Maha Kumbh Mela: ಮಹಾಕುಂಭ ಮೇಳಕ್ಕೆ ಇಂದು ತೆರೆ, ಭಕ್ತ ಸಮೂಹದಿಂದ ಕೊನೇ ಅಮೃತ ಸ್ನಾನ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಶುರುವಾದ ಮಹಾಕುಂಭ ಮೇಳಕ್ಕೆ ಮಹಾಶಿವರಾತ್ರಿ ದಿನವಾದ ಇಂದು (ಫೆಬ್ರವರಿ 26) ತೆರೆ ಬೀಳಲಿದೆ. ಶಿವರಾತ್ರಿಯಂದು ಕೊನೆಯ ಅಮೃತ ಸ್ನಾನಕ್ಕಾಗಿ ಇಂದು ಮುಂಜಾನೆಯಿಂದಲೇ ತ್ರಿವೇಣಿ ಸಂಗಮಕ್ಕೆ ಭಕ್ತರು ದಾಂಗುಡಿ ಇಟ್ಟಿದ್ದಾರೆ. ಸುಮಾರು ಆರು ವಾರಗಳ ಕಾಲ ನಡೆಯುವ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಹಿಂದೂ ಪುರಾಣಗಳ ಪ್ರಕಾರ ಶಿವನು ಸಮುದ್ರ ಮಂಥನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದನು. ಇದು ಕುಂಭಮೇಳದ ಮೂಲತತ್ವವಾದ ಅಮೃತ ಕುಂಭ ಹೊರಹೊಮ್ಮಲು ಕಾರಣವಾಯಿತು ಎಂಬ ಧಾರ್ಮಿಕ ನಂಬಿಕೆ ಇದೆ. ಆ ಅಮೃತವು ಇಲ್ಲಿನ ನದಿ ಭಾಗಗಳಲ್ಲಿ ಚಿಮ್ಮಿತ್ತು ಎನ್ನಲಾಗಿದ್ದು, ಮಹಾಕುಂಭ ಮೇಳದ ಸಮಯವನ್ನು ಶ್ರೇಷ್ಠ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರೆ ಪಾಪ ಕರ್ಮಗಳಿಂದ ಮುಕ್ತಿ ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ.

ಪ್ರಯಾಗರಾಜ್‌ನಲ್ಲಿ ಬೆಳಿಗ್ಗೆ 6 ಗಂಟೆಗೆ ವೇಳೆಗೆ ಆಗಲೇ 40 ಲಕ್ಷಕ್ಕೂ ಹೆಚ್ಚು ಮಂದಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಉತ್ತರಪ್ರದೇಶ ಸರ್ಕಾರದ ಅಂದಾಜಿನ ಪ್ರಕಾರ ಸುಮಾರು 2 ಕೋಟಿ ಭಕ್ತರು ಇಂದು ಒಂದೇ ದಿನ ಮಹಾಕುಂಭದ ಕೊನೆಯ ಶಾಹಿ ಸ್ನಾನಕ್ಕೆ ಆಗಮಿಸಲಿದ್ದಾರೆ.
ಮಹಾಕುಂಭ ಮೇಳವು ಆರು ವಿಶೇಷ ಸ್ನಾನದ ದಿನಾಂಕಗಳಿಗೆ ಸಾಕ್ಷಿಯಾಯಿತು. ಜನವರಿ 13ರ ಪೌಷ್ ಪೂರ್ಣಿಮಾ, ಜನವರಿ 14 ಮಕರ ಸಂಕ್ರಾಂತಿ, ಜನವರಿ 29ರ ಮೌನಿ ಅಮಾವಾಸ್ಯೆ, ಫೆಬ್ರವರಿ 3ರ ಬಸಂತ್ ಪಂಚಮಿ, ಫೆಬ್ರವರಿ 12ರ ಮಾಘ ಪೂರ್ಣಿಮಾ ಹಾಗೂ ಫೆಬ್ರವರಿ 26ರ ಮಹಾಶಿವರಾತ್ರಿಯಂದು ವಿಶೇಷ ಪವಿತ್ರ ಸ್ನಾನದ ದಿನಗಳು ಎನ್ನಲಾಗಿದೆ.

ಮಂಗಳವಾರ ಸುಮಾರು 1.33 ಕೋಟಿ ಭಕ್ತರು ಮಹಾಕುಂಭ ಮೇಳದ ಪ್ರದೇಶದ ಸಂಗಮ ಮತ್ತು ಇತರ ಘಾಟ್‌ಗಳಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮಹಾ ಕುಂಭ ಮೇಳಕ್ಕೆ ಒಟ್ಟಾರೆ 65 ಕೋಟಿ ಮೀರಿ ಭಕ್ತರು ಬಂದಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಉತ್ತರ ಪ್ರದೇಶ ಸರ್ಕಾರವು ಭಕ್ತರಿಗೆ ವಿಶೇಷ ಸಲಹೆಯನ್ನು ನೀಡಿದೆ. ಭಕ್ತರು ತಮಗೆ ಹತ್ತಿರವಿರುವ ಘಾಟ್‌ಗಳಲ್ಲಿ ಸ್ನಾನ ಮಾಡುವಂತೆ ಸಲಹೆ ನೀಡಿದೆ. ಉತ್ತರ ಝೂನ್ಸಿ ಮಾರ್ಗವಾಗಿ ಬರುವವರು ಹರಿಶ್ಚಂದ್ರ ಘಾಟ್ ಮತ್ತು ಹಳೆ ಜಿಟಿ ಘಾಟ್‌ಗೆ ಹೋಗಬೇಕು. ದಕ್ಷಿಣ ಝೂನ್ಸಿಯಿಂದ ಬರುವವರು ಆರೈಲ್ ಘಾಟ್ ಬಳಸಬೇಕು. ಪಾಂಡೆ ಪ್ರದೇಶದಿಂದ ಮೇಳಕ್ಕೆ ಪ್ರವೇಶಿಸುವ ಭಕ್ತರು ಭಾರದ್ವಾಜ್ ಘಾಟ್, ನಾಗವಾಸುಕಿ ಘಾಟ್, ಮೋರಿ ಘಾಟ್, ಕಾಳಿ ಘಾಟ್, ರಾಮ್ ಘಾಟ್ ಮತ್ತು ಹನುಮಾನ್ ಘಾಟ್‌ನಲ್ಲಿ ಪವಿತ್ರ ಸ್ನಾನ ಮಾಡಬಹುದು ಎಂದು ಸಲಹೆ ನೀಡಿದೆ.
ಮಹಾಶಿವರಾತ್ರಿಗೆ ಶುಭಕೋರಿದ ಸಿಎಂ ಯೋಗಿ
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಭಕ್ತರಿಗೆ ಮಹಾಶಿವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಇಂದು ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಮಹಾಕುಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಹಾಕುಂಭ ಮೇಳದಲ್ಲಿ ಭಗವಾನ್ ಭೋಲೆನಾಥನ ಆರಾಧನೆಗೆ ಮೀಸಲಾದ ಮಹಾಶಿವರಾತ್ರಿಯ ಪವಿತ್ರ ಸ್ನಾನದ ಹಬ್ಬದಂದು ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಲು ಆಗಮಿಸಿದ ಎಲ್ಲ ಪೂಜ್ಯ ಸಾಧುಗಳು, ಸಂತರು, ಕಲ್ಪವಾಸಿಗಳು ಮತ್ತು ಭಕ್ತರಿಗೆ ಹೃತ್ಪೂರ್ವಕ ಶುಭಾಶಯಗಳು ಎಂದಿದ್ದಾರೆ.












Click it and Unblock the Notifications