Karnataka Assembly Election 2023: ದಾವಣಗೆರೆ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ರಾಜ್ಯದಲ್ಲಿ ನಿಗದಿತ ಸಮಯಕ್ಕಿಂತ ಐದು ತಿಂಗಳ ಮೊದಲೇ ಚುನಾವಣಾ ಕಾವು ಭರಪೂರ ಏರಲಾರಂಭಿಸಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಮೂರು ಪಕ್ಷಗಳು ಅದರಲ್ಲಿ ಪ್ರಮುಖವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪೂರ್ವತಯಾರಿಯನ್ನು ಆರಂಭಿಸಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಗೆದ್ದವರಿಗೆಯೇ ಮತ್ತೆ ಪಕ್ಷಗಳು ಮತ್ತೆ ಟಿಕೆಟ್ ಅನ್ನು ನೀಡುತ್ತದೋ ಅಥವಾ ಹೊಸ ಮುಖಗಳಿಗೆ ಮಣೆ ಹಾಕುತ್ತದೋ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಂಟಿಯಾಗಿ ಪ್ರಚಾರ ನಡೆಸಲಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯಿಂದ ಈ ಯಾತ್ರೆ ಆರಂಭವಾಗಲಿದ್ದು, ಇದೇ ಬರುವ ಜನವರಿ ಹನ್ನೊಂದರಿಂದ ಆರಂಭವಾಗಲಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ - ಬಿಜೆಪಿ ಟಿಕೆಟ್ ಬಯಸುವವರು ಸಮಬಲವಾಗಿಯೇ ಕಂಡತೆ ಇದೆ. ಹರಿಹರದಲ್ಲಿ ಮಾತ್ರ ಕಾಂಗ್ರೆಸ್, ಬಿಜೆಪಿಗೆ ಜೆಡಿಎಸ್ ಪೈಪೋಟಿ ನೀಡಲು ಸಜ್ಜಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಹರಿಹರ ಹೊರತುಪಡಿಸಿದರೆ ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫೈಟ್ ನಡೆಯುವುದು. ಹಾಗೆಯೇ ಹರಿಹರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಜಿಲ್ಲೆಯಲ್ಲಿನ ಕ್ಷೇತ್ರಗಳಲ್ಲಿನ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ದಾವಣಗೆರೆ ಉತ್ತರದಲ್ಲಿ ಟಿಕೆಟ್‌ಗಾಗಿ ಪೈಪೋಟಿ
ದಾವಣಗೆರೆ ಉತ್ತರ ಕ್ಷೇತ್ರ ಹಲವು ಕಾರಣಗಳಿಂದ ಗಮನ ಸೆಳೆದಿದೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಚುನಾವಣೆಗೆ ಸ್ಪರ್ಧೆ ಬಯಸಿ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ಆದರೆ ಬೇರೆ ಯಾರೂ ಈ ಕ್ಷೇತ್ರಕ್ಕೆ "ಕೈ" ಪಡೆಯಿಂದ ಅರ್ಜಿ ಸಲ್ಲಿಸಿಲ್ಲ. 2018ರಲ್ಲಿ ಸಚಿವರಾಗಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಬಿಜೆಪಿಯ ಹಿರಿಯ ಮುಖಂಡ ಎಸ್. ಎ. ರವೀಂದ್ರನಾಥ್ ಸೋಲಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಅವರು 57 ಸಾವಿರ ಮತಗಳ ಅಂತರದಲ್ಲಿ ರವೀಂದ್ರನಾಥ್ ಮಣ್ಣುಮುಕ್ಕಿಸಿದ್ದರು. ಕಳೆದ ತಿಂಗಳಷ್ಟೇ ಎಸ್. ಎ. ರವೀಂದ್ರನಾಥ್ ಅವರು ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಚುನಾವಣೆ ಇನ್ನು ಆರೇಳು ತಿಂಗಳು ಬಾಕಿ ಇರುವುದರಿಂದ ಅಷ್ಟೊತ್ತಿಗೆ ಪೂರ್ಣಪ್ರಮಾಣದಲ್ಲಿ ಗುಣಮುಖರಾದರೂ ಮೊದಲಿನಂತೆ ಓಡಾಡಲು ಆಗಲ್ಲ. ಈ ಕಾರಣಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.
ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ಎಸ್. ಜಗದೀಶ್, ಚಂದ್ರಶೇಖರ್ ಸೇರಿದಂತೆ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಸಂಸದ ಜಿ. ಎಂ. ಸಿದ್ದೇಶ್ವರ್‌ಗೂ ರಾಜ್ಯ ರಾಜಕಾರಣದತ್ತ ಒಲವಿದೆ. ಹಾಗಾಗಿ ಹೈಕಮಾಂಡ್ ಒಪ್ಪಿದರೆ ನಾನು ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಒಂದು ವೇಳೆ ಸಿದ್ದೇಶ್ವರ್‌ಗೆ ಟಿಕೆಟ್ ನೀಡದಿದ್ದರೆ ಅವರ ಕುಟುಂಬದವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಲ್ಲೇನಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಆಗಿರುತ್ತದೆ. ಇಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದೆ.

ದಾವಣಗೆರೆ ದಕ್ಷಿಣದಲ್ಲಿ ಟಿಕೆಟ್‌ಗಾಗಿ ಪೈಪೋಟಿ, ಯಾರಿಗೆ ಬಿಫಾರಂ
ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪರು ಇದುವರೆಗೂ ಒಮ್ಮೆಯೂ ಸೋತಿಲ್ಲ. ನಾಲ್ಕು ಬಾರಿ ಇಲ್ಲಿಂದಲೇ ಆರಿಸಿ ಬಂದಿದ್ದಾರೆ. ಕಾಂಗ್ರೆಸ್‌ನ ಕೆಲವರು ಅರ್ಜಿ ಹಾಕಿದ್ದರೂ ಬಿ ಫಾರಂ ಸಿಗುವುದು ಶಿವಶಂಕರಪ್ಪರಿಗೆ ಎಂಬಂತಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಶಾಮನೂರು ಶಿವಶಂಕರಪ್ಪರು ಮೊದಲಿನಂದಲೂ ಆತ್ಮೀಯ ಸ್ನೇಹಿತರು. ಉತ್ತಮ ಒಡನಾಟ, ಬಾಂಧವ್ಯ ಹೊಂದಿರುವ ಕಾರಣ ಇಲ್ಲಿ ಸ್ಪರ್ಧೆಗೆ ಹಸಿರು ನಿಶಾನೆ ಸಿಗಲಿದೆ. ಇನ್ನು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಇದೆ. ಹಾಗಾಗಿ ಕಾಂಗ್ರೆಸ್‌ನ ಕೆಲವರು ಅರ್ಜಿ ಹಾಕಿದ್ದಾರೆ.
ಇನ್ನು ಬಿಜೆಪಿಯಿಂದ ಸ್ಪರ್ಧಿಸಿ ನಾಲ್ಕು ಬಾರಿ ಸೋತಿರುವ ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಮೇಯರ್ ಅಜಯ್ ಕುಮಾರ್, ಸತೀಶ್, ದೇವರಮನೆ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಎಚ್. ಎಸ್. ನಾಗರಾಜ್ ಸೇರಿದಂತೆ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನ ಅಮಾನುಲ್ಲಾ ಖಾನ್ ಸ್ಪರ್ಧೆಗಿಳಿಯಲಿದ್ದು, ಎಷ್ಟು ಮತ ಪಡೆಯುತ್ತಾರೆ ಎಂಬುದಷ್ಟೇ ಇಲ್ಲಿ ಚರ್ಚೆಯಾಗಿದೆ. ಇಲ್ಲೂ ಸಹ ಕಾಂಗ್ರೆಸ್- ಬಿಜೆಪಿ ಹುರಿಯಾಳುಗಳ ನಡುವೆಯೇ ಫೈಟ್ ನಡೆಯಲಿದೆ.

ಹರಿಹರದಲ್ಲಿ ಮೂರೂ ಪಕ್ಷದಲ್ಲಿ ಟಿಕೆಟ್‌ಗಾಗಿ ಪೈಪೋಟಿ
ಹರಿಹರ ವಿಧಾನಸಭಾ ಕ್ಷೇತ್ರ ಮಾತ್ರ ಯಾವಾಗಲೂ ತ್ರಿಕೋನ ಸ್ಪರ್ಧೆಗೆ ಹೆಸರುವಾಸಿಯಾಗಿದೆ. ಕಾಂಗ್ರೆಸ್‌ನ ಹಾಲಿ ಶಾಸಕ ರಾಮಪ್ಪ ಅವರು ಟಿಕೆಟ್‌ಗೆ ಅರ್ಜಿ ಹಾಕಿದ್ದು, ಈ ಬಾರಿಯೂ ಬಿ ಫಾರಂ ಸಿಗುವ ವಿಶ್ವಾಸದಲ್ಲಿದ್ದಾರೆ. ನಂದಿಗಾವಿ ಶ್ರೀನಿವಾಸ್, ಎಚ್. ಮಹೇಶಪ್ಪ, ನಿಖಿಲ್ ಕೊಂಡಜ್ಜಿ, ಗೋವಿಂದ ರೆಡ್ಡಿ, ಕೆ. ಎಸ್. ದೇವೇಂದ್ರಪ್ಪ ಬಾಬುಲಾಲ್, ಕೃಷ್ಣ ಸಾ ಭೂತೆ ಸೇರಿದಂತೆ ಹಲವರು ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ.
ಇನ್ನು ಬಿಜೆಪಿಯಿಂದ ಮಾಜಿ ಶಾಸಕ ಬಿ. ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಹಾಗೆಯೇ ಜೆಡಿಎಸ್‌ನಿಂದ ಎಚ್. ಎಸ್. ಶಿವಶಂಕರ್ ಸ್ಪರ್ಧೆಗಿಳಿಯಲಿದ್ದು, ಗೆಲುವಿಗೆ ತೀವ್ರ ಪೈಪೋಟಿ ನಡೆಸಲಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಮೂರು ಪಕ್ಷಗಳ ಹುರಿಯಾಳುಗಳ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ.

ಹೊನ್ನಾಳಿ- ನ್ಯಾಮತಿಯಲ್ಲಿ ಟಿಕೆಟ್‌ಗೆ ಪೈಪೋಟಿ
ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇದಕ್ಕೆ ಕಾರಣ ಶಾಸಕ ಎಂ. ಪಿ. ರೇಣುಕಾಚಾರ್ಯ. ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುವ ರೇಣುಕಾಚಾರ್ಯರಿಗೆ ಪ್ರತಿರೋಧ ಒಡ್ಡುವ ಯಾವ ನಾಯಕರೂ ಬಿಜೆಪಿಯಲ್ಲಿಲ್ಲ. ಹಾಗಾಗಿ, ಅವರೇ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಇನ್ನು ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಡಿ. ಬಿ. ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಡಿ. ಜಿ. ವಿಶ್ವನಾಥ, ಸಿದ್ದಪ್ಪ, ಉಮಾಪತಿ ಅವರು ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯೂ ಸಹ ಬಿಜೆಪಿ - ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಡಲಿದೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುವುದು ಕ್ಷೇತ್ರದ ಚಿತ್ರಣ.

ಚನ್ನಗಿರಿ ಕ್ಷೇತ್ರದಲ್ಲಿ ಟಿಕೆಟ್‌ಗೆ ಪೈಪೋಟಿ
ಅಡಿಕೆ ನಾಡು ಚನ್ನಗಿರಿ ವರ್ಣರಂಜಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಮುಖ್ಯಮಂತ್ರಿ ಆಗಿದ್ದ ಜೆ. ಹೆಚ್. ಪಟೇಲ್‌ಗೆ ಸೋಲುಣಿಸಿದ ವಡ್ನಾಳ್ ರಾಜಣ್ಣ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಈ ಬಾರಿ ಅವರು ಅರ್ಜಿ ಸಲ್ಲಿಕೆ ಮಾಡಿಲ್ಲ. ಹಾಗಾಗಿ, ವಿ. ಎಂ. ಅಶೋಕ್, ಬಸವರಾಜ್ ಶಿವಗಂಗಾ, ವಿ. ಎಂ. ಅಶೋಕ್, ಎಸ್. ಜಗದೀಶ್, ತೇಜಸ್ವಿ ಪಟೇಲ್, ಹೊದಿಗೆರೆ ರಮೇಶ್, ಹೆಚ್. ಎನ್. ನಿರಂಜನ್, ಪುನೀತ್ ಕುಮಾರ್, ಲಿಂಗರಾಜ್ ಕಾಂಗ್ರೆಸ್ ಟಿಕೆಟಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಹೆಸರು ಕೇಳಿ ಬರುತ್ತಿದೆ. ಆದರೂ ಬಿಜೆಪಿ ಕೇಂದ್ರ ಕಾರ್ಯಕಾರಣಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ಇಲ್ಲ ಎಂಬ ನಿಮಯ ಜಾರಿಯಾದರೆ ಟಿಕೆಟ್ ಸಿಗಲ್ಲ. ಆಗ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿಯಿಂದ ಕಣಕ್ಕಿಳಿಯುವುದು ಪಕ್ಕಾ ಆದಂತಾಗಿದೆ. ಕುಟುಂಬಕ್ಕೊಂದೇ ಟಿಕೆಟ್ ಅಂದರೂ ಸಿಗುತ್ತದೆ. ಆದರೆ ಕುಟುಂಬ ರಾಜಕಾರಣ ಬೇಡ ಎನ್ನುವುದಾದರೆ ಬೇರೆ ಯಾರಿಗೆ ಟಿಕೆಟ್ ಕೊಡಲಾಗುತ್ತೆ ಎಂಬ ಕುತೂಹಲ ಕೆರಳಿಸಿದೆ.

ಜಗಳೂರು ಕ್ಷೇತ್ರದಲ್ಲಿ ಟಿಕೆಟ್‌ಗೆ ಪೈಪೋಟಿ
ಜಗಳೂರು ವಿಧಾನಸಭಾ ಕ್ಷೇತ್ರ ಈಗ ಬಿಜೆಪಿಯ ಭದ್ರಕೋಟೆಯಾಗಿದೆ. ಎಸ್. ವಿ. ರಾಮಚಂದ್ರಪ್ಪನವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ, ಬಿ. ಎಸ್. ಯಡಿಯೂರಪ್ಪ ಅವರು ರಾಮಚಂದ್ರ ಅವರೇ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಹಾಗಾಗಿ, ಎಸ್.ವಿ.ಆರ್‌ಗೆ ಟಿಕೆಟ್ ಪಕ್ಕಾ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇನ್ನು ಕಾಂಗ್ರೆಸ್‌ನಿಂದ ಎಚ್. ಪಿ. ರಾಜೇಶ್, ಬಿ. ದೇವೇಂದ್ರಪ್ಪ, ಕೆ. ಪಿ. ಪಾಲಯ್ಯ, ಎಂ. ಹನುಮಂತಪ್ಪ, ಜೆ. ಆರ್. ರವಿಚಂದ್ರ ಟಿಕೆಟ್ ಅರ್ಜಿ ಬಯಸಿದ್ದಾರೆ. ಆದರೆ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ಕೆರಳಿಸಿದೆ. ಇನ್ನು ಇಲ್ಲಿಯೂ ಕೈ -ಕಮಲ ನಡುವೆ ಗೆಲುವಿಗೆ ಕಾಳಗ ನಡೆಯುತ್ತಲೇ ಇದೆ.

ಮಾಯಕೊಂಡ ಕ್ಷೇತ್ರದಲ್ಲಿ ಟಿಕೆಟ್‌ಗೆ ಪೈಪೋಟಿ
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಸ್ಪರ್ಧಾಂಕಾಕ್ಷಿಗಳಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ತಲಾ 15ಕ್ಕಿಂತ ಹೆಚ್ಚು ಮಂದಿ ಟಿಕೆಟ್‌ಗೆ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ಶಾಸಕ ಪ್ರೊ. ಲಿಂಗಣ್ಣ ನನಗೆ ಟಿಕೆಟ್ ಸಿಗುತ್ತದೆ. ನಾನು ಮತ್ತೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ಯುವ ಮುಖಂಡ ಶ್ಯಾಮ್, ಬಸವರಾಜ್ ನಾಯ್ಕ್, ಆಲೂರು ನಿಂಗರಾಜ್ ಸೇರಿದಂತೆ ಹಲವರು ಟಿಕೆಟ್‌ಗೆ ಪ್ರಯತ್ನ ಮುಂದುವರಿಸಿದ್ದಾರೆ. ಎಲ್ಲಾ ಕಡೆಗಳಲ್ಲಿಯೂ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ಹೆಚ್ಚು ಮಂದಿ ಸ್ಪರ್ಧೆಗಿಳಿಯಲು ಅಣಿಯಾಗಿದ್ದಾರೆ. ಬಸವಂತಪ್ಪ, ಎಚ್. ದುಗ್ಗಪ್ಪ, ವೀರೇಶ್ ನಾಯ್ಕ್ ಬಿ. ಎನ್., ಎಚ್. ಆನಂದಪ್ಪ, ಬಿ. ಹೆಚ್. ವೀರಭದ್ರಪ್ಪ, ಸವಿತಾ ಬಾಯಿ ಮಲ್ಲೇಶ್ ನಾಯ್ಕ್, ಕೆ. ಶಿವಮೂರ್ತಿ, ಡಿ. ಬಸವರಾಜ್, ರಾಘವೇಂದ್ರ ನಾಯ್ಕ್ ಸೇರಿದಂತೆ ಹಲವರು ಅರ್ಜಿ ಹಾಕಿದ್ದಾರೆ. ಇಲ್ಲಿಯೂ ಸಹ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ನಡೆಯಲಿದೆ.












Click it and Unblock the Notifications