ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ಸಮಿತಿ ರಚನೆಗೆ ಇಂದು ಮಹತ್ವದ ಸಭೆ
ಬೆಂಗಳೂರು, ಸೆಪ್ಟೆಂಬರ್ 16: ಲೈಂಗಿಕ ದೌರ್ಜನ್ಯ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫೈರ್ ಸಂಸ್ಥೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬೇಡಿಕೆ ಹಾಗೂ ಲೈಂಗಿಕ ಶೋಷಣೆ ಬಗ್ಗೆ ಕೇಳಿ ಬರುತ್ತಿರುವ ಆರೋಪದ ಬಗ್ಗೆ ತಿಳಿಯಲು ಸಮಿತಿ ರಚಿಸುವ ಕುರಿತಾಗಿ ಇಂದು ಮಹತ್ವದ ಸಭೆ ನಡೆಯಲಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು( ಸೆಪ್ಟೆಂಬರ್ 16) ಸೋಮವಾರ ಸಭೆ ಕರೆದಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಸಭೆ ಕರೆದಿದ್ದು, ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ಶೋಷಣೆಯ ಕುರಿತು ಚರ್ಚೆ ನಡೆಯಲಿದೆ.

ಇನ್ನು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಿತಿ ರಚಿಸುವಂತೆ ಫೈರ್ ಸಂಸ್ಥೆ ಪತ್ರ ಬರೆದಿತ್ತು. ಫೈರ್ ಸಂಸ್ಥೆಯ ಮಹತ್ವದ ಹೆಜ್ಜೆಗೆ ಕನ್ನಡ ಚಿತ್ರರಂಗದ ನಟರು, ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿವಿಧ ವಿಭಾಗಗಳ ತಂತ್ರಜ್ಞರು ಸಾಥ್ ನೀಡಿದ್ದರು. ಆದರೆ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಇದುವರೆಗೆ ಯಾವುದೇ ರೂಪದಲ್ಲಿ ದೂರುಗಳು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸಭೆ ಕರೆದಿರುವ ವಾಣಿಜ್ಯ ಮಂಡಳಿ ಮಹಿಳಾ ಆಯೋಗದ ಅಧಿಕಾರಿಗಳ ಜೊತೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದೆ.
ರಾಜ್ಯ ಮಹಿಳಾ ಆಯೋಗದ ನೇತೃತ್ವದಲ್ಲಿ ವಾಣಿಜ್ಯ ಮಂಡಳಿ ಆಯೋಜಿಸಿರುವ ಇಂದಿನ ಸಭೆಯಲ್ಲಿ ನೂರಕ್ಕೂ ಅಧಿಕ ಕಲಾವಿದರು, ಚಿತ್ರರಂಗದ ಗಣ್ಯರು ಹಾಗೂ ಮಹಿಳಾ ಆಯೋಗದ ಅಧ್ಯಕ್ಷರು ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಸಮಿತಿ ರಚನೆ ಬೇಡಿಕೆ ಬಗ್ಗೆ ಚರ್ಚಿಸಿ ವಾಣಿಜ್ಯ ಮಂಡಳಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.
ನಟ-ನಟಿಯರು ಸಾಥ್ ನೀಡಿರುವ ಫೈರ್ ಸಂಸ್ಥೆಯ ಬೇಡಿಕೆಗಳೇನು..?
* ಲೈಂಗಿಕ ಕಿರುಕುಳ ಸೇರಿದಂತೆ ಕನ್ನಡ ಚಲನಚಿತ್ರೋದ್ಯಮದಲ್ಲಿ (ಕೆಎಫ್‌ಐ) ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ತನಿಖೆ ಮಾಡುವುದು.
2. ಚಿತ್ರೋದ್ಯಮದಲ್ಲಿ ಮಹಿಳೆಯರಿಗೂ ಸುರಕ್ಷಿತವಾದ ಮತ್ತು ನ್ಯಾಯಯುತವಾದ ವಾತಾವರಣವನ್ನು ಸೃಷ್ಟಿಸಲು ಅದಕ್ಕೆ ತಕ್ಕ ಪಾಲಿಸಿಗಳನ್ನು ರಚಿಸುವುದು. ಈ ಸಮಿತಿಯ ನೇತೃತ್ವ ವಹಿಸಲು ತಮ್ಮ ವೃತ್ತಿ ಜೀವನದುದ್ದಕ್ಕೂ ಲಿಂಗ ಸಮಾನತೆಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವಂತೆ ಫೈರ್ ಸಂಸ್ಥೆ ಮನವಿ ಮಾಡಿಕೊಂಡಿದೆ.












Click it and Unblock the Notifications