H Kusuma Profile: ಈ ಬಾರಿಯಾದರೂ ಆರ್.ಆರ್.ನಗರ ಕ್ಷೇತ್ರದ ಜನತೆ ಕುಸುಮಾ ಕೈಹಿಡಿಯುವರೇ?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ರಾಜರಾಜೇಶ್ವರಿ ನಗರ. ಈ ಕ್ಷೇತ್ರ ಭೌಗೋಳಿಕವಾಗಿ ರಾಜ್ಯದ ದೊಡ್ಡ ಕ್ಷೇತ್ರಗಳಲ್ಲೊಂದು. ಕಳೆದ ಬಾರಿಯ ಚುನಾವಣೆಯ ವೇಳೆ ರಾಜ್ಯಾದ್ಯಂತ ಈ ಕ್ಷೇತ್ರ ಸುದ್ದಿ ಮಾಡಿದ್ದು ಇಲ್ಲಿನ ಅಸೆಂಬ್ಲಿ ಚುನಾವಣೆಯಿಂದಾಗಿ.
ಅಮೆರಿಕದ ಮೆಸ್ಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ, ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ (2018 ರಲ್ಲಿ) ಗಳಿಸಿರುವ ಕುಸುಮಾ.ಎಚ್ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯ ಅಸೆಂಬ್ಲಿ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ್ದರೂ, ಆರ್.ಆರ್.ನಗರಕ್ಕೆ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಲಿಲ್ಲ.

ಕಳೆದ ಬಾರಿ ಅಂದರೆ ನವೆಂಬರ್ 03, 2020ಕ್ಕೆ ನಡೆದ ಆರ್.ಆರ್.ನಗರದ ಉಪಚುನಾವಣೆಯಲ್ಲಿ ಬಿಜೆಪಿಯ ಎನ್. ಮುನಿರತ್ನ ಅವರು ಕಾಂಗ್ರೆಸ್ಸಿನ ಎಚ್.ಕುಸುಮಾ ವಿರುದ್ದ ಭರ್ಜರಿ ಲೀಡ್ ನಿಂದ ಗೆಲುವನ್ನು ಸಾಧಿಸಿದ್ದರು. ಆ ಮೂಲಕ ಮುನಿರತ್ನ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದರು. ಉಪಚುನಾವಣೆಯ ಪ್ರಚಾರ, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವಿನ ವಾಕ್ಸಮರದಿಂದಾಗಿ ಕ್ಷೇತ್ರದ ಚುನಾವಣಾ ಫಲಿತಾಂಶ ಎಲ್ಲರ ಕೇಂದ್ರಬಿಂದುವಾಗಿತ್ತು.
ಉಪಚುನಾವಣೆಯ ವೇಳೆ ಎಚ್.ಕುಸುಮಾ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಅವರ ಒಟ್ಟು ಆಸ್ತಿ 2.5ಕೋಟಿ, ಸಾಲ 20.48 ಲಕ್ಷ ಮತ್ತು ಇವರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ. ಅಫಿಡವಿಟ್ ನಲ್ಲಿ ತಂದೆಯ (ಹನುಮಂತರಾಯಪ್ಪ) ಹೆಸರನ್ನು ನಮೂದಿಸಿರುವ ಕುಸುಮಾ ಅವರ ಪತಿ ಜಿಲ್ಲಾಧಿಕಾರಿಯಾಗಿದ್ದ ದಿ. ಡಿ.ಕೆ.ರವಿ. ಕುಸುಮಾ ಅವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ (ದಯಾನಂದ ಸಾಗರ್) ಉಪನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್-ಕಾಂಗ್ರೆಸ್ಸಿಗೆ ವಾಪಸ್
ಇವರ ತಂದೆ ಹನುಮಂತರಾಯಪ್ಪ, ಕಾಂಗ್ರೆಸ್-ಜೆಡಿಎಸ್-ಕಾಂಗ್ರೆಸ್ಸಿಗೆ ವಾಪಸ್ ಸೇರ್ಪಡೆಗೊಂಡಿದ್ದರು. ಜೂನ್ 06, 1989ರಂದು ಜನಿಸಿದ ಕುಸುಮಾ, ಬೆಂಗಳೂರಿನ ವಿದ್ಯಾನಿಕೇತನ್ ಶಾಲೆಯಲ್ಲಿ ಎಸ್ಎಸ್ಎಲ್ಸಿ, ರಾಜಾಜಿನಗರದ ಕೆಎಲ್ಇ ಕಾಲೇಜಿನಲ್ಲಿ ಪಿಯುಸಿ, ಅಂಬೇಡ್ಕರ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವೀಧರರಾಗಿದ್ದಾರೆ.
ರಾಜರಾಜೇಶ್ವರಿ ನಗರ ಚುನಾವಣೆ
ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಜೆಡಿಎಸ್ಸಿನಿಂದ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧಿಸಬಹುದು ಎನ್ನುವ ಮಾತು ಆ ವೇಳೆ ಕೇಳಿ ಬರುತ್ತಿತ್ತು. ಒಕ್ಕಲಿಗ ಸಮುದಾಯ ನಿರ್ಣಾಯಕ ಪಾತ್ರ ವಹಿಸುವ ಈ ಕ್ಷೇತ್ರದಲ್ಲಿ ಉಪಚುನಾವಣೆಯ ವೇಳೆ ಕುಸುಮಾ ಅವರ ತಂದೆಯೇ ಸ್ಪರ್ಧಿಸಲು ಬಯಸಿದ್ದರು. ಆದರೆ, ಕೆಪಿಸಿಸಿಯ ಪ್ರಮುಖ ನಾಯಕರ ಸಲಹೆಯ ಮೇರೆಗೆ ಅವರ ಪುತ್ರಿ ಕುಸುಮಾಗೆ ಟಿಕೆಟ್ ನೀಡಲಾಗಿತ್ತು.
ರಾಜಕೀಯದ ಜೊತೆಗೆ ಸಮಾಜ ಸೇವೆ
ರಾಜಕೀಯದ ಜೊತೆಗೆ ಸಮಾಜ ಸೇವೆ, ಬರವಣಿಗೆಯಂತಹ ಹವ್ಯಾಸಗಳು ಕುಸುಮಾ ಅವರದ್ದಾಗಿದೆ. ನಿರಾತಂಕ ಸ್ವಯಂ ಸೇವಾ ಸಂಘದಲ್ಲಿ ನೊಂದ ವೃದ್ಧರಿಗೆ ಮತ್ತು ಮಹಿಳೆಯರ ಪರವಾಗಿ ಕಾರ್ಯ ನಿರ್ವಹಿಸಿರುವ ಕುಸುಮಾ ಅವರು ಈಗ ಎರಡನೇ ಬಾರಿಗೆ ಆರ್.ಆರ್.ನಗರದಲ್ಲಿ ತಮ್ಮ ರಾಜಕೀಯ ಭವಿಷ್ಯ ಬರೆಯಲು ಮುಂದಾಗಿದ್ದಾರೆ.
ಆರ್.ಆರ್.ನಗರ ಕ್ಷೇತ್ರ
ಆರ್.ಆರ್.ನಗರ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಯಿಂದ ತನ್ನತ್ತ ಸೆಳೆದುಕೊಂಡಿದ್ದ ಬಿಜೆಪಿ ಈ ಬಾರಿಯೂ ಬಹುತೇಕ ಮುನಿರತ್ನ ಅವರನ್ನೇ ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಕಳೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೃಷ್ಣಮೂರ್ತಿ ಕೇವಲ ಹತ್ತು ಸಾವಿರ ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದರು. ಕಾಂಗ್ರೆಸ್ಸಿನ ಯಾತ್ರೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕುಸುಮಾ ಅವರ ರಾಜಕೀಯ ಭವಿಷ್ಯ ಈ ಬಾರಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
2020ರ ಉಪಚುನಾವಣೆಯ ವೇಳೆ ಕ್ಷೇತ್ರದ ಮತದಾರರ ಅಂಕಿಅಂಶ
ಪುರುಷರು: 2,46,548
ಮಹಿಳೆಯರು: 2,25,274
ಇತರರು: 78
ಒಟ್ಟು: 4,71,900












Click it and Unblock the Notifications