ರಜತ್ ಸಹವಾಸ ಬಿಡ್ತಾರಾ ವಿನಯ್ ಗೌಡ?: ಮಾಜಿ ಬಿಗ್ ಬಾಸ್ ಸ್ಪರ್ಧಿ ಹೇಳಿದ್ದೇನು?
ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್‌ಗೆ ಎದುರಾಗಿದ್ದ ರೀಲ್ಸ್ ಕಂಟಕ ಸದ್ಯಕ್ಕೆ ಅಂತ್ಯವಾಗಿದೆ. ಒಂದೇ ಒಂದು ವಿಡಿಯೋಗಾಗಿ ಮಚ್ಚು ಹಿಡಿದು ಸಂಕಷ್ಟಕ್ಕೆ ಸಿಲುಕಿದ್ದ ವಿನಯ್ ಗೌಡ ಮತ್ತು ರಜತ್ ಪರಪ್ಪನ ಅಗ್ರಹಾರ ಸೇರಿದ್ದರು. ಇದೀಗ ಇಬ್ಬರಿಗೂ ತಪ್ಪಿನ ಅರಿವಾದ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿದೆ.
ಸದ್ಯ ವಿನಯ್ ಹಾಗೂ ರಜತ್ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಈ ನಡುವೆ ರಜತ್ ಸಹವಾಸ ಮಾಡಿದ್ದಕ್ಕೆ ವಿನಯ್ ಗೌಡ ಜೈಲು ಸೇರುವಂತಾಯ್ತು ಎನ್ನುವ ಅನೇಕ ಕಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಒಂದು ಪ್ರಕರಣದಿಂದ ರಜತ್ ಜೊತೆಗಿನ ವಿನಯ್ ಗೌಡ ಸ್ನೇಹದ ಮಧ್ಯೆ ಬಿರುಕು ಮೂಡಿದೆಯಾ? ಎನ್ನುವ ಅನುಮಾನ ಅನೇಕರಲ್ಲಿ ಮೂಡಿದೆ. ಈ ಪ್ರಶ್ನೆಗೆ ನೇರವಾಗಿ ವಿನಯ್ ಗೌಡ ಉತ್ತರಿಸಿದ್ದಾರೆ.

ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ ಅವರು, 'ಸ್ನೇಹ ಎನ್ನುವುದು ಒಂದು ಬದ್ಧತೆ. ನಾವಿಬ್ಬರು ಫ್ಯಾಮಿಲಿ ಫ್ರೆಂಡ್ಸ್. ಅಕ್ಷತಾ ನನ್ನ ಹೆಂಡತಿ, ಅಕ್ಷಿತಾ ರಜತ್ ಹೆಂಡತಿ, ಅವರಿಬ್ಬರು ತುಂಬಾ ಆತ್ಮೀಯರು. ಹಾಗೇ ನಾವಿಬ್ಬರು ಕೂಡ ತುಂಬಾ ಕ್ಲೋಸ್. ಹಾಗಂತ ಅವನು ಮಾಡುವ ಕಾನೂನು ವಿರೋಧಿ ಕೆಲಸಕ್ಕೆ ಹಾಗೂ ಅವನು ಮಾಡುವ ಚೇಷ್ಟೆಗೆ ಜೊತೆಗೆ ನಿಲ್ಲುತ್ತೇನೆ ಎನ್ನುವುದು ತಪ್ಪು' ಎಂದರು.
'ಈ ತಪ್ಪು ಅವನಿಗೂ ಅರಿವಾಗಿದೆ. ಅವನು ಮುಂದೆ ಈ ರೀತಿ ನಡೆದುಕೊಳ್ಳಲ್ಲ ಅಂತಾ ಭಾವಿಸುತ್ತೇನೆ. ಆದರೆ ಆ ಗ್ಯಾರಂಟಿಯನ್ನು ನಾನು ತೆಗೆದುಕೊಳ್ಳುವುದಿಲ್ಲ. ನನಗೆ ನನ್ನ ಸಿನಿಮಾ ಭವಿಷ್ಯ, ನನ್ನ ಕುಟುಂಬ ತುಂಬಾ ಮುಖ್ಯ. ನಾನು ನನ್ನ ಜೀವನಕ್ಕೆ ಮಾತ್ರ ಜವಾಬ್ದಾರನು. ಬೇರೆಯವರ ಜೀವನದ ಬಗ್ಗೆ ನಾನು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಹಾಗಂದ ಮಾತ್ರಕ್ಕೆ ಆ ಸಂಬಂಧದಿಂದ ದೂರ ಇರಲ್ಲ ನಮ್ಮ ನಡುವೆ ಸ್ನೇಹ ಇದ್ದೇ ಇರುತ್ತದೆ' ಎಂದು ವಿನಯ್ ಗೌಡ ಹೇಳಿದ್ದಾರೆ.

ಇನ್ನು ಈ ಹಿಂದೆ ತಮ್ಮ ಜೈಲಿನ ಅನುಭವ ಬಿಚ್ಚಿಟ್ಟ ವಿನಯ್ ಗೌಡ, 'ನನಗೂ ರಜತ್‌ಗೂ ಇಬ್ಬರಿಗೂ ಅದು ಹೊಸ ಅನುಭವ. ನಾನು ಮಾಡಿದ ರೀಲ್ಸ್ ಯಾವಾಗ ತಪ್ಪು ಅಂತಾ ಅನಿಸಿತು ಅಂದರೆ ಅಲ್ಲಿಗೆ ಹೋದಾಗ ನನಗೆ ಅರಿವಾಯ್ತು. ಏಕೆಂದರೆ ಈ ಹದಿನೆಂಟು- ಹತ್ತೊಂಬತ್ತು ವರ್ಷದ ಹುಡುಗರು ತುಂಬಾ ಫಾಲೋ ಮಾಡುತ್ತಾರೆ. ಇಂತಹ ವಿಡಿಯೋಗಳನ್ನು, ಸೆಲೆಬ್ರೆಟಿಗಳನ್ನು, ಅವರು ಮಾಡುವ ವಿಡಿಯೋಗಳನ್ನು ತುಂಬಾ ಫಾಲೋ ಮಾಡುತ್ತಾರೆ. ಪರಪ್ಪನ ಅಗ್ರಹಾರದಲ್ಲಿ ಚಿಕ್ಕ ವಯಸ್ಸಿನ ಹುಡುಗರನ್ನು ತುಂಬಾ ನೋಡಿದೆ. ಅವರೆಲ್ಲಾ ಡ್ರಗ್ ವ್ಯಸನಿಗಳು. ನನಗೆ ಆ ಜಾಗಾನೂ ಹೊಸದು, ಆ ಅನುಭವನೂ ಹೊಸದು. ಅದನೆಲ್ಲಾ ನೋಡಿದ ಅನುಭವಾಯ್ತು. ಜೊತೆ ಅರಿವಾಯ್ತು ಕೂಡ' ಎಂದು ಹೇಳಿದ್ದರು.












Click it and Unblock the Notifications