ಹೇಸಿಗೆ ಹುಟ್ಟಿಸುವ ರಾಜಕೀಯಕ್ಕೆ ಸಾಕ್ಷಿಯಾದ ಸಿಎಂ ಬೊಮ್ಮಾಯಿ ಇದ್ದ ವೇದಿಕೆ!
ಏ ಬಾರೋ.. ಏ ಕಂಡಿದ್ದೀನಿ ಕೂತ್ಕೊಳೋ.. ಗಂಡಸ್ಥನ ಇದೆಯೇನೋ.. ಇದು ಪಡ್ಡೆ ಹುಡುಗರು ಮಾತನಾಡಿದ್ದಲ್ಲ, ನಮ್ಮನ್ನೆಲ್ಲಾ ಪ್ರತಿನಿಧಿಸುವ ಜನಪ್ರತಿನಿಧಿಗಳು. ಒಬ್ಬರು ಎಂಟು ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರು, ಇನ್ನೊಬ್ಬರು ಬೊಮ್ಮಾಯಿ ಸರಕಾರದ ಕ್ಯಾಬಿನೆಟ್ ದರ್ಜೆಯ ಸಚಿವರು.
ರಾಮನಗರದಲ್ಲಿ ಇಂದು (ಜ 3) ನಡೆದ ಸರಕಾರೀ ಕಾರ್ಯಕ್ರಮವೊಂದು ರಾಜಕೀಯಕ್ಕೆ ಕಪ್ಪುಚುಕ್ಕೆ ತರುವಂತಹ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಇಬ್ಬರು ಜನ ಪ್ರತಿನಿಧಿಗಳು ಕಿತ್ತಾಡಿದ್ದು ಅಭಿವೃದ್ದಿ ಕೆಲಸಕ್ಕಾಗಿ ಅಲ್ಲ, ಜನಪರ ಕೆಲಸಕ್ಕಂತೂ ಅಲ್ಲವೇ ಅಲ್ಲ. ಅವರಿಬ್ಬರ ಕಿತ್ತಾಟ ಪ್ರತಿಷ್ಠೆಗಾಗಿ, ಜಿದ್ದಿಗಾಗಿ.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಮತ್ತು ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಪುತ್ಠಳಿ ಅನಾವರಣ ಕಾರ್ಯಕ್ರಮವನ್ನು ರಾಮನಗರ ಜಿಲ್ಲಾಡಳಿತ ಆಯೋಜಿಸಿತ್ತು. ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು.

ಸಭೆಯಲ್ಲಿ ಮುಖ್ಯಮಂತ್ರಿಗಳು ಇದ್ದಾರೆ, ಮಹಿಳೆಯೊಬ್ಬರು (ಸ್ಥಳೀಯ ಶಾಸಕಿ ಅನಿತಾ ಕುಮಾರಸ್ವಾಮಿ) ಇದ್ದಾರೆ ಎನ್ನುವ ಕನಿಷ್ಠ ಜ್ಞಾನವಿಲ್ಲದ ಇಬ್ಬರು ನಾಯಕರು ಏಕವಚನದಲ್ಲಿ ಬೈಯ್ದಾಡಿಕೊಂಡಿದ್ದಾರೆ. ಸಿಎಂ ಮುಂದೆನೇ ವೇದಿಕೆಯಲ್ಲೇ ಸಂಸದರು ಧರಣಿ ಕೂರುತ್ತಾರೆ, ಮೈಕ್ ಅನ್ನು ಕಿತ್ತಾಕುತ್ತಾರೆ ಎಂದರೆ, ಜನತೆಗೆ ಇವರು ಏನು ಸಂದೇಶ ಕೊಟ್ಟಂತ್ತಾಗಿದೆ. ಇದು ಸಚಿವ ಮತ್ತು ವೃತ್ತಿಯಲ್ಲಿ ವೈದ್ಯರೂ ಆಗಿರುವ ಡಾ.ಅಶ್ವಥ್ ನಾರಾಯಣ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ನಡುವೆ ನಡೆದ ಗಲಾಟೆ.
"ಯಾರಯ್ಯಾ ಗಂಡು, ಕೆಲಸದಲ್ಲಿ ತೋರಿಸಲೇ, ಬರೀ ನಾಲ್ಕು ಜನವನ್ನು ಕಟ್ಟಿಕೊಂಡು ಬಂದು ಸಭೆಯಲ್ಲಿ ಗಲಾಟೆ ಮಾಡೋದಲ್ಲಾ, ಏನು ಅಭಿವೃದ್ದಿ ಕೆಲಸ ಮಾಡಿದ್ದೀರಾಂತ ತೊಡೆತಟ್ಟಿ ಹೇಳು ನೋಡೋಣ" ಎಂದು ಡಾ.ಅಶ್ವಥ್ ನಾರಾಯಣ್ ವೀರಾವೇಶದ ಭಾಷಣ ಮಾತನಾಡುತ್ತಿದ್ದಾಗ, ಅಲ್ಲಿಗೇ ಹೋದ ಡಿ.ಕೆ.ಸುರೇಶ್ ಸಚಿವರ ಜೊತೆಗೆ ಜಗಳಕ್ಕೆ ಇಳಿದಿದ್ದಾರೆ. ಅಷ್ಟೊತ್ತಿಗೆ ಸುರೇಶ್ ಅವರಿಗೆ ಸಾಥ್ ನೀಡಿದ ಮತ್ತೋರ್ವ ಜನಪ್ರತಿನಿಧಿ (MLC ಎಸ್.ರವಿ) , ಸಚಿವರು ಮಾತನಾಡುತ್ತಿದ್ದ ಮೈಕ್ ಅನ್ನೇ ಕಿತ್ತಾಕುತ್ತಾರೆ. ಇದೆಲ್ಲಾ, ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ನಡೆಯುತ್ತದೆ.
ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಗೌರವಪೂರ್ವಕವಾಗಿ ಆಹ್ವಾನಿಸಿಲ್ಲ ಎನ್ನುವ ಕೋಪ ಡಿ.ಕೆ.ಸುರೇಶ್ ಅವರಿಗೆ. ಇಷ್ಟಕ್ಕೇ ನಾಗರೀಕತೆಯನ್ನೇ ಮರೆತಂತೆ ಆಡಿದ್ದು, ಅದಕ್ಕೆ ಸಚಿವರ ಪ್ರತಿಕ್ರಿಯೆ, ರಾಜಕೀಯ ವ್ಯವಸ್ಥೆಗೇ ಮಸಿ ಬಳಿದಂತಾಯಿತು. ರಾಮನಗರಕ್ಕೆ ಒಳ್ಳೆಯ ಸುದ್ದಿಯನ್ನು ನೀಡಲು ಬಂದಿದ್ದೇನೆ, ಇದು ರಾಜಕೀಯ ಮಾಡುವ ವೇದಿಕೆಯಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ ಮೇಲೂ ಏನೂ ಪ್ರಯೋಜನವಾಗದೇ ಇದ್ದದ್ದು ಅತ್ಯಂತ ವಿಷಾದನೀಯ.

"ಅವರು ಜಿಲ್ಲಾ ಉಸ್ತುವಾರಿಯಲ್ಲ, ಅವರು ಉನ್ನತ ಶಿಕ್ಷಣ ಸಚಿವರು. ಅವರು ನಡೆದುಕೊಂಡ ರೀತಿ, ಹಾಕಿರುವ ಸವಾಲಿನಿಂದ ವೇದಿಕೆಯಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಯಿತು. ನಾನು ಸಿಎಂ ಇದ್ದ ವೇದಿಕೆಯಲ್ಲಿ ಹೀಗಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ"ಎಂದು ಡಿ.ಕೆ.ಸುರೇಶ್ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಇಂದಿನ ಘಟನೆ, ಅದೂ ಸಿಎಂ ಇದ್ದ ವೇದಿಕೆಯಲ್ಲಿ ಇಬ್ಬರು ಜನಪ್ರತಿನಿಧಿಗಳು ವರ್ತಿಸಿದ ರೀತಿ, ಹಲವರಿಗೆ ಮಜಾ ಕೊಟ್ಟರೆ, ಬಹಳಷ್ಟು ಜನರು ಶೇಮ್..ಶೇಮ್ ಎಂದು ಹೇಳುವಂತಾಗಿದೆ.
ಇಂತಹ ಘಟನೆ ನಡೆಯಬಾರದಿತ್ತು ಎನ್ನುವ ಯಾವ ವಿಷಾದವೂ ಇಲ್ಲದ ನಾಯಕರುಗಳು ತಮ್ಮತಮ್ಮ ಪಕ್ಷದ ಮುಖಂಡರನ್ನು ಸಮರ್ಥಿಸಿಕೊಳ್ಳುತ್ತಿರುವುದು ಇನ್ನೊಂದು ದುರಂತ. "ಇಬ್ಬರೂ ಜನಪ್ರತಿನಿಧಿಗಳು ರೌಡಿಗಳಂತೆ ವರ್ತಿಸಿದ್ದಾರೆ, ರಾಮನಗರವನ್ನು ಅಭಿವೃದ್ದಿ ಮಾಡಿದ್ದು ನಾನು, ಕಿತ್ತಾಡಿಕೊಳ್ಳುತ್ತಿರುವುದು ಅವರಿಬ್ಬರು" ಎಂದು ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಒಟ್ಟಾರೆಯಾಗಿ ರಾಜಕೀಯ ವ್ಯವಸ್ಥೆಯ ಬಗ್ಗೆ ಇಂತಹ ಘಟನೆಗಳಿಂದ ಯಾವರೀತಿಯ ಸಂದೇಶ ರವಾನಿಸಿದಂತಾಗುತ್ತದೆ ಎನ್ನುವ ಅರಿವಿಲ್ಲದೇ , ಶಾಲಾ ಮಕ್ಕಳಿಗಿಂತ ಕಡೆಯಾಗಿ ಇಬ್ಬರು ಜವಾಬ್ದಾರಿಯುತ ಜನಪ್ರತಿನಿಧಿಗಳು ವರ್ತಿಸಿದ್ದು ರಾಜ್ಯ ರಾಜಕೀಯಕ್ಕೆ ಮಾಡಿದ ಅವಮಾನ ಎಂದಷ್ಟೇ ಹೇಳಬಹುದು. ಇಡೀ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿಯವರ ತಾಳ್ಮೆ, ಅವರು ನಡೆದುಕೊಂಡ ರೀತಿ ಈ ಇಬ್ಬರು ಜನಪ್ರತಿನಿಧಿಗಳಿಗೆ ಪಾಠವಾಗಲಿ.












Click it and Unblock the Notifications