• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನ ಅರಮನೆಯ ಬಗ್ಗೆ ಎಷ್ಟೋ ಮಂದಿಗೆ ತಿಳಿದಿಲ್ಲ ಈ ವಿಷಯ...

|

ಇವತ್ತು ಮೈಸೂರಿನ ಪ್ರಮುಖ ಆಕರ್ಷಣೆಯಾಗಿ ವಿದ್ಯುದ್ದೀಪಗಳಿಂದ ಝಗಮಗಿಸುವ ಮೈಸೂರು ಅರಮನೆ ನಿರ್ಮಾಣಕ್ಕೂ ಮೊದಲು ಇಲ್ಲೊಂದು ಹಳೆಯ ಅರಮನೆಯಿತ್ತು. ಅದು ಆಕಸ್ಮಿಕ ಬೆಂಕಿಗೆ ಆಹುತಿಯಾದ ಬಳಿಕ ಅದೇ ಅರಮನೆಯ ಮಾದರಿಯಲ್ಲಿ ಈಗಿನ ಅರಮನೆಯನ್ನು ನಿರ್ಮಿಸಲಾಗಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಮೈಸೂರು ಮಹಾರಾಜರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಹಲವಾರು ಅರಮನೆಗಳನ್ನು ನಿರ್ಮಿಸುವ ಮೂಲಕ ಮೈಸೂರನ್ನು ಅರಮನೆ ನಗರಿಯಾಗಿಸಿದ್ದಾರೆ.

ಇವತ್ತು ನಮಗೆ ಮೈಸೂರೆಂದರೆ ಕಣ್ಣಮುಂದೆ ಬರುವುದು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ, ನುರಿತ ಶಿಲ್ಪಿಗಳಿಂದ ವಿಶಿಷ್ಟ ವಾಸ್ತುಶಿಲ್ಪ ಹಾಗೂ ವಿನ್ಯಾಸದಿಂದ ನಿರ್ಮಾಣವಾಗಿರುವ ಅಂಬಾವಿಲಾಸ ಅರಮನೆ. ಜಗದ್ವಿಖ್ಯಾತಗೊಂಡಿರುವ ಈ ಅರಮನೆ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಇದನ್ನು ನೋಡಲೆಂದೇ ಜನ ಸಾಗರೋಪಾದಿಯಲ್ಲಿ ಬರುತ್ತಾರೆ. ಮೈಸೂರಿನ ಹೃದಯಭಾಗದಲ್ಲಿ ಕಂಗೊಳಿಸುವ ಅರಮನೆ ಸುಂದರವಾಗಿ ನಿರ್ಮಾಣವಾಗಿದ್ದು, ಇದರ ಸೌಂದರ್ಯ ನೋಡುಗರ ಮನಸೆಳೆಯುತ್ತದೆ.

ಮೈಸೂರು ಮಹಾರಾಜರಿಗೆ ಬಲುಪ್ರಿಯವಾಗಿತ್ತಂತೆ ಎಚ್.ಡಿ.ಕೋಟೆ

ಆದರೆ ಇವತ್ತು ನಿರ್ಮಾಣವಾಗಿರುವ ಅರಮನೆಗೂ ಮೊದಲು ಇಲ್ಲೊಂದು ಅರಮನೆಯಿತ್ತು ಎನ್ನುವುದು ಇತಿಹಾಸ ತಿಳಿದವರಿಗೆ ಮಾತ್ರ ಗೊತ್ತಾಗುತ್ತದೆ. ಉಳಿದಂತೆ ಈ ಅರಮನೆಗೂ ಮುನ್ನ ಇಲ್ಲೊಂದು ಅರಮನೆಯಿತ್ತು ಎಂಬುದೇ ಹೆಚ್ಚಿನವರಿಗೆ ತಿಳಿದಿಲ್ಲ. ಆ ಅರಮನೆಯು ಕಟ್ಟಿಗೆಯಿಂದ ನಿರ್ಮಿಸಲಾಗಿತ್ತು ಎಂಬುದು ಗಮನಸೆಳೆಯುವಂಥ ವಿಚಾರವಾಗಿದೆ. ಮುಂದೆ ಓದಿ...

 ಹಳೆಯ ಅರಮನೆ ಬಗ್ಗೆ ಗೊತ್ತಾ?

ಹಳೆಯ ಅರಮನೆ ಬಗ್ಗೆ ಗೊತ್ತಾ?

ಹಿಂದೆ ರಾಜಪರಿವಾರದವರು ವಾಸವಾಗಿದ್ದ ಹಳೆಯ ಅರಮನೆಯನ್ನು 1800 ರಿಂದ 1804ರವರೆಗೆ ಕಟ್ಟಲಾಗಿತ್ತು. ಈ ಅರಮನೆಯು ಅವತ್ತಿನ ಕಾಲಕ್ಕೆ ಅರಮನೆ ಹೇಗಿರಬೇಕೋ ಹಾಗೆಯೇ ವೈಭವದಿಂದ ಕೂಡಿತ್ತು. ಅರಮನೆ ನಿರ್ಮಾಣಕ್ಕೆ ಇಟ್ಟಿಗೆಯೊಂದಿಗೆ ಹೆಚ್ಚಿನ ಕಟ್ಟಿಗೆಯನ್ನು ಬಳಸಲಾಗಿತ್ತು. ಅರಮನೆಯ ಪೂರ್ವಕ್ಕೆ ಮೊದಲನೇ ಅಂತಸ್ತು ಮತ್ತು ಉತ್ತರ ಭಾಗಕ್ಕೆ ದರ್ಬಾರ್ ಹಾಲ್ ಇತ್ತು. ಅವತ್ತಿನ ಕಾಲದಲ್ಲಿ ಇದೇ ಅರಮನೆ ಆವರಣದಲ್ಲಿ ದಸರಾವನ್ನು ಆಚರಿಸಲಾಗುತ್ತಿತ್ತು. ದರ್ಬಾರ್ ಕೂಡ ಇಲ್ಲಿಯೇ ನಡೆಯುತ್ತಿತ್ತು. ರಾಜಪರಿವಾರಗಳಿಂದ, ಸೇವಕರಿಂದ ಕೂಡಿದ ಅರಮನೆಯಲ್ಲಿ ಸದಾ ವೈಭವ ಮೇಳೈಸುತ್ತಿತ್ತು.

ಅದೊಂದು ದುರ್ಘಟನೆ ನಡೆದು ಹೋಯಿತು

ಅದೊಂದು ದುರ್ಘಟನೆ ನಡೆದು ಹೋಯಿತು

ಬಹುಶಃ ಅದೊಂದು ದುರ್ಘಟನೆ ನಡೆಯದೆ ಹೋಗಿದ್ದರೆ, ಇವತ್ತಿನ ಸುಂದರ ಅಂಬಾವಿಲಾಸ ಅರಮನೆ ನಿರ್ಮಾಣವಾಗುತ್ತಿರಲಿಲ್ಲವೇನೋ? ಅಥವಾ ಅದೇ ಹಳೇ ಅರಮನೆ ಇವತ್ತಿಗೂ ಹಾಗೆಯೇ ಉಳಿಯುತ್ತಿತ್ತೇನೋ? ಆದರೆ ಅದೊಂದು ನಡೆಯಬಾರದ ದುರ್ಘಟನೆಯೊಂದು ಅವತ್ತು ನಡೆದು ಹೋಗಿತ್ತು. ಅದು 1897 ಫೆಬ್ರವರಿ 28ರ ಭಾನುವಾರದ ದಿನ. ಇಡೀ ಅರಮನೆ ಸಡಗರ ಸಂಭ್ರಮದಿಂದ ತೇಲಾಡುತ್ತಿತ್ತು. ಕಾರಣ ಚಾಮರಾಜೇಂದ್ರ ಒಡೆಯರ್ ಮತ್ತು ವಾಣಿವಿಲಾಸ ಸನ್ನಿಧಾನದವರ ಹಿರಿಯ ಪುತ್ರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹ ಸರ್ದಾರ್ ಕಾಂತರಾಜೇ ಅರಸ್ ಅವರೊಂದಿಗೆ ಜರುಗುತ್ತಿತ್ತು. ಈ ವಿವಾಹದ ಸಡಗರ ಅರಮನೆಯನ್ನು ಆವರಿಸಿ ಎಲ್ಲರೂ ಖುಷಿಯಾಗಿ ಇರುವಾಗಲೇ ಅಲ್ಲೊಂದು ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು.

ಮೈಸೂರು ದಸರಾ ವೈಭವಕ್ಕೆ ಸಾಕ್ಷಿಯಾಗಿರುವ ಸೀತಾವಿಲಾಸ ಛತ್ರ

ಹೊತ್ತಿ ಉರಿದ ಮೈಸೂರು ಅರಮನೆ

ಹೊತ್ತಿ ಉರಿದ ಮೈಸೂರು ಅರಮನೆ

ಅದು ಏನೆಂದರೆ, ವಧು ಜಯಲಕ್ಷ್ಮಮ್ಮಣ್ಣಿಯವರ ಕೂದಲಿಗೆ ಸಾಂಬ್ರಾಣಿ ಹೊಗೆ ಕೊಡುವ ಸಂದರ್ಭ ಪರಿಚಾರಕರಿಗೆ ಕೆಂಡವೊಂದು ಕೆಳಗೆ ಬಿದ್ದದ್ದು ಗೊತ್ತಾಗಲೇ ಇಲ್ಲ. ಆ ಕೆಂಡದಿಂದ ಉರಿದ ಬೆಂಕಿ ತೇಗದ ಮರಕ್ಕೆ ತಾಗಿ ಹತ್ತಿ ಉರಿಯತೊಡಗಿತ್ತು. ಇದ್ದಕ್ಕಿದ್ದಂತೆಯೇ ಬೆಂಕಿ ಅರಮನೆಯನ್ನು ಆವರಿಸಿತು. ಅರಮನೆಯಲ್ಲಿದ್ದ ಸೇವಕರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅರಮನೆಯಿಂದ ಹೊರ ಓಡಿದರಲ್ಲದೆ, ಅರಮನೆಯಲ್ಲಿದ್ದ ರಾಜವಂಶಸ್ಥರನ್ನು ಹಾಗೂ ವಿವಾಹಕ್ಕೆ ಆಗಮಿಸಿದ್ದ ದೇಶವಿದೇಶಗಳ ಅತಿಥಿಯನ್ನು ಯಾವುದೇ ಪ್ರಾಣಾಪಾಯವಾಗದಂತೆ ಕಾಪಾಡಿದರು.

ಜಾಗೃತಗೊಂಡ ಅಲ್ಲಿದ್ದ ಸೈನಿಕರು ಮತ್ತು ಸೇವಕರು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲಿಲ್ಲ. ಅದೇ ಸಮಯಕ್ಕೆ ಯಂತ್ರ ಕೆಟ್ಟು ಹೋಗಿದ್ದರಿಂದ ನಲ್ಲಿಯಲ್ಲಿ ನೀರು ಬರುತ್ತಿರಲಿಲ್ಲ. ಹೀಗಾಗಿ ನೀರನ್ನು ಹುಡುಕಿ ತಂದು ಆರಿಸುವ ಕೆಲಸ ಮಾಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ನಾಲ್ಕು ದಿಕ್ಕಿಗೂ ಬೆಂಕಿಯ ಜ್ವಾಲೆ ಹರಡಿ ವಿರಾಟ ಸ್ವರೂಪ ತಾಳಿತ್ತು.

 ಉರಿದು ಬೂದಿಯ ರಾಶಿಯಾದ ಅರಮನೆ

ಉರಿದು ಬೂದಿಯ ರಾಶಿಯಾದ ಅರಮನೆ

ರಾತ್ರಿಯಿಂದ ಬೆಳಿಗ್ಗೆ ತನಕವೂ ಅರಮನೆ ಹೊತ್ತಿ ಉರಿದಿತ್ತು. ಸುತ್ತಮುತ್ತಲಿನ ಜನ ಸೇರಿದಂತೆ ಸುಮಾರು 8000 ಮಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರಾದರೂ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಲಿಲ್ಲ. ಪರಿಣಾಮ, ಉಳಿದಿದ್ದು ಅರಮನೆಯ ಅವಶೇಷ ಮತ್ತು ರಾಶಿ ಬಿದ್ದ ಬೂದಿ ಮಾತ್ರ. ಇದನ್ನು ನೋಡಿದ ರಾಜಪರಿವಾರ ಮಾತ್ರವಲ್ಲ ಪ್ರಜೆಗಳು ಕಣ್ಣೀರಿಟ್ಟಿದ್ದರು. ಅರಮನೆ ಬೆಂಕಿಗೆ ಆಹುತಿಯಾದ ಕಾರಣ ರಾಜಪರಿವಾರದ ವಾಸ್ತವ್ಯವನ್ನು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತರಿಸಲಾಯಿತು. ಇದೇ ಸಮಯದಲ್ಲಿ ಅರಮನೆಯಲ್ಲಿದ್ದ ರತ್ನಾಭರಣ, ಬೆಳ್ಳಿ ಬಂಗಾರದ ಪದಾರ್ಥ, ಮುತ್ತಿನ ಹಾರ ಸೇರಿದಂತೆ ವಿವಿಧ ಬಗೆಯ ಬೆಲೆಬಾಳುವ ಪದಾರ್ಥಗಳನ್ನು ಹೊರಕ್ಕೆ ತಂದು ಬಯಲಲ್ಲಿ ರಾಶಿ ಹಾಕಿದ್ದರು. ಇದೇ ವೇಳೆ ಅರಮನೆಯ ಪಂಚಕಳಶವೂ ಮೇಲಿಂದ ಬಿದ್ದಿತು. ಇದನ್ನು ಕಂಡ ಜನ ಕಣ್ಣೀರಿಡುತ್ತಾ ರೋದಿಸಿದ್ದರಂತೆ.

ಕುತೂಹಲ ಕೆರಳಿಸುತ್ತದೆ ಮೈಸೂರಿನ ಈ "ಮದ್ದಿನ ಮನೆ"

ಹೊಸ ಅರಮನೆ ನಿರ್ಮಿಸಲು ತೀರ್ಮಾನ

ಹೊಸ ಅರಮನೆ ನಿರ್ಮಿಸಲು ತೀರ್ಮಾನ

ಇದಾದ ನಂತರ ಹೊಸ ಮಾದರಿಯಲ್ಲಿ, ಬೆಂಕಿ ಆಕಸ್ಮಿಕ ಸಂಭವಿಸಿದರೂ ಏನೂ ಆಗದ ರೀತಿಯಲ್ಲಿ ಹಿಂದೆಯಿದ್ದ ಕಟ್ಟಿಗೆಯ ಅರಮನೆಯ ವಿನ್ಯಾಸದಲ್ಲಿ ಹೊಸ ಮಾದರಿಯಲ್ಲಿ ಅರಮನೆಯನ್ನು ನಿರ್ಮಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್ ತೀರ್ಮಾನಿಸಿದರು. ಅದರ ನಕಾಶೆ ತಯಾರಿಸಲು ಜವಾಬ್ದಾರಿಯನ್ನು ಮದ್ರಾಸ್ ಸರ್ಕಾರದ ಸಲಹೆಗಾರ ಇಂಜಿನಿಯರಾದ ಹೆನ್ರಿ ಇರ್ವಿನ್ ರವರಿಗೆ ನೀಡಲಾಯಿತು. ಆದರೆ ಅವತ್ತು ಅಗ್ನಿಗಾಹುತಿಯಾದ ಅರಮನೆಯ ನೀಲಿ ನಕ್ಷೆ ಇರಲಿಲ್ಲ. ಅದಕ್ಕಾಗಿ ಹುಡುಕಾಟ ನಡೆಸಲಾಯಿತು. ಕೊನೆಗೆ ಬ್ರಿಟಿಷ್ ಸೈನಿಕನೊಬ್ಬ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದ ಫೋಟೊ ಅಧಿಕಾರಿಗಳಿಗೆ ಸಿಕ್ಕಿತ್ತು. ಅದನ್ನು ಪಡೆದುಕೊಂಡ ಹೆನ್ರಿ ಇರ್ವಿನ್ ಅದರಂತೆ ಈಗಿನ ಅರಮನೆಯ ನಕಾಶೆ ರೂಪಿಸಿದ್ದು, ಅರಮನೆಯ ನಕಾಶೆ ರೂಪಿಸಿದ ಹೆನ್ರಿ ಇರ್ವಿನ್ರವರಿಗೆ ಅವತ್ತು ಮಹಾರಾಜರು ಶುಲ್ಕವಾಗಿ 12 ಸಾವಿರ ರೂಪಾಯಿಯನ್ನು ನೀಡಿದ್ದರಂತೆ.

 41,47,912 ರೂ. ವೆಚ್ಚದಲ್ಲಿ ಹೊಸ ಅರಮನೆ

41,47,912 ರೂ. ವೆಚ್ಚದಲ್ಲಿ ಹೊಸ ಅರಮನೆ

ಅರಮನೆಯ ಇಂಜಿನಿಯರ್ ಆಗಿ ಬಿ.ಪಿ.ರಾಘವಲುನಾಯಿಡು ಕೆಲಸ ಮಾಡಿದರೆ, ಅರಮನೆಯಲ್ಲಿ ಚಿತ್ರ ರಚಿಸಲು ನಾಗರಾಜು ಎಂಬ ಕಲಾವಿದನನ್ನು ಚಿತ್ರರಚನೆಯ ಅಧ್ಯಯನಕ್ಕಾಗಿ ಯುರೋಪಿನ ರಾಜ್ಯಗಳಿಗೆ ಕಳುಹಿಸಲಾಯಿತು. ಇದಕ್ಕಾಗಿ ಒಡೆಯರ್ ಮಾಡಿದ ಖರ್ಚ್ 2437 ರೂಪಾಯಿ 4 ಆಣೆ 8 ಕಾಸಂತೆ. ಜೊತೆಗೆ ಹಳೆಬೀಡು, ಬೇಲೂರು ಹಾಗೂ ಸೋಮನಾಥಪುರ ದೇವಾಲಯದ ನಿರ್ಮಾಣದಲ್ಲಿ ಮಾಡಲಾದ ಕುಸುರಿ ಕೆತ್ತನೆಯನ್ನು ಅರಮನೆಯ ನಿರ್ಮಾಣದ ಸಂದರ್ಭ ಅನುಸರಿಸಲಾಯಿತು. 1897ರಿಂದಲೇ ಆರಂಭಗೊಂಡ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಸುಮಾರು 41,47,912 ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ನಮ್ಮ ಮುಂದೆ ಮೈಸೂರು ರಾಜ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ.

English summary
There was an old palace before the construction of this present Mysuru Palace, which is a major attraction of Mysuru today. Most people are unaware that the present palace is built in the same style as old palace was destroyed by fire accident,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X