'ರಕ್ತಹೀನತೆ ಮುಕ್ತ ರಾಜ್ಯ' ಬಿಜೆಪಿ ಪ್ರಣಾಳಿಕೆಯ ಪ್ರಮುಖಾಂಶ!
ಚಂಡೀಗಢ, ಅಕ್ಟೋಬರ್ 13: ಭಾರತೀಯ ಜನತಾ ಪಕ್ಷ(ಬಿಜೆಪಿ) ಭಾನುವಾರದಂದು ಹರ್ಯಾಣ ರಾಜ್ಯಕ್ಕಾಗಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಇನ್ನಿತರ ಪ್ರಮುಖ ಮುಖಂಡರ ಸಮ್ಮುಖದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಲಾಯಿತು.
ಮುಂದಿನ ಐದು ವರ್ಷಗಳಲ್ಲಿ ರಕ್ತಹೀನತೆ(Anaemia) ಮುಕ್ತ ರಾಜ್ಯವನ್ನಾಗಿ ಹರ್ಯಾಣವನ್ನು ರೂಪಿಸುವುದು ಪ್ರಣಾಳಿಕೆಯಲ್ಲಿ ಆದ್ಯತೆಯಾಗಿದೆ. ತಳಮಟ್ಟದಿಂದ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬೇಕಾದ ಯೋಜನೆಗಳನ್ನು ರೂಪಿಸಲಾಗಿದೆ.

"ಹರ್ಯಾಣ ಇಂದು ಭ್ರಷ್ಟಾಚಾರ ರಹಿತ ರಾಜ್ಯವಾಗಿದೆ. ಅಭಿವೃದ್ಧಿ ಪಥದಲ್ಲಿ ಸಾಗಿದೆ. ಈಗ ಮುಟ್ಟಿರುವ ಮಟ್ಟವನ್ನು ಇನ್ನೊಂದು ಸ್ತರಕ್ಕೇರುವಂತೆ ಮಾಡುವ ಜವಾಬ್ದಾರಿ ಮನೋಹರ್ ಅವರ ಮೇಲಿದೆ" ಎಂದು ನಡ್ಡಾ ಹೇಳಿದರು.
ರೈತರು, ಯುವ ಜನಾಂಗ, ಮಹಿಳೆಯರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆ ರೂಪಿಸಲಾಗಿದೆ. ರಕ್ತ ಹೀನತೆ ಮುಕ್ತಗೊಳಿಸುವುದು, ಕ್ಷಯ, ಅಪೌಷ್ಟಿಕತೆ ಮುಂತಾದ ಸಮಸ್ಯೆಯನ್ನು ನಿವಾರಿಸುವುದಕ್ಕೆ ಆದ್ಯತೆ ನೀಡಲಾಗಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ, ನಿರುದ್ಯೋಗ ಸಮಸ್ಯೆ ನಿವಾರಣೆ, ಕುಟುಂಬ ಆಧಾರಿತ ಉದ್ಯೋಗ, ಮಹಿಳೆಯರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ33ರಷ್ಟು ಮೀಸಲಾತಿ ಕಲ್ಪಿಸುವುದು ಮುಂತಾದ ಅಂಶಗಳಿವೆ.
2014ರ ವಿಧಾನಸಭೆ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ 15 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಯಿತು. 2019ರಲ್ಲಿ ಹರ್ಯಾಣದಲ್ಲಿ ಅಕ್ಟೋಬರ್ 21ರಂದು ಮತದಾನ ಹಾಗೂ ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.












Click it and Unblock the Notifications