನ್ಯರೇ ವಿಶೇಷ ಅತಿಥಿಗಳು:
ಸರ್ಕಾರದ 'ಜನ್ ಭಾಗಿದಾರಿ' (ಜನರ ಸಹಭಾಗಿತ್ವ) ಆಶಯದಂತೆ, ಸಮಾಜದ ವಿವಿಧ ಸ್ತರಗಳ ಸುಮಾರು 10,000 ಜನರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಇದರಲ್ಲಿ ರೈತರು, ವಿಜ್ಞಾನಿಗಳು, ಕ್ರೀಡಾಪಟುಗಳು, ಸ್ವಸಹಾಯ ಸಂಘದ ಮಹಿಳೆಯರು ಮತ್ತು ಶ್ರಮಜೀವಿಗಳು ಸೇರಿದ್ದಾರೆ.
ಒಟ್ಟಾರೆಯಾಗಿ, ರಾಜ್ಯಗಳು ಮತ್ತು ಸಚಿವಾಲಯಗಳ 30 ಸ್ತಬ್ಧಚಿತ್ರಗಳು, 2,500 ಕಲಾವಿದರ ಸಾಂಸ್ಕೃತಿಕ ಪ್ರದರ್ಶನ ಮತ್ತು ಅತ್ಯಾಧುನಿಕ ಸೇನಾ ಬಲದೊಂದಿಗೆ 2026ರ ಗಣರಾಜ್ಯೋತ್ಸವವು ಸಂಪ್ರದಾಯ ಮತ್ತು ಆಧುನಿಕತೆಯ ಬೆಸುಗೆಯಾಗಲಿದೆ. ಪ್ರವಾಸಿಗರಿಗೆ ಅನುಕೂಲವಾಗಲು ಉಚಿತ ಮೆಟ್ರೋ ಪ್ರಯಾಣ ಮತ್ತು ಇ-ಟಿಕೆಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.












Click it and Unblock the Notifications