Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
ನಮ್ಮ ವಚನಕಾರರು ರಚಿಸಿರುವ ಪ್ರತಿ ವಚನವೂ ಬದುಕಿನ ಸಾರವನ್ನು ತಿಳಿಸಿದಂತೆ, ನಮ್ಮ ಸುತ್ತಮುತ್ತ ಜೀವಿಸುತ್ತಿರುವ ಪ್ರತಿ ಹುಳ-ಹುಪ್ಪಟೆ, ಕ್ರಿಮಿ-ಕೀಟಗಳು ಬದುಕಿನ ಹೋರಾಟದ ಕತೆಗಳನ್ನು ತಿಳಿಸುತ್ತಿರುತ್ತವೆ. ಅವುಗಳ ಚಲನವಲಗಳತ್ತ ಕಣ್ಣರಳಿಸಿ ನೋಡುವಂತಹ ಸೂಕ್ಷ್ಮತೆ, ತಾಳ್ಮೆ ಇದ್ದರೆ ಪ್ರತಿ ಕೀಟದಿಂದಲೂ ತಿಳಿಯುವುದು ಅದೆಷ್ಟೋ ಇದೆ ಎಂಬುದನ್ನು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಏರೋಪ್ಲೇನ್ ಚಿಟ್ಟೆಗಳು ಮತ್ತು ಇತರ ಕತೆಗಳು ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಪ್ರಕೃತಿಯ ವಿಸ್ಮಯಗಳನ್ನು ಒಳಗೊಂಡಿರುವ ಹಲವು ಪುಸ್ತಕಗಳನ್ನು ತೇಜಸ್ವಿ ಅವರು ಬರೆದಿದ್ದಾರೆ. ಮಕ್ಕಳಿಗೆ ವಿಜ್ಞಾನದ ಬಗ್ಗೆ, ಹುಳು ಹುಪ್ಪಟೆಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಈ ಪುಸ್ತಕದಿಂದ ನಮಗೇನು ಪ್ರಯೋಜನ ಅಂತಿರಾ. ಈ ಸ್ಟೋರಿ ಓದಿ.

ವಿಸ್ಮಯ ಲೋಕದ ಅನಾವರಣ
ಇವತ್ತಿನ ಆಧುನಿಕ ಜಗತ್ತಿನಲ್ಲಿ ಪರಿಸರದಿಂದ ಬಹುದೂರ ಸಾಗಿ ಬಂದಿದ್ದೇವೆ. ಕಾಂಕ್ರಿಟ್ ಲೋಕದಲ್ಲಿ ವಿಹರಿಸುತ್ತಿದ್ದೇವೆ. ಪರಿಸರದೊಂದಿಗೆ ನಂಟನ್ನು ಕಳೆದುಕೊಳ್ಳುವ ಮುನ್ನ, ನಮ್ಮ ಪರಿಸರದಲ್ಲಿರುವ ಪ್ರತಿಯೊಂದು ಚರಾಚರಗಳು ಆಹಾರ ಸರಪಳಿಯಲ್ಲಿ ಎಷ್ಟರ ಮಟ್ಟಿಗೆ ಬಹುಮುಖ್ಯವಾದ ಪಾತ್ರ ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಏರೋಪ್ಲೇನ್ ಚಿಟ್ಟೆ ಹಾಗೂ ಇತರೆ ಕತೆಗಳು ಎಂಬ ಪುಸ್ತಕ ಸಹಾಯಕವಾಗಿದೆ.
ಉದಾಹರಣೆ ಹೇಳುವುದಾದರೆ, 'ನುಂಗಲಾರದ ತುತ್ತು' ಎಂಬ ತಲೆಬರಹದಡಿಯಲ್ಲಿರುವ ಕತೆಯಲ್ಲಿ ನೀರುಹಾವು ಕಪ್ಪೆಯನ್ನು ಹೊಂಚುಹಾಕಿ ನುಂಗುವ ಪ್ರಸಂಗವನ್ನು ಪೂರ್ಣಚಂದ್ರ ತೇಜಸ್ವಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದಾರೆ. ಸಣ್ಣ ಗಾತ್ರದ ಹಾವು ಕಪ್ಪೆಯನ್ನು ನುಂಗುವಾಗ ಹಾವಿನ ಬಾಯಿ ದೊಡ್ಡಗಾತ್ರವಾಗಿ ಹಿಗ್ಗಿಸಿಕೊಂಡು ಹೊಟ್ಟೆಯೊಳಗೆ ಸೇರಿಸಿಕೊಳ್ಳುತ್ತದೆ. ಆದರೆ, ಕಪ್ಪೆಯನ್ನು ಹೊಟ್ಟೆಯೊಳಗೆ ಅರಗಿಸಿಕೊಳ್ಳಲಾಗದೆ ಹಾವು, ಬೇರೆ ಕಡೆ ಚಲಿಸಲಾರದೆ ಅಲ್ಲಿಯೇ ಸಂಕಟ ಪಡುತ್ತಾ ಉಳಿಯುತ್ತದೆ.
ಹಾವಿನ ಪರಿಸ್ಥಿತಿಯನ್ನು ಪೊದೆಗಳಿಂದ ನೋಡಿದ ಕೆಂಬೂತ ಹಕ್ಕಿಯು, ಓಡಿ ಬಂದು ಹಾವನ್ನು ಬಾಲದಿಂದ ತಿನ್ನಲು ಪ್ರಾರಂಭಿಸುತ್ತದೆ. ಆಗ ಹಾವು ತನ್ನ ಹೊಟ್ಟೆಯೊಳಗಿನ ಕಪ್ಪೆಯನ್ನು ಬಾಯಿಯಿಂದ ಹೊರಕ್ಕೆ ಹಾಕಿ ಓಡಿ ಹೋಗಲು ಪ್ರಯತ್ನಿಸುತ್ತದೆ. ಅಷ್ಟರಲ್ಲಿ ಕೆಂಬೂತ ಹಕ್ಕಿ ಹಾವನ್ನು ಬಾಲದಿಂದ ಕಾಲುಭಾಗ ತಿಂದು ಹೊಟ್ದೆ ತುಂಬಿಸಿಕೊಂಡು ಹಾರಿ ಹೋಗುತ್ತದೆ.
ಇನ್ನು ಅರೆ ಜೀವವನ್ನು ಉಳಿಸಿಕೊಂಡಿದ್ದ ನೀರುಹಾವು ಸರ ಸರನೆ ಹಳ್ಳದ ಕಡೆಗೆ ಹೋಗುತ್ತದೆ. ಹಾಗೂ ಹಾವಿನ ಹೊಟ್ಟೆಯಿಂದ ಹೊರಬಿದ್ದ ಕಪ್ಪೆ, ಸ್ವಲ್ಪ ಹೊತ್ತಿನ ನಂತರ ಕಣ್ಣನ್ನು ಪಿಳಪಿಳನೆ ಬಿಟ್ಟುಕೊಳ್ಳುತ್ತಾ ಎಗರಿಕೊಂಡು ಹೋಗುತ್ತದೆ. ಆಹಾರ ಸರಪಳಿಯ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಸುವ ಕತೆ ಇದಾಗಿದೆ.
ಹಾಗೆಯೇ 'ಒಂಟೆಹುಳು' ತಲೆಬರಹದಡಿಯ ಕತೆಯು, ಒಂಟೆಹುಳು ತನ್ನ ಮೊಟ್ಟೆಗಳನ್ನು ಜೋಪಾನ ಮಾಡಿ, ಆ ಮೊಟ್ಟೆಗಳಿಂದ ಮರಿಯಾಗುವ ಪ್ರಕ್ರಿಯೆ ಹೇಗೆ ರಹಸ್ಯವಾಗಿಡುತ್ತದೆ ಎಂಬುದನ್ನು ವಿವರಿಸುವ ಕತೆಯಾಗಿದೆ.
ನಮ್ಮ ಪರಿಸರದಲ್ಲಿ ಅದೆಷ್ಟೊ ನಿಗೂಢಗಳು ನಮ್ಮ ಸುತ್ತಮುತ್ತ ದಿನನಿತ್ಯ ಘಟಿಸುತ್ತಲೆ ಇರುತ್ತದೆ. ಆದರೆ, ಅವುಗಳನ್ನು ಸೂಕ್ಷ್ಮವಾಗಿ ಗ್ರಹಿಸುವಷ್ಟು ತಾಳ್ಮೆ ಹಾಗೂ ಕಾಳಜಿ ಎರಡೂ ಇರುವುದಿಲ್ಲ. ಉದಾಹರಣೆಗೆ ಒಂಟೆಹುಳುವಿನ ಜೀವನ ವಿಧಾನವನ್ನೆ ತೆಗೆದುಕೊಳ್ಳುವುದಾದರೆ, ಒಂಟೆ ಹುಳು ಮೊಟ್ಟೆ ಇಡುವ ಸಲುವಾಗಿ ಒಂದು ಮರದ ಎಲೆ ಮೇಲೆ ಕೂತು, ಸುತ್ತಾಡಿ ಆ ಎಲೆಯ ವಿಸ್ತೀರ್ಣವನ್ನು ಪರೀಕ್ಷಿಸುತ್ತದೆ. ಆಮೇಲೆ ಎಲೆಯನ್ನು ಮಧ್ಯೆ ದಿಂಡು ಮಾತ್ರ ಉಳಿಸಿ ಕತ್ತರಿಸಿ ದೂರ ಹೋಗಿ ಕೂರುತ್ತದೆ. ಹೀಗೆ ಮಾಡುವುದರಿಂದ ಆ ಎಲೆಗೆ ಗಿಡದಿಂದ ಒದಗುತ್ತಿದ್ದ ಸಸ್ಯರಕ್ತ ನಿಲ್ಲುತ್ತದೆ. ಇದರಿಂದ ಎಲೆ ಒಣಗಲು ಪ್ರಾರಂಭವಾಗುತ್ತದೆ. ಈ ವೇಳೆ ಬಾಡಿದ ಎಲೆ ಹಗುರಾಗುತ್ತದೆ.
ಈ ಎಲೆಯನ್ನು ದಿಂಡಿನ ಬಳಿ ಪುನಃ ಬಂದು ಕೂರುವ ಒಂಟೆಹುಳು ತನ್ನ ನಾಲ್ಕು ಕಾಲುಗಳಿಂದ ಬಾಡಿದ ಎಲೆಯನ್ನು ಎರಡು ಸುರಳಿ ಸುತ್ತಿ, ಆ ಸುರಳಿಯೊಳಗೆ ಒಂದು ಚಿಕ್ಕರಂಧ್ರ ಕೊರೆದು ಅದರೊಳಗೆ ಮೊಟ್ಟೆ ಇಡುತ್ತದೆ. ಪುನಃ ಎಲೆಯನ್ನು ಬೀಡಿಸುತ್ತಿದ ಹಾಗೆ ಸುತ್ತಿ ಎಲೆಯ ದಿಂಡನ್ನು ಕತ್ತರಿಸಿ ಕೆಳಕ್ಕೆ ಬೀಳಿಸುತ್ತದೆ. ಈ ಕಸದ ರಾಶಿಯ ಮಧ್ಯೆ ಸುರಳಿಸುತ್ತಿದ ಎಲೆಯಲ್ಲಿರುವ ಒಂಟೆಹುಳುವಿನ ಮೊಟ್ಟೆ ಹೊಡೆದು ಮರಿಯಾಗುತ್ತದೆ. ಇದು ಯಾವ ಆಧುನಿಕ ಎಂಜಿನಿಯರಿಂಗ್ ಬುದ್ದಿವಂತಿಕೆಗೂ ಕಮ್ಮಿಯಿಲ್ಲ ಎಂದೆನಿಸುತ್ತದೆ.
ಹೀಗೆ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು ಪುಸ್ತಕದಲ್ಲಿ ಒಟ್ಟು 17ಕ್ಕೂ ಹೆಚ್ಚು ಕತೆಗಳಿದ್ದು, ಎಲ್ಲವೂ ನಮ್ಮ ಸುತ್ತಮುತ್ತ ಕಾಣಸಿಗುವ ಏರೋಪ್ಲೇನ್ ಚಿಟ್ಟಿ, ಬಾವಲಿ, ಹಾವು, ಝರಿ, ಹಕ್ಕಿಗಳ ಬದುಕಿನ ವೈಶಿಷ್ಡ್ಯತೆ ಕುರಿತ ಕತೆಗಳಿವೆ. ನಾವು ಈ ಕೀಟಗಳನ್ನು ನೋಡಿ ಸುಮ್ಮನಾಗುತ್ತೇವೆ. ಆದರೆ, ನಮ್ಮ ನಡುವೆ ಸಹಜವಾಗಿ ಬದುಕುತ್ತಿರುವ ಕೀಟಗಳು, ಪ್ರಾಣಿ, ಪಕ್ಷಿಗಳ ಬದುಕನ್ನು ಅರಿಯುತ್ತಾ ಹೋದರೆ ನಮ್ಮೆದುರಿಗೆ ಹೊಸ ಪ್ರಪಂಚವೇ ಅನಾವರಣಗೊಳ್ಳುತ್ತವೆ ಎಂಬುದನ್ನು ಈ ಪುಸ್ತಕ ಅನಾವರಣಗೊಳಿಸುತ್ತದೆ.
ತೇಜಸ್ವಿ ಅವರ ಕರ್ವಾಲೋ, ಕಾಡಿನ ಕಥೆಗಳು ಸರಣಿಯ ಪುಸ್ತಕಗಳನ್ನು ಓದಿದರೆ ಪ್ರಕೃತಿಯ ವಿಸ್ಮಗಳ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸುತ್ತವೆ. ಮಕ್ಕಳಿಗೆ ಈ ಪುಸ್ತಕಗಳನ್ನು ನೀಡಿದರೆ, ಪರಿಸರದ ಬಗ್ಗೆ, ಜೀವ ವಿಜ್ಞಾನದ ಬಗ್ಗೆ ಅವರಲ್ಲು ಕುತೂಹಲ ಮೂಡಿಸಲು ಸಹಕಾರಿಯಾಗುತ್ತದೆ.












Click it and Unblock the Notifications