Republic-CNX Exit Polls: ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ
ಅಸ್ಸಾಂನಲ್ಲಿ 126 ಸ್ಥಾನಕ್ಕಾಗಿ ಮೂರು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮಣಿಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಿಪಬ್ಲಿಕ್ -ಸಿಎನ್‌ಎಕ್ಸ್ ಚುನಾವಣೋತ್ತರ ಸಮೀಕ್ಷೆ ಹೇಳಿದೆ.
ಬಿಜೆಪಿ ಸೋಲಿಸುವ ಉದ್ದೇಶದಿಂದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (ಎಐಯುಡಿಎಫ್), ಸಿಪಿಐ, ಸಿಪಿಐ (ಎಂ), ಸಿಪಿಐ(ಎಂಎಲ್) ಹಾಗೂ ಅಂಚಲಿಕ್ ಗಣ ಮೋರ್ಚಾ ಪಕ್ಷಗಳನ್ನು ಸೇರಿಸಿಕೊಂಡು ಕಾಂಗ್ರೆಸ್ ಮಹಾಮೈತ್ರಿಕೂಟ ರಚಿಸಿತ್ತು.
ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭೆ ಚುನಾವಣೆಗಳು ಏಪ್ರಿಲ್ 6ರಂದು ಮುಕ್ತಾಯಗೊಂಡರೆ, ಪಶ್ಚಿಮ ಬಂಗಾಳದಲ್ಲಿ 8ನೇ ಹಾಗೂ ಕೊನೆ ಹಂತದ ಮತದಾನ ಇಂದು(ಏಪ್ರಿಲ್ 29) ಸಂಪನ್ನವಾಗಿದೆ. ಪ್ರಮುಖ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಮೇ 2 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.

ರಿಪಬ್ಲಿಕ್ ಟಿವಿ ಹಾಗೂ ಸಿಎನ್ಎಕ್ಸ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಂತೆ ಅಸ್ಸಾಂನಲ್ಲಿ ಆಡಳಿತಾರೂಢ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಉತ್ತಮ ಶೇಕಡಾವಾರು ಮತಗಳಿಕೆ ಪಡೆದರೂ ನಂಬರ್ ಗೇಮ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಲಿದೆ ಎಂದಿದೆ.
ಅಸ್ಸಾಂ (126 ಸ್ಥಾನ, 64 ಮ್ಯಾಜಿಕ್ ನಂಬರ್) 2021 ಎಕ್ಸಿಟ್ ಪೋಲ್ ಫಲಿತಾಂಶ:
ಎನ್‌ಡಿಎ : 78-84
ಯುಪಿಎ: 40-50
ಇತರೆ: 1-3
ಶೇಕಡಾವಾರು ಮತ ಗಳಿಕೆ:
ಎನ್‌ಡಿಎ : 44.25%
ಯುಪಿಎ: 39.65%
ಇತರೆ: 16.10%
2016ರಲ್ಲಿ 126 ವಿಧಾನಸಭಾ ಸ್ಥಾನಗಳ ಪೈಕಿ 60 ಬಿಜೆಪಿ ಶಾಸಕರು ಗೆದ್ದು ಅಧಿಕಾರಕ್ಕೇರಿತ್ತು. ಬೋಡೋ ಪೀಪಲ್ಸ್ ಫ್ರಂಟ್ ಹಾಗೂ ಅಸ್ಸೊಂ ಗಣ ಪರಿಷತ್ ಕ್ರಮವಾಗಿ 14 ಹಾಗೂ 12 ಸ್ಥಾನ ಗೆದ್ದು ಬಿಜೆಪಿ ಬೆಂಬಲ ಸೂಚಿಸಿದ್ದವು. ಎನ್ಡಿಎ 74 ಹಾಗೂ ಶೇ 41.1 ಮತ ಗಳಿಕೆ ಹಾಗೂ ಯುಪಿಎ 26 ಹಾಗೂ ಶೇ 31 ಮತ ಗಳಿಕೆ ಪಡೆದಿದ್ದವು.
ಪಶ್ಚಿಮ ಬಂಗಾಳದಲ್ಲಿ 294, ತಮಿಳುನಾಡಿನಲ್ಲಿ 234, ಕೇರಳದಲ್ಲಿ 140, ಪುದುಚೇರಿಯಲ್ಲಿ 30 ಹಾಗೂ ಅಸ್ಸಾಂನಲ್ಲಿ 126 ಸ್ಥಾನಕ್ಕಾಗಿ ಚುನಾವಣೆ ನಡೆಸಲಾಗಿದೆ.












Click it and Unblock the Notifications