Maha Kumbh Mela 2025: ಪ್ರಯಾಗ್‌ರಾಜ್‌ಗೆ ರೈಲಿನಲ್ಲಿ ಪ್ರಯಾಣಿಸುವವರು ಈ ವಿಚಾರ ತಿಳಿದುಕೊಳ್ಳಿ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಕೋಟ್ಯಂತರ ಭಕ್ತರು ರೈಲುಗಳ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಇತ್ತೀಚೆಗೆ ದೆಹಲಿ ರೈಲು ನಿಲ್ದಾಣದಲ್ಲಿ ಕುಂಭಮೇಳಕ್ಕೆ ತೆರಳಿದ್ದ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ ಹಲವರು ಸಾವನ್ನಪ್ಪಿದ ಬೆನ್ನಲ್ಲೇ ಪ್ರಯಾಗ್‌ರಾಜ್‌ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಉತ್ತರ ಪ್ರದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.
ಮುಖ್ಯವಾಗಿ ಉತ್ತರಪ್ರದೇಶದ ಪ್ರಮುಖ ಸ್ಥಳಗಳಾದ ಅಯೋಧ್ಯೆ, ಕಾನ್ಪುರ್, ಲಕ್ನೋ ಮತ್ತು ಮಿರ್ಜಾಪುರ ಸೇರಿದಂತೆ ಉತ್ತರ ಪ್ರದೇಶದ ಹಲವು ರೈಲು ನಿಲ್ದಾಣಗಳ ಮೂಲಕ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭಕ್ತರು ಬರುತ್ತಿದ್ದಾರೆ. ಈ ವೇಳೆ ಅಲ್ಲಿ ಜನರ ದಟ್ಟಣೆ ಕೂಡ ಅಧಿಕವಾಗುತ್ತಿದ್ದು, ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲಾಗಿದೆ.

ಮಹಾಕುಂಭ ಮೇಳಕ್ಕಾಗಿ ಪ್ರಯಾಗ್‌ರಾಜ್‌ಗೆ ಹೋಗುವ ರೈಲುಗಳನ್ನು ಹತ್ತಲು ನೂರಾರು ಜನರು ಹರಸಾಹಸ ಪಡುತ್ತಿದ್ದು, ಎರಡು ದಿನಗಳ ಹಿಂದೆ ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಉತ್ತರಪ್ರದೇಶದಲ್ಲಿರುವ ಎಲ್ಲ ರೈಲು ನಿಲ್ದಾಣಗಳಲ್ಲಿ ಜನರ ನಿಯಂತ್ರಣಕ್ಕೆ ವಿಶೇಷ ಮುಂಜಾಗ್ರತಾ ಕ್ರಮಗಳನ್ನು ರೂಪಿಸಲಾಗಿದೆ.
ಭಾರಿ ಜನದಟ್ಟಣೆಯನ್ನು ನಿಯಂತ್ರಿಸಲು ಪ್ರಯಾಗ್‌ರಾಜ್‌ನ ಸಂಗಮ ರೈಲು ನಿಲ್ದಾಣವನ್ನು ಫೆಬ್ರವರಿ 26ರವರೆಗೆ ಬಂದ್ ಮಾಡಲಾಗಿದೆ. ಮಹಾಕುಂಭ ಮೇಳ ಕೂಡ ಇದೇ ದಿನ ಮುಕ್ತಾಯವಾಗಲಿದೆ. ರೈಲುಗಳಲ್ಲಿ ಸೀಮಿತಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಬರುತ್ತಿರುವುದರಿಂದ ಪ್ರಯಾಗ್‌ರಾಜ್‌ನಲ್ಲಿರುವ ನಿಲ್ದಾಣಗಳಿಗೆ ಬರುವ ಹೆಚ್ಚುವರಿ ಪ್ರಯಾಣಿಕರನ್ನು ಪ್ರತ್ಯೇಕ ಸ್ಥಳಗಳಲ್ಲಿ ಇರಿಸಲಾಗುತ್ತಿದೆ ಎಂದು ಅಲ್ಲಿನ ರೈಲ್ವೆ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಇದಕ್ಕಾಗಿ 90 ಹಿಡುವಳಿ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಭಾಗದಲ್ಲಿ ಒಟ್ಟು ಎಂಟು ರೈಲು ನಿಲ್ದಾಣಗಳನ್ನು ಹೊಂದಿದ್ದೇವೆ. ಪ್ರಯಾಗ್‌ರಾಜ್‌ನಲ್ಲಿ ಪ್ರತಿದಿನ 500 ರೈಲುಗಳು ಸಂಚರಿಸುತ್ತಿವೆ. ಹಾಗಾಗಿ ಪ್ರಯಾಣಿಕರನ್ನು ದಟ್ಟಣೆಯಿಲ್ಲದೆ ಸುಗಮ ಸಂಚಾರದ ವ್ಯವಸ್ಥೆ ಮಾಡಲು ಇಲ್ಲಿನ ರೈಲ್ವೆ ಹಾಗೂ ಆಡಳಿತ ಸಿಬ್ಬಂದಿ ಮುಂದಾಗಿದ್ದಾರೆ.
ಅಯೋಧ್ಯೆಯ ರೈಲ್ವೆ ನಿಲ್ದಾಣಗಳಲ್ಲಿ ಯಾತ್ರಾರ್ಥಿಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸುಮಾರು 1.5 ಲಕ್ಷ ಪ್ರಯಾಣಿಕರ ದೈನಂದಿನ ಒಳಹರಿವನ್ನು ನಿರ್ವಹಿಸಲು 300 ಸಿಬ್ಬಂದಿ ಹಾಗೂ 200 ಸಿಸಿಟಿವಿ ಕ್ಯಾಮೆರಾಗಳನ್ನು ಇಲ್ಲಿ ನಿಯೋಜಿಸಲಾಗಿದೆ. ರೈಲ್ವೆ ಪಡೆಗಳು ಕೂಡ ಇಲ್ಲಿ ಕಣ್ಗಾವಲುಗಾಗಿ ಸಿಸಿಟಿವಿ ಬಳಸುತ್ತಿವೆ. ಜನಸಂದಣಿಯನ್ನು ನಿರ್ವಹಿಸಲು ಪ್ರತಿದಿನವೂ ವಿಶೇಷ ರೈಲುಗಳು ಸಂಚರಿಸುತ್ತಿವೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮತ್ತು ನೆರೆಹೊರೆಯ ನಗರಗಳು ಕೂಡ ವಾರಾಂತ್ಯದಲ್ಲಿ ಭಾರಿ ದಟ್ಟಣೆ ಎದುರಿಸುತ್ತಿವೆ. ಮಹಾ ಕುಂಭಮೇಳಕ್ಕಾಗಿ ಸಾವಿರಾರು ವಾಹನಗಳು ನಗರದತ್ತ ಬರುತ್ತಿದ್ದು, ಕಳೆದ ತಿಂಗಳು ಪ್ರಾರಂಭವಾದಾಗಿನಿಂದ 50 ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಬಲ್ಸನ್, ಬೈರ್ಹಾನಾ, ಸೊಬ್ತಿಯಾಬಾಗ್, ದರ್ಭಾಂಗಾ ಬಳಿ ನಗರದಲ್ಲಿ ಜನರ ದಟ್ಟಣೆ ಅಧಿಕವಾಗಿದೆ. ಕೇವಲ 15 ನಿಮಿಷಗಳ ಪ್ರಯಾಣವು ಸದ್ಯ ಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಯಾಗ್‌ರಾಜ್‌ನ ಗಡಿಯಲ್ಲಿರುವ ಮಧ್ಯಪ್ರದೇಶದ ರೇವಾದಲ್ಲೂ ಕಳೆದ 24 ಗಂಟೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ.












Click it and Unblock the Notifications