ವ್ಯಾಪಾರಕ್ಕಿಂತ ಕನ್ನಡ ಮೊದಲು ಎಂದ ಮಹಿಳೆ ಭಾಷಾಭಿಮಾನಕ್ಕೆ ಕನ್ನಡಿಗರ ಸೆಲ್ಯೂಟ್
ಇತ್ತೀಚಿಗೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೇ ಕನ್ನಡ ಮಾತನಾಡುವುದು ಕಡಿಮೆಯಾಗಿದೆ. ಮನೆಗಳಲ್ಲಿ ಮಕ್ಕಳು ಇಂಗ್ಲಿಷ್ ಕಲಿಯುವುದಿಲ್ಲ ಎನ್ನುವ ಟೆನ್ಷನ್‌ಗೆ, ಆಫೀಸ್‌ನಲ್ಲಿ ಕನ್ನಡದಲ್ಲಿ ಮಾತನಾಡಿದರೆ ಪರಭಾಷಿಕ ಸಹೋದ್ಯೋಗಿಗಳು ಏನು ಅಂದುಕೊಳ್ಳುತ್ತಾರೋ ಎನ್ನುವ ಸಂಕುಚಿತ ಮನೋಭಾವದಲ್ಲಿ, ಇನ್ನೂ ಕೆಲವರು ಪರಭಾಷಿಕ ಗೆಳೆಯರನ್ನು ಖುಷಿಪಡಿಸಲು ಅವರ ಭಾಷೆಯನ್ನೇ ಕಲಿತು ಮಾತನಾಡುವ ಭರದಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಾರೆ. ಒಟ್ಟಾರೆಯಾಗಿ ಕನ್ನಡಿಗರೇ ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಅನೇಕ ಸಂದರ್ಭಗಳನ್ನು ನೀವು ನೋಡಬಹುದು.
ಅದರಲ್ಲೂ ಬೆಂಗಳೂರಿನಂತಹ ಪಟ್ಟಣದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆಯೇ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ. ಒಂದಿಷ್ಟು ಜನ ಕನ್ನಡ ಉಳಿವಿಗೆ ಶ್ರಮಿಸಿದರೆ ಅವರ ದುಪ್ಪಟ್ಟು ಜನ ಕನ್ನಡವನ್ನು ನಿರ್ಲಕ್ಷಿಸುವವರೇ ಇದ್ದಾರೆ. ಅದೇನೆ ಇರಲಿ, ಇಂದಿಗೂ ಕನ್ನಡವನ್ನು ಕೊಂಡಾಡುವುದು, ಇಂದಿಗೂ ಕನ್ನಡ ಉಳಿಯುವಲ್ಲಿ ಪ್ರಮುಖರಾಗಿರುವುದು ಗ್ರಾಮೀಣ ಭಾಗದ ಜನರು ಹಾಗೂ ನಮ್ಮ ಹಿರಿಯರು.

ಗ್ರಾಮೀಣ ಭಾಗದ ಜನರು ಎಂದಿಗೂ ತಮ್ಮ ಪ್ರತಿಷ್ಠೆಗಾಗಿ ಇತರ ಭಾಷೆಗಳನ್ನು ಮಾತನಾಡುವುದಿಲ್ಲ. ಇನ್ನು ನಮ್ಮ ಹಿರಿಯರು ಕೂಡ ನಮ್ಮ ಮಾತೃಭಾಷೆಯನ್ನು ಮರೆಯುವುದಿಲ್ಲ. ಯಾರು ಎಷ್ಟೇ ಬೇರೆ ಭಾಷೆಯಲ್ಲಿ ಮಾತನಾಡಿದರೂ ಕೂಡ ಅವರ ಉತ್ತರ ಕನ್ನಡದಲ್ಲಿಯೇ ಇರುತ್ತದೆ. ಹೀಗಾಗಿ ಇಂದಿಗೂ ಕನ್ನಡದ ಬಗ್ಗೆ ನಿಜವಾದ ಪ್ರೀತಿ ಹೊಂದಿರುವವರು ಇವರೇ. ಇದಕ್ಕೆ ಉದಾಹರಣೆ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.

ಕನ್ನಡ ಮನಸುಗಳು ಕರ್ನಾಟಕ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಪುಟ್ಟ ಅಂಗಡಿಯೊಂದನ್ನು ನಡೆಸುವುದನ್ನು ನೀವು ಕಾಣಬಹುದು. ಈ ಸಣ್ಣ ಅಂಗಡಿಯಲ್ಲಿ ಮಹಿಳೆ ನಿಗದಿತ ವಸ್ತುಗಳನ್ನಷ್ಟೇ ಇಟ್ಟುಕೊಂಡಿದ್ದಾರೆ. ಅವರ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಬೇರೆ ಭಾಷೆಯಲ್ಲಿ ಏನೋ ವಸ್ತುವನ್ನು ಕೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ, ʼಏಯ್ ಕನ್ನಡದಲ್ಲಿ ಕೇಳು, ಕನ್ನಡದಲ್ಲಿ ಮಾತನಾಡುವ ಹಾಗಿದ್ದರೆ ಅಂಗಡಿಗೆ ಬಾ, ಇಲ್ಲ ಬರಬೇಡ' ಎಂದು ನೇರವಾಗಿ ಹೇಳಿದ್ದಾರೆ. ಅಲ್ಲದೇ 'ನಾಳೆಯಿಂದ ಕನ್ನಡದಲ್ಲಿ ಮಾತನಾಡಿದರೆ ನನ್ನ ಅಂಗಡಿಯಲ್ಲಿ ವಸ್ತುಗಳು ನಿನಗೆ ಸಿಗುತ್ತದೆ. ಇಲ್ಲ ಅಂದರೆ ಬರಬೇಡ' ಎಂದು ಹೇಳುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕನ್ನಡ ಉಳಿದಿರುವುದು ಇಂತವರಿಂದಲೇ ಹೊರತು ಯಾವುದೇ ಸಂಘಟನೆ, ಪ್ರಾಧಿಕಾರದಿಂದ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಅಲ್ಲದೇ ಮಹಿಳೆಯ ಕನ್ನಡ ಭಾಷೆ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಇತರ ಭಾಷಿಗರು ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ದರ್ಪ ತೋರುವ ಅನೇಕ ಘಟನೆಗಳು ನಡೆಯುತ್ತಿರುವುದು ಕೆಲ ಕರ್ನಾಟಕದವರು ಇತರ ಭಾಷಿಗರಿಗೆ ನೀಡಿದ ಅತಿಯಾದ ಸಲುಗೆಯ ಪ್ರತಿಫಲ. ಈ ಮಹಿಳೆಗೆ ಇರುವಷ್ಟು ಕನ್ನಡ ಪ್ರೇಮ ರಾಜ್ಯದ ಪ್ರತಿಯೊಬ್ಬರಲ್ಲೂ ಇದ್ದಿದ್ದರೆ ಕರ್ನಾಟಕದಲ್ಲಿ ಪರಭಾಷಿಗರ ದಬ್ಬಾಳಿಕೆ ನಡೆಯುತ್ತಿರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.












Click it and Unblock the Notifications