ಹಿಂಗಾರು ಮಳೆಗೆ ಹಿಗ್ಗಿ ಹರಿವ 'ಕಲ್ಯಾಳ’ ಜಲಧಾರೆ
ಇಷ್ಟರಲ್ಲೇ ಮಳೆ ದೂರವಾಗಿ ಬಿರುಬಿಸಿಲಿನೊಂದಿಗೆ ತಣ್ಣಗಿನ ಚಳಿ ಆರಂಭವಾಗಬೇಕಾಗಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ. ಇನ್ನೂ ಮಳೆ ಸುರಿಯುತ್ತಲೇ ಇದೆ. ಇದರಿಂದ ಪಕೃತಿ ಹಸಿರಿನಿಂದ ಕಂಗೊಳಿಸುತ್ತಿದ್ದರೆ, ಅದರ ನಡುವೆ ಮಿಂಚು ಸರಿದಂತೆ ಭಾಸವಾಗುವ ಜಲಧಾರೆಗಳು ಮೈತುಂಬಿಕೊಂಡು ಭೋರ್ಗರೆಯುತ್ತಿವೆ.
ನಿಸರ್ಗ ಪ್ರೇಮಿಗಳಿಗೆ, ಜಲಧಾರೆಯ ಚೆಲುವನ್ನು ಆರಾಧಿಸುವವರಿಗೆ ಇದು ಸೂಕ್ತಕಾಲ. ಆಗೊಮ್ಮೆ ಈಗೊಮ್ಮೆ ಬರುವ ಮಳೆಯಲ್ಲಿ ದಟ್ಟ ಕಾನನದ ನಡುವೆ ಇರುವ ಜಲಧಾರೆ ನೋಡುವುದೇ ಸೊಗಸು. ಕೊಡಗಿನಲ್ಲಿ ಅಂಥ ಹಲವಾರು ಜಲಧಾರೆಗಳಿವೆ. ಅವುಗಳೆಲ್ಲವೂ ಮಳೆಗಾಲ ಸರಿಯುತ್ತಿದ್ದಂತೆಯೇ ಚೆಲುವು ಕಳೆದುಕೊಂಡು ಹೆಬ್ಬಂಡೆಗಳ ನಡುವೆ ಸಣಕಲಾಗಿ ಬಿಡುತ್ತವೆ. ಆದರೆ ಮುಂಗಾರು ಮಳೆಗೆ ಚೆಲುವ ಸೂಸುವ ಜಲಧಾರೆಗಳು ಈ ಬಾರಿ ಹಿಂಗಾರು ಮಳೆಯಲ್ಲಿಯೂ ಭೋರ್ಗರೆಯುತ್ತಿವೆ.
ಕೊಡಗಿನಲ್ಲಿರುವ ಹಲವು ಜಲಪಾತಗಳ ನಡುವೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಕಲ್ಯಾಳ ಜಲಪಾತ ವಿಭಿನ್ನವಾಗಿದೆ. ಇದನ್ನು ತಲುಪಲು ಒಂದಷ್ಟು ಸಾಹಸ ಮಾಡುವುದು ಅನಿವಾರ್ಯ. ಆದರೆ ಸಾಹಸ ಮಾಡುತ್ತಾ ಜಲಧಾರೆಯತ್ತ ತೆರಳಿದವರಿಗೆ ಅದರ ಸೌಂದರ್ಯ ಮುದನೀಡುತ್ತದೆ.

ಇದರ ಸೌಂದರ್ಯವನ್ನು ಹತ್ತಿರದಿಂದ ಸವಿಯಲಾಗದಿದ್ದರೂ ಬಹಳಷ್ಟು ಜನ ದೂರದಿಂದಲೇ ಕಂಡಿರುತ್ತಾರೆ. ಮಡಿಕೇರಿಯಿಂದ ಸುಳ್ಯದ ಕಡೆ ಪ್ರಯಾಣಿಸುವವರಿಗೆ ಕೊಯನಾಡು ಬಳಿ ಸಾಗುತ್ತಿದ್ದಂತೆಯೇ ದೂರದ ಗುಡ್ಡದಲ್ಲಿ ಇದು ಗೋಚರಿಸಿರುತ್ತದೆ. ಕಲ್ಯಾಳ ಜಲಪಾತವನ್ನು ನೋಡಲು ಹೋಗುವವರು ಮಡಿಕೇರಿಯಿಂದ ಮಂಗಳೂರು ರಸ್ತೆಯಲ್ಲಿ ಸುಮಾರು 23 ಕಿ.ಮೀ. ದೂರ ಸಾಗಿದಾಗ ಸಿಗುವ ಕೊಯನಾಡು ಎಂಬಲ್ಲಿಂದ ಎಡಬದಿಯಲ್ಲಿರುವ ರಸ್ತೆಯಲ್ಲಿ 5 ಕಿ.ಮೀ. ಸಾಗಬೇಕು.
ವಾಹನದಲ್ಲಿ ತೆರಳುವುದಾದರೆ ಅಷ್ಟೊಂದು ಕಷ್ಟವಾಗಲಾರದು. ಆದರೆ ನಡೆದು ಹೋಗುವುದಾದರೆ ಸುಮಾರು ಒಂದು ಗಂಟೆ ಬೇಕಾಗುತ್ತದೆ. ಸುತ್ತಮುತ್ತಲಿನ ಪ್ರಕೃತಿ ಉಲ್ಲಾಸ ತುಂಬುತ್ತಿರುತ್ತದೆ. ಹಾದಿ ಕ್ರಮಿಸುತ್ತಾ ಸಾಗಿದಾಗ ಮೂರು ರಸ್ತೆಗಳು ನಮಗೆ ಸಿಗುತ್ತವೆ. ಅವುಗಳಲ್ಲಿ ಎರಡು ರಸ್ತೆಗಳನ್ನು ಬಿಟ್ಟು ಕಚ್ಚಾ ರಸ್ತೆಯಲ್ಲಿ ಸಾಗಿದರೆ ಜಲಪಾತದತ್ತ ಕೊಂಡೊಯ್ಯುತ್ತದೆ.
ದಟ್ಟ ಅರಣ್ಯದ ನಡುವೆ ಈ ಜಲಧಾರೆ ನಿರ್ಮಿತವಾದುದರಿಂದ ಜಲಪಾತದೆಡೆಗಿನ ಜಾಡಾಗಲೀ, ಸೂಚನೆಗಳಾಗಲೀ ಸಿಗಲಾರವು. ಹರಿದು ಬರುವ ನದಿಯಲ್ಲಿಯೇ ಜಲಪಾತದ ಭೋರ್ಗರೆತವನ್ನು ಆಲಿಸುತ್ತಾ ಸಾಗಬೇಕು. ಇದು ಅಷ್ಟು ಸುಲಭವಲ್ಲ. ಮರಗಳ ಕೊಂಬೆ, ರೆಂಬೆ, ಕಲ್ಲು ಮುಳ್ಳು ಎಲ್ಲವೂ ಅಡ್ಡಿಪಡಿಸುತ್ತವೆ. ಅವೆಲ್ಲವನ್ನು ಸಾವಧಾನದಿಂದ ತಪ್ಪಿಸಿಕೊಂಡು ನಡೆದರೆ ಜಲಪಾತ ಎದುರಾಗುತ್ತದೆ. ಹೆಬ್ಬಂಡೆಯ ಮೇಲೆ ಸುಮಾರು ನೂರೈವತ್ತು ಅಡಿಯಷ್ಟು ಎತ್ತರದಿಂದ ಆವೇಶಭರಿತವಾಗಿ ಧುಮುಕಿ ಅಲ್ಲಿಂದ ಪದರ ಪದರವಾಗಿ ಹರಿದು ತಳಸೇರಿ ಮುನ್ನಡೆಯುವ ದೃಶ್ಯ ಖುಷಿ ಕೊಡುತ್ತದೆ.

ಬೆಟ್ಟದ ಮೇಲಿದ್ದು ದಟ್ಟ ಕಾಡಿನಿಂದ ಕೂಡಿರುವ ಈ ಪ್ರದೇಶಕ್ಕೆ ಕಲ್ಯಾಳ ಎಂಬ ಹೆಸರು ಹೇಗೆ ಬಂತು ಎಂದು ನೋಡ ಹೊರಟರೆ ಒಂದಷ್ಟು ಮಾಹಿತಿಗಳು ಲಭಿಸುತ್ತವೆ. ಬಹಳಷ್ಟು ವರ್ಷಗಳ ಹಿಂದೆ ಸಂಪಾಜೆ ಸನಿಹದಲ್ಲಿ ಕಲ್ಯಾಳ ಮಜಲು ಎಂಬಲ್ಲಿ ನೆಲೆಸಿದ ಮನೆತನದವರು ಅಲ್ಲಿ ಕೃಷಿಕಾರ್ಯ ಮಾಡಲಾಗದ ಕಾರಣ ಕೃಷಿಗೆ ಸೂಕ್ತ ಸ್ಥಳವನ್ನು ಹುಡುಕುತ್ತಾ ಪಶ್ಚಿಮ ಘಟ್ಟದ ಕಲ್ಯಾಳ ಪ್ರದೇಶಕ್ಕೆ ಬಂದು ಅಲ್ಲಿಯೇ ನೆಲೆಯೂರಿದರಂತೆ. ಕಲ್ಯಾಳ ಮನೆತನದವರು ನೆಲೆಸಿದ ಜಾಗ ಕಲ್ಯಾಳ ಗ್ರಾಮವಾಯಿತೆಂದು ಹೇಳುತ್ತಾರೆ. ಕಲ್ಯಾಳದಲ್ಲಿ ನಿರ್ಮಾಣವಾಗಿರುವ ಜಲಪಾತವನ್ನು ಕೂಡ ಜಲ ಕಲ್ಯಾಳ ಜಲಪಾತ ಎಂದೇ ಕರೆಯುತ್ತಾರೆ.
ಬೇಸಿಗೆಯಲ್ಲಿ ತೀರಾ ಸೊರಗಿ ಮಳೆಗಾಲದಲ್ಲಿ ಚೇತರಿಸಿಕೊಳ್ಳುವ ಕಲ್ಯಾಳ ಜಲಪಾತ ಈ ಬಾರಿ ಹಿಂಗಾರು ಮಳೆಯ ಅಬ್ಬರಕ್ಕೆ ಇನ್ನೂ ಚೆಲುವನ್ನು ಒಡಲಲ್ಲಿ ತುಂಬಿಕೊಂಡಿರುವುದು ಚಾರಣಪ್ರಿಯರಿಗೆ ಹುರುಪು ತುಂಬುತ್ತದೆ. ಜಲಪಾತ ವೀಕ್ಷಣೆಗೆ ತೆರಳುವವರು ಸ್ಥಳೀಯರ ಸಹಾಯಪಡೆದುಕೊಂಡು ತೆರಳುವುದು ಉತ್ತಮ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications