"ರಾಕಿಭಾಯ್, ಪುಷ್ಪ ತರ ಹೀರೋಗಳು ಸಿಕ್ಕರೆ ಲಾಠಿ ರುಚಿ ತೋರಿಸ್ತೀವಿ"
ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ "ಕೆಜಿಎಫ್" ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಸೌಂಡ್ ಮಾಡಿತ್ತು. ಇದರಲ್ಲಿ ಯಶ್ ಮಾಡಿದ್ದ ರಾಕಿಭಾಯ್ ಪಾತ್ರಕ್ಕೆ ದೊಡ್ಡ ಫ್ಯಾನ್ ಬೇಸ್ ಇದೆ. ಯಶ್ ಅವರನ್ನು ಈಗೆಲ್ಲ ರಾಕಿಭಾಯ್ ಅಂತಲೇ ಜನ ಕರೆಯುತ್ತಾರೆ. ಇನ್ನು ನಟ ಅಲ್ಲು ಅರ್ಜುನ್ ನಟನೆಯ "ಪುಷ್ಪ" ಸಿನಿಮಾ ಕೂಡ ದೊಡ್ಡ ಹಿಟ್ ಕಂಡಿತ್ತು. ಅಲ್ಲು ಅವರ ಪುಷ್ಪ ಪಾತ್ರ, ಡೈಲಾಗ್‌ಗಳು ಕೂಡ ಜನರ ಬಾಯಲ್ಲೇ ಇದೆ. ರಾಕಿಭಾಯ್ ಗ್ಯಾಂಗ್‌ಸ್ಟರ್ ಪಾತ್ರವಾದರೆ, ಪುಷ್ಪ ಸ್ಮಗ್ಲರ್ ಪಾತ್ರ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ. ರಾಕಿಭಾಯ್, ಪುಷ್ಪ ಅಂತವರು ಸಿಕ್ಕರೆ ಲಾಠಿ ರುಚಿ ತೋರಿಸ್ತೀವಿ ಎಂದಿರುವ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಡಿಯೋರಿಯಾ ಎಸ್ಪಿ ಸಂಜೀವ್ ಸುಮನ್ ಅವರು ಕಾರ್ಯಕ್ರಮವೊಂದರಲ್ಲಿ ಕೆಜಿಎಫ್, ಪುಷ್ಪ ಸಿನಿಮಾಗಳ ಡೈಲಾಗ್ ಹೊಡೆಯುವ ಮೂಲಕ ಗಮನ ಸೆಳೆದಿದ್ದಾರೆ. "ಪುಷ್ಪ ತಗ್ಗೋದೆ ಇಲ್ಲ", ಪುಷ್ಪ ಮತ್ತು ರಾಕಿಭಾಯ್ ಅಂತಹ ಹೀರೋಗಳು ನಮಗೆ ಸಿಕ್ಕರೆ, ಅವರನ್ನು ಸರಿಪಡಿಸಲು ನಾವು ಕೋಲುಗಳಿಂದ ಹೊಡೆಯುತ್ತೇವೆ" ಎಂದಿದ್ದಾರೆ. ಮಾಧ್ಯಮಗಳು ಅಂತಹ ಸಿನಿಮಾಗಳ ನಕಾರಾತ್ಮಕ ಪ್ರಚಾರಗಳನ್ನು ಸಕಾರಾತ್ಮಕ ಬೆಳಕಿನಲ್ಲಿ ತೋರಿಸುತ್ತವೆ. ಈಗಿನ ಕಾಲದ ಹುಡುಗರು ಮತ್ತು ಹುಡುಗಿಯರು ಇದನ್ನೇ ಇಷ್ಟಪಡುತ್ತಿದ್ದಾರೆ ಎಂದಿದ್ದಾರೆ.

ಇತ್ತೀಚಿನ ಸಿನಿಮಾಗಳಲ್ಲಿ ನಕಾರಾತ್ಮಕ ಕಥೆಗಳನ್ನು ಹೆಚ್ಚಾಗಿ ಪ್ರದರ್ಶಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದ ಅವರು, ನಕಾರಾತ್ಮಕ ಪಾತ್ರಗಳ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಿದ್ದಾರೆ. ಒಟ್ಟಾರೆ ಎಸ್‌ಪಿ ಅವರ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈಗಿನ ಸಿನಿಮಾಗಳಲ್ಲಿ ಮದ್ಯಪಾನ ಮಾಡುವವರು, ಸಿಗರೇಟ್ ಸೇದುವವರು ಮತ್ತು ಗೂಂಡಾಗಿರಿಯಲ್ಲಿ ತೊಡಗುವವರನ್ನು ಹೀರೋಗಳನ್ನಾಗಿ ಮಾಡುತ್ತಿದ್ದಾರೆ. ಪುಷ್ಪ ಒಬ್ಬ ಹೀರೋ, ಆದರೆ ನಾವು ಪೊಲೀಸ್ ಅಧಿಕಾರಿಗಳು ಅಂತಹ ಹೀರೋನನ್ನು ಕಂಡುಕೊಂಡರೆ, ನಾವು ಅವರನ್ನು ಲಾಠಿಗಳಿಂದ ಹೊಡೆದು ಸರಿಪಡಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಎಚ್ಚರಿಕೆ ಕೊಟ್ಟಿದ್ದಾರೆ.
ಯುವಜನರಿಗೆ ಅದೇ ಇಷ್ಟವಾಗುತ್ತೆ
ಇನ್ನು ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಇದ್ದಾರೆ. ಮಾಧ್ಯಮಗಳು ಅಂತಹ ಚಿತ್ರಗಳ ನಕಾರಾತ್ಮಕ ಪ್ರಚಾರಗಳನ್ನು ಸಕಾರಾತ್ಮಕ ಬೆಳಕಿನಲ್ಲಿ ತೋರಿಸುತ್ತವೆ. ಈಗಿನ ಯುವಜನರು ಕೂಡ ಅಂತಹ ಪಾತ್ರಗಳನ್ನೇ ಇಷ್ಟಪಡುತ್ತಿದ್ದಾರೆ. ಇದರಿಂದಾಗಿ ಚಲನಚಿತ್ರ ನಿರ್ಮಾಪಕರು ಎಲ್ಲ ಸಕಾರಾತ್ಮಕ ವಿಷಯಗಳನ್ನು ಬಿಟ್ಟು, ನಕಾರಾತ್ಮಕ ವಿಷಯಗಳನ್ನು ಹೆಚ್ಚಾಗಿ ತೋರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಓದುವ ಮಕ್ಕಳನ್ನು ಖಳನಾಯಕರಂತೆ ತೋರಿಸಲಾಗುತ್ತಿದೆ. ಆದರೆ ಮದ್ಯಪಾನ ಮಾಡುವ, ಸಿಗರೇಟ್ ಸೇದುವ ಮತ್ತು ಗೂಂಡಾಗಿರಿಯಲ್ಲಿ ತೊಡಗುವವರನ್ನು ಹೀರೋಗಳಂತೆ ಚಿತ್ರಿಸಲಾಗುತ್ತಿದೆ. ಇದು ಮಹಿಳೆಯರು ಮತ್ತು ಪುರುಷರು ಇಬ್ಬರ ಮೇಲೂ ಪರಿಣಾಮ ಬೀರುತ್ತಿದೆ. ಸಿನಿಮಾಕ್ಕಿಂತ ನಿಜಜೀವನ ಭಿನ್ನ. ಆದ್ದರಿಂದ ನಿಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ತನ್ನಿರಿ ಎಂದು ಕಿವಿಮಾತು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಶ್ ಹಾಗೂ ಅಲ್ಲು ಅರ್ಜುನ್ ಫ್ಯಾನ್ಸ್ ಈ ಹೇಳಿಕೆಗೆ ಗರಂ ಆಗಿದ್ದು, ಪೊಲೀಸ್ ಅಧಿಕಾರಿಯ ಮಾತುಗಳು ಸತ್ಯ ಎಂದೂ ಹಲವರು ಬೆನ್ನಿಗೆ ನಿಂತಿದ್ದಾರೆ.












Click it and Unblock the Notifications